‘ಉತ್ತರ ಕರ್ನಾಟಕದ ನಾಯಕರನ್ನು ಬಿಜೆಪಿ ಕಡೆಗಣಿಸುತ್ತಿದೆ’: ಚುನಾವಣೆ ಬಳಿಕ ಪಕ್ಷಕ್ಕೆ ಹಿನ್ನಡೆಯಾಗುವ ಸುಳಿವು ನೀಡಿದ ಯತ್ನಾಳ್
ಬೆಳಗಾವಿ ಡಿಸೆಂಬರ್ 4: ಚಳಿಗಾಲದ ಅಧಿವೇಶನದ ಮೊದಲ ದಿನವೇ ವಂಶಾಡಳಿತ ರಾಜಕಾರಣದ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ ವಾಗ್ದಾಳಿ ನಡೆಸಿದ್ದಾರೆ. ವಂಶಾಡಳಿತ ರಾಜ್ಯ ಹಾಗೂ ರಾಷ್ಟ್ರವನ್ನೇ ಸರ್ವನಾಶ ಮಾಡಲಿದೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ಉತ್ತರ ಕರ್ನಾಟಕದ ಒಬ್ಬ ನಾಯಕನಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನವನ್ನು ನೀಡುಬೇಕು ಎಂದು ಯತ್ನಾಳ್ ಒತ್ತಾಯಿಸಿದ್ದಾರೆ. ಅಲ್ಲಿಯವರೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಿದರು. ಹೊಸದಾಗಿ ನೇಮಕಗೊಂಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಗುರಿಯಾಗಿಸಿ ಮಾತನಾಡಿದ ಯತ್ನಾಳ್, 'ಸವಲತ್ತು ಹೊಂದಿರುವವರು' ಮಾತ್ರ ಪ್ರಮುಖ ಹುದ್ದೆಗಳನ್ನು ಪಡೆಯುತ್ತಿದ್ದಾರೆ ಎಂದು ಕುಟುಕಿದ್ದಾರೆ.

"ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹನಾಗಿದ್ದೆ ಆದರೆ ಕಡೆಗಣಿಸಲಾಗಿದೆ. ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರ ಪ್ರಕರಣಗಳು ಅಥವಾ ಅಂತಹ ಯಾವುದೇ ಪ್ರಕರಣಗಳಿಲ್ಲ. ಯತ್ನಾಳ್‌ಗೆ ಮಹತ್ವದ ಹುದ್ದೆ ನೀಡಬೇಕೆಂದು ರಾಜ್ಯದ ಜನತೆ ಒತ್ತಾಯಿಸುತ್ತಿದ್ದಾರೆ. ಕೆಲವರು ಮಾತ್ರ ಇಂತಹ ಸವಲತ್ತುಗಳು ಮಾತ್ರ ಏಕೆ ಪಡೆಯಬೇಕು? " ಎಂದು ಯತ್ನಾಳ್ ಸ್ವಪಕ್ಷದ ನಾಯಕರ ವಿರುದ್ಧ ಗುಡುಗಿದ್ದಾರೆ.
ಹೀಗಾಗಿ ಉತ್ತರ ಕರ್ನಾಟಕದ ನಾಯಕರನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದ್ದಾರೆ. "ರಾಜ್ಯಾಧ್ಯಕ್ಷರು ಹಳೆ ಮೈಸೂರು ಭಾಗದವರು, ವಿರೋಧ ಪಕ್ಷದ ನಾಯಕರು ಬೆಂಗಳೂರಿನವರು, ನಾನು ಶಾಸಕಾಂಗ ಪಕ್ಷದ ಸಭೆಗೆ ಏಕೆ ಹಾಜರಾಗಬೇಕು? ನಾನು ಅದಕ್ಕೆ ಹಾಜರಾಗುವುದಿಲ್ಲ. ನ್ಯಾಯ ಕೊಡಿಸುವುದಾಗಿ ಕೇಂದ್ರ ನಾಯಕರು ಭರವಸೆ ನೀಡಿದ್ದು, ಅದು ಈಡೇರದ ಹೊರತು ಸಭೆಗೆ ಹಾಜರಾಗುವುದಿಲ್ಲ. ಅವರಿಗೆ ಚುನಾವಣೆಯಲ್ಲಿ ಗೆಲ್ಲಲು ಉತ್ತರ ಕರ್ನಾಟಕದ ಶಾಸಕರು ಮತ್ತು ಸಂಸದರು ಬೇಕು ಆದರೆ ಪ್ರಮುಖ ಹುದ್ದೆಗಳನ್ನು ನೀಡಲು ಮಾತ್ರ ಬಯಸುವುದಿಲ್ಲ, ನ್ಯಾಯಕ್ಕಾಗಿ ನಾನು ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧನಿದ್ದೇನೆ'' ಎಂದು ಯತ್ನಾಳ್ ಕಿಡಿ ಕಾರಿದ್ದಾರೆ.
ಜೊತೆಗೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ನಂತರ ಪಕ್ಷದ ರಾಜ್ಯ ಘಟಕದಲ್ಲಿ ಹಲವು ಬದಲಾವಣೆಗಳಾಗಬಹುದು ಎಂದು ಯತ್ನಾಳ ಸುಳಿವು ನೀಡಿದ್ದಾರೆ.
ಯತ್ನಾಳ್ ಸೇರಿದಂತೆ ಸುನೀಲ್ ಕುಮಾರ್ ಮತ್ತು ರಮೇಶ್ ಜಾರಕಿಹೊಳಿ ಇನ್ನೂ ಕೆಲವು ನಾಯಕರು ವಿಜಯೇಂದ್ರ ಮತ್ತು ಆರ್ ಅಶೋಕ್ ಅವರನ್ನು ಕ್ರಮವಾಗಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿದ್ದಕ್ಕಾಗಿ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದರು. ಈಗಲೂ ಅಸಮಧಾನದ ಕಿಚ್ಚು ಬೂದಿ ಮುಚ್ಚಿದ ಕೆಂಡದಂತಿದೆ.












Click it and Unblock the Notifications