BJP vs BJP: ವಿಜಯೇಂದ್ರಗೆ ಬಿಜೆಪಿ ಭ್ರಷ್ಟ ಲೇಬಲ್: ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯ ಸೀಕ್ರೆಟ್ ರಿವೀಲ್
ಅಥಣಿ, ಸೆಪ್ಟಂಬರ್ 16: ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರಕ್ಕಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಮನ್ವಯ ಸಭೆ ನಡೆದಿದ್ದು, ಅದರಲ್ಲಿ ಚರ್ಚೆಗಳ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ. ನಮಗೆ ಬಿಎಸ್ ಯೂಡಿಯೂರಪ್ಪನವರ ಮೇಲೆ ಅಪಾರ ಗೌರವ ಇದೆ. ಆದರೆ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಇನ್ನೂ ಜ್ಯೂನಿಯರ್ ಎಂದು ಹೇಳಿದ್ದಾರೆ. ಇದು ಬಿಜೆಪಿ ಪಾಳಯದಲ್ಲಿ ಸಾಕಷ್ಟು ಸಂಚಲನ ಮೂಡಿಸಲಿದೆ.
ಅಥಣಿಯಲ್ಲಿ ಸೋಮವಾರ ಸಮನ್ವಯ ಸಭೆ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಸಭೆಯಲ್ಲಿ ಏನೇನು ಚರ್ಚೆ ಆಯಿತೆಂದು ಹೇಳಲು ಆಗದು. ಸಭೆಯಲ್ಲಿ ಯಾರನ್ನು ಯಾರನ್ನು ಬೈದರು ಎಂದು ಹೇಳಲು ಬಾರದು. ತಪ್ಪು ಮಾಡಿದವರನ್ನು ಸಭೆಯಲ್ಲಿ ಮುಖಂಡರು ಬೈದಿದ್ದಾರೆ.

ವಿಜಯೇಂದ್ರ ಜೂನಿಯರ್, ಅವನಿಗೆ ಸಿದ್ಧಾಂತ ಇಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಅಧ್ಯಕ್ಷ ಸ್ಥಾನವನ್ನು ಎಂದು ನಾನು ಒಪ್ಪುವುದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು. ವಿಜಯೇಂದ್ರ ಪಕ್ಷದಲ್ಲಿ ಜೂನಿಯರ್, ಅವನಿಗೆ ಏನು ಐಡಿಯಾಲಜಿ (ಸಿದ್ಧಾಂತ) ಇಲ್ಲ ಎಂದು ಏಕವಚನದಲ್ಲಿಯೇ ರಮೇಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ಬಿವೈ ವಿಜಯೇಂದ್ರನಿಗೆ ಪಕ್ಷದ ಭ್ರಷ್ಟ ಎಂಬ ಲೇಬಲ್ ಅಷ್ಟೆ ಇದೆ. ಅವನಿಗೆ ಐಡಿಯಾಲಜಿ ಇಲ್ಲ. ಪಕ್ಷ ಭ್ರಷ್ಟ ಎಂಬ ಲೇಬಲ್ ಹೆಸರು ತಂದುಕೊಟ್ಟಿದ್ದು ವಿಜಯೇಂದ್ರ. ಅವನು ಅಧ್ಯಕ್ಷ ಆಗಿದ್ದಕ್ಕೆ ನನಗೆ ವಿರೋಧವಿದೆ. ನಾನು ಯಡಿಯೂರಪ್ಪನವರಿಗೆ ಯಾವತ್ತೂ ವಿರೋಧಿ ಅಲ್ಲ. ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪರ ಬಗ್ಗೆ ನಮಗೆ ತುಂಬಾ ಗೌರವವಿದೆ. ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ನಾಯಕರಿಗೆ ಎಚ್ಚರಿಕೆ ಕೊಟ್ಟ ಸಾಹುಕಾರ್
ದಿವಂಗತ ಕೇಂದ್ರ ಮಾಜಿ ಸಚಿವ ಅನಂತ್ ಕುಮಾರ್ ಅವರು ತೀರಿಕೊಂಡ ಮೇಲೆ ಬಿಜೆಪಿಯಲ್ಲಿ ಯಾರು ಪ್ರಬಲ ನಾಯಕನಾಗಿಲ್ಲ. ಬಿಜೆಪಿ ಎಂಬುದು ಒಬ್ಬರ ಕೈಯಲ್ಲಿ ಆಡಳಿತ ಕೊಡುವುದು ಬೇಡ. ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಮೊನ್ನೆ ಸಭೆಯಲ್ಲಿ ಮನವಿ ಮಾಡಿದ್ದೇವೆ. ಒಬ್ಬರ ಕೈಗೆ ಪಕ್ಷ ಸಿಕ್ಕರೆ ನಾನು ಕೂಡ ಎರಡನೇ ಯಡಿಯೂರಪ್ಪನಾಗುತ್ತೇನೆ ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ.
ಸಾಮೂಹಿಕ ನಾಯಕತ್ವಕ್ಕೆ ಪಕ್ಷ ವಹಿಸಲು ಮನವಿ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕೂತರೇ ಸರ್ವಾಧಿಕಾರ ಧೋರಣೆ ಬರುತ್ತದೆ. 15 ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ಪಕ್ಷದ ಲೀಡರ್‌ಶಿಪ್ ಕೊಡುವಂತೆ ಮನವಿ ಮಾಡಿದ್ದೇವೆ. ಸಾಮೂಹಿಕ ನಾಯಕತ್ವ ಕೊಟ್ಟ ಮೇಲೆ ಬಿಜೆಪಿ ವರಿಷ್ಠರು ನೀವು ನಮಗೆ ಟಾಸ್ಕ್ ಕೊಡಿ ಎಂದು ಮನವಿ ಮಾಡಿದ್ದೇವೆ ಎಂದರು.
ನೀವು ಸಾಮೂಹಿಕ ನಾಯಕತ್ವದ ಕೈಲಿ ಪಕ್ಷದ ನಾಯಕತ್ವವನ್ನು ಕೊಟ್ಟರೆ, 120 ರಿಂದ 130 ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಶಕ್ತಿ ನಮ್ಮಲ್ಲಿದೆ. ನಾನು ಕೂಡ ಮೊನ್ನೆ ಸಂಘ ಪರಿವಾರದ ಸಭೆಯಲ್ಲಿ ಅದನ್ನೇ ಹೇಳಿದ್ದೇನೆ. ವರಿಷ್ಠರು ಕೊಟ್ಟಂತಹ ಟಾಸ್ಕ್ ನಲ್ಲಿ ಫೇಲಾದರೆ ನಮ್ಮನ್ನು ಒದ್ದು ಹೊರಗಾಕಿ ಎಂದು ತಿಳಿಸಿದ್ದೇವೆ ಎಂದು ಸಭೆಯಲ್ಲಿ ಮನವಿ ಮಾಡಿದ ಅಂಶಗಳನ್ನು ವಿವರಿಸಿದರು.
ಪಕ್ಷ ಕಟ್ಟಿ ಬೆಳೆಸಿದ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು ,ಅವರಿಗೆ ವಿಶ್ರಾಂತಿ ಅಗತ್ಯವಿದೆ. ಸಾಮೂಹಿಕ ನಾಯಕತ್ವದ ಸಿಕ್ಕ ಮೇಲೆ ನಮಗೆ ಸಲಹೆ, ಸೂಚನೆಗಳು ಬೇಕಾದಲ್ಲಿ ನಾವೇ ಅವರ ಮನೆಗೆ ಪಡೆದುಕೊಂಡು ಬರುತ್ತೇವೆ ಎಂದು ಬಿವೈ ವಿಜಯೇಂದ್ರ ಮೇಲಿನ ಅಸಮಾಧಾನವನ್ನು ಅವರು ಹೊರ ಹಾಕಿದರು.












Click it and Unblock the Notifications