Belagavi: ಬಿಜೆಪಿ 1ನೇ ಪಟ್ಟಿಯಲ್ಲಿ ಇಬ್ಬರು ಹಾಲಿ ಶಾಸಕರಿಗೆ ಕೋಕ್, 7 ಮಂದಿ ಹೊಸಬರಿಗೆ ಮಣೆ, ಯಾರವರು?
ಬೆಂಗಳೂರು, ಏಪ್ರಿಲ್ 12: ಆಡಳಿತ ಪಕ್ಷ ಬಿಜೆಪಿಯಿಂದ 2023ರ ವಿಧಾನಸಭಾ ಚುನಾವಣೆ ಸಂಬಂಧ 189 ಕ್ಷೇತ್ರಗಳಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬುವವರ ಹೆಸರಿನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ಏಳು ಮಂದಿ ಹೊಸಬರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಬಿಜೆಪಿ ಮೊದಲ ಪಟ್ಟಿಯಲ್ಲಿ ರಾಜ್ಯದ ಬೃಹತ್ ಜಿಲ್ಲೆ ಎನ್ನಲಾಗುವ ಬೆಳಗಾವಿಯ 18 ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆಗಿದೆ. ಇಲ್ಲಿ ಯಾರಿಗೆಲ್ಲ ಟಿಕೆಟ್ ಕೈತಪ್ಪಿದೆ. ಕಣಕ್ಕಿಳಿಯಲಿರುವ ಹೊಸಬರು ಯಾರೆಂದು ಇಲ್ಲಿ ತಿಳಿಯೋಣ.

ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಒಟ್ಟು ಏಳು ಕ್ಷೇತ್ರಗಳಿಂದ ಹೊಸಬರು ಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆ. ಬಿಜೆಪಿ ಮೊದಲ ಪಟ್ಟಿಯಲ್ಲಿ ಜಿಲ್ಲೆ ನೀಡಿದ ಆದ್ಯತೆಯು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.
ಹಾಲಿ ಶಾಸಕರೆಂದರೆ ಶಾಸಕ ಅನಿಲ್ ಬೆನಕೆ ಹಾಗೂ ಮಹಾದೇವಪ್ಪ ಯಾದವಾಡ. ಅವರು ಕ್ರಮವಾಗಿ ಬೆಳಗಾವಿ ಉತ್ತರ ಮತ್ತು ರಾಮದುರ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಬಿಜೆಪಿ ಈ ಸಲ ಬೆಳಗಾವಿ ಉತ್ತರದ ಟಿಕೆಟ್ ಅನ್ನು ಲಿಂಗಾಯತ ಸಮುದಾಯದ ಡಾ.ರವಿ. ಪಾಟೀಲ್ ಅವರಿಗೆ ಮತ್ತು ಹೊರಗಿನಿಂದ ಬಂದ ಚಿಕ್ಕರೇವಣ್ಣ ಅವರಿಗೆ ಟಿಕೆಟ್ ಧಕ್ಕಿದೆ.
ಸಚಿವರಾಗಿದ್ದ ಉಮೇಶ ಕತ್ತಿ ಅವರ ಪುತ್ರ ನಿಖಿಲ್ ಅವರಿಗ ಹುಕ್ಕೇರಿ ಕ್ಷೇತ್ರದ ಟಿಕೆಟ್ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷರಾಗಿದ್ದ ಆನಂದ ಮಾಮನಿ ಅವರ ಪತ್ನಿ ರತ್ನಾ ಅವರಿಗೆ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಈ ಮೂಲಕ ಇವೆರಡು ಕ್ಷೇತ್ರದಲ್ಲಿ ಅನುಕಂಪದ ಆಧಾರದಲ್ಲಿ ಮತಗಿಟ್ಟಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.

ಸಾಹುಕಾರ್ ಹಟಕ್ಕೆ ಜಯ: 3 ಟಿಕೆಟ್ ಘೋಷಣೆ
ಇನ್ನೂ ಮಾಜಿ ಸಚಿವ ಗೋಕಾಕ್ ಶಾಸಕ ಸಾಹುಕಾರ್ ರಮೇಶ್ ಜಾರಕಿಹೊಳಿ ಹಟಕ್ಕೆ ಯಶಸ್ಸು ಸಿಕ್ಕಿದೆ. ಅವರು ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಜಾರಕಿಹೊಳಿ ಗುರುತಿಸಿದ್ದರು.
ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದ ಅಥಣಿ ಶಾಸಕ ಮಹೇಶ ಕುಮಠಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಟಿಕೆಟ್ ಪಡೆದಿದ್ದಾರೆ.
ಇನ್ನೂ ಮೂರನೇಯವರಾದ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರಿಗೂ ಟಿಕೆಟ್ ಲಭಿಸಿದೆ. ಇವರಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಮಣಿಸಲು ಸಾಹುಕಾರ್ ಪ್ಲಾನ್ ಮಾಡಿದ್ದಾರೆ ಅದರಂತೆ ಟಿಕೆಟ್ ಕೊಡಿಸುವಲ್ಲಿ ಅವರಿಗೆ ಜಯ ಸಿಕ್ಕಿದೆ.
ಒಂದೇ ಕುಟುಂಬಕ್ಕೆ ಎರಡು ಟಿಕೆಟ್ ಘೋಷಣೆ
ಉಮೇಶ ಕತ್ತಿ ಅವರ ಪುತ್ರ ನಿಖಿಲ್ ಹಾಗೂ ಸಹೋದರ ರಮೇಶ ಮಧ್ಯೆ ಟಿಕೆಟ್ ಪೈಪೋಟಿ ನಡೆದಿತ್ತು. ಅವರಿಬ್ಬರಿಗೂ ಅಕ್ಕಪಕ್ಕ ಕ್ಷೇತ್ರಗಳ ಟಿಕೆಟ್ ಘೋಷಣೆ ಆಗಿದೆ. ಲಿಂಗಾಯತ ಸಮುದಾಯದವರಾದ ಗಣೇಶ ಹುಕ್ಕೇರಿ ಅವರ ವಿರುದ್ಧ ಅದೇ ಸಮುದಾಯದ ರಮೇಶ ಕತ್ತಿ ಸಮರ್ಥ ಅಭ್ಯರ್ಥಿ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ಘೋಷಣೆ ಆಗಿದೆ. ಯಮಕನಮರಡಿ ಕ್ಷೇತ್ರದಿಂದ ಹೊಸಬ ಬಸವರಾಜ ಹುಂದ್ರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಇನ್ನೂ ಬೈಲಹೊಂಗಲ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದ ಜಗದೀಶ ಮೆಟಗುಡ್ಡ ಅವರಿಗೆ ಈ ಬಾರಿಯು ಟಿಕೆಟ್ ನೀಡಲಾಗಿದೆ. ಇದರಿಂದಾಗಿ ಯಡಿಯೂರಪ್ಪ ಆಪ್ತ ಎನ್ನಲಾಗುವ ಡಾ.ವಿಶ್ವನಾಥ ಪಾಟೀಲ ಬಂಡಾಯ ಏಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಖಾನಾಪುರದಿಂದ ವಿಠಲ ಹಲಗೇಕರ ಅವರೇ ಮತ್ತೆ ಅದೃಷ್ಟ ಪರೀಕ್ಷೆ ಇಳಿಯಲಿದ್ದಾರೆ.
ಟಿಕೆಟ್ ಪಡೆದ ಹಾಲಿ ಶಾಸಕರು: ಗೋಕಾಕ್‌ನಿಂದ ರಮೇಶ ಜಾರಕಿಹೊಳಿ, ಅರಭಾವಿಯಿಂದ ಬಾಲಚಂದ್ರ ಜಾರಕಿಹೊಳಿ, ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ, ರಾಯಬಾಗನಿಂದ ದುರ್ಯೋಧನ ಐಹೊಳೆ, ಕುಡಚಿ ಕ್ಷೇತ್ರದಿಂದ ಪಿ.ರಾಜೀವ್, ಚನ್ನಮ್ಮನ ಕಿತ್ತೂರು ಮಹಾಂತೇಶ ದೊಡ್ಡಗೌಡರ, ಬೆಳಗಾವಿ ದಕ್ಷಿಣದಿಂದ ಅಭಯ ಪಾಟೀಲ ಅವರಿಗೆ ಟಿಕೆಟ್ ದೊರೆತಿದೆ.












Click it and Unblock the Notifications