Ramdurg Ticket: ಟಿಕೆಟ್ ಕೈತಪ್ಪಿದ್ದಕ್ಕೆ ಶಾಸಕ ಮಹಾದೇವಪ್ಪ ಯಾದವಾಡ ಬೆಂಬಲಿಗರ ಆಕ್ರೋಶ, ಪ್ರತಿಭಟನೆ: ಇಂದು ಸಭೆ?
ಬೆಳಗಾವಿ, ಏಪ್ರಿಲ್ 12: ವಿಧಾನಸಭಾ ಚುನಾವಣೆ ಪ್ರಯುಕ್ತ ಬಹುನಿರೀಕ್ಷೆಯ ಆಡಳಿತಾರೂಢ ಬಿಜೆಪಿಯ 189 ಅಭ್ಯರ್ಥಿಗಳ ಮೊದಲ ಪಟ್ಟಿ ಮಂಗಳವಾರ ರಾತ್ರಿ ಬಿಡುಗಡೆಯಾಗಿದೆ. ಈ ಪೈಕಿ ಟಿಕೆಟ್ ಕೈ ತಪ್ಪಿದ್ದ ರಾಮದುರ್ಗ ಶಾಸಕ ಬೆಂಬಲಿಗರು ಆಕ್ರೋಶ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರವು ಆಗಿರುವ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 2018ರಲ್ಲಿ ಆಯ್ಕೆಯಾಗಿದ್ದ ಬಂದು ಆಡಳಿತ ನೀಡಿದ್ದ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಈ ಬಾರಿಯ ಟಿಕೆಟ್ ನೀಡಲಾಗಿಲ್ಲ.

ಟಿಕೆಟ್ ನೀಡದಿದ್ದಕ್ಕೆ ಆಕ್ರೋಶಗೊಂಡಿರುವ ಹಾಲಿ ಶಾಸಕ ಬೆಂಬಲಿಗರು ಮಂಗಳವಾರ ರಾತ್ರಿ ರಾಮದುರ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಾಸಕರ ಮನೆ ಮುಂದೆ ಜಮಾಯಿಸಿದ ಕಾರ್ಯಕರ್ತರು ಹಾಗೂ ಬೆಂಬಲಿಗರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಧಿಕ್ಕಾರ, ಯಡಿಯೂರಪ್ಪಗೆ ಧಿಕ್ಕಾರ ಎಂದು ಘೋಗಿದರು.
ಶಾಸಕ ಬೆಂಬಲಿಗರಿಂದ ಇಂದು ಸಭೆ ಸಾಧ್ಯತೆ
ತಮ್ಮ ನಾಯಕನಿಗೆ ಟಿಕೆಟ್ ನೀಡದ್ದಕ್ಕೆ ಕಿಡಿ ಕಾರಿರುವ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಪ್ರತಿಭಟನೆ ವೇಳೆಯಲ್ಲೇ ನಾಳೆ ಅಂದರೆ ಇಂದು ಬುಧವಾರ ಏಪ್ರಿಲ್ 12ರಂದು ಸಭೆ ಸೇರುವುದಾಗಿ ಹೇಳಿದರು. ಟಿಕೆಟ್ ಕೈ ತಪ್ಪಿದ್ದಕ್ಕೆ ಬಿಜೆಪಿಯನ್ನು ಪ್ರಶ್ನೆ ಮಾಡುವುದಾಗಿ ಅವರು ಕೂಗಾಡಿದ್ದಾರೆ.
ಬಿಜೆಪಿಯು ಒಟ್ಟು 189ಜನರಿಗೆ ಟಿಕೆಟ್ ನೀಡಿ ಕಳೆದ ಬಾರಿಗೆ ಚುನಾಯಿತರಾದ ನಮ್ಮ ನಾಯಕರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರಿಗೆ ಈ ಬಾರಿ ನೀಡಿಲ್ಲ ಏಕೆ? ಎಂದು ಶಾಸಕರ ಬೆಂಬಲಿಗರು ಪ್ರಶ್ನಿಸಿದ್ದಾರೆ. ಈ ಬಾರಿ ರಾಮದುರ್ಗ ಕ್ಷೇತ್ರಕ್ಕೆ ಬಿಜೆಪಿಯಿಂದ ಚಿಕ್ಕರೇವಣ್ಣ ಅವರಿಗೆ ಟಿಕೆಟ್ ಘೋಷಣೆ ಆಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮಹಾದೇವಪ್ಪ ಯಾದವಾಡ ಅವರು ಒಟ್ಟು 68349 ಮತಗಳಿಂದ ಜಯಗಳಿಸಿದ್ದರು. ಅವರ ವಿರುದ್ಧ ನಿಂತಿದ್ದ ಕಾಂಗ್ರೆಸ್ ನಾಯಕ ಪಿ ಎಂ. ಅಶೋಖ್ ಅವರು 65474 ಮತಗಳಿಂದ ಸೋಲು ಕಂಡಿದ್ದರು. ಪಕ್ಷೇತರ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಸಹ ಆಗ ಕಣಕ್ಕಿಳಿದು ಪರಾಭವಗೊಂಡಿದ್ದರು.
ಇನ್ನೂ 2013ರಲ್ಲಿ ಕಾಂಗ್ರೆಸ್‌ನ ಅಶೋಕ್ ಪಟ್ಟಣ ಅವರ ವಿರುದ್ಧ ಇದೇ ಮಹಾದೇವಪ್ಪ ಯಾದವಾಡ ಅವರು ಸೋಲು ಕಂಡಿದ್ದರು. ಅಶೋಕ ಪಟ್ಟಣ 42310 ಮತಗಳಿಸಿ ಗೆದ್ದರು, ಯಾದವಾಡ ಅವರು 37326 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದರು. ಈ ಬಾರಿ ಕಾಂಗ್ರೆಸ್ ತಂತ್ರದಿಂದ ಪಕ್ಷಕ್ಕೆ ಸೊಲಾಗಬಾರದೆಂದು ಬಿಜೆಪಿ ಹಾಲಿ ಶಾಸಕರನ್ನು ಬಿಟ್ಟು ಬೇರೆಯವರಿಗೆ ಮಣೆ ಹಾಕಿದೆ ಎನ್ನಲಾಗಿದೆ.
ಯಾದವಾಡ ಪ್ರಬಲ ಟಿಕೆಟ್ ಆಕಾಂಕ್ಷಿ
ಮಹಾದೇವಪ್ಪ ಯಾದವಾಡ ಅವರು ಈ ಬಾರಿಯು ಟಿಕೆಟ್ ಆಕಾಂಕ್ಷಿಯಾಗಿದ್ದರು. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುವ ಬಯಕೆ ಹೊಂದಿದ್ದರು. ಆದರೆ ಅವರಿಗೆ ಟಿಕೆಟ್ 2023ರ ಚುನಾವಣೆಯಲ್ಲಿ ಧಕ್ಕಿಲ್ಲ. ಈ ಸಂಬಂಧ ಅವರ ಬೆಂಬಲಿಗರು ಬುಧವಾರ ಸಭೆ ಸೇರಿಲಿದ್ದಾರೆ.
ಇದಾದ ಬಳಿಕ ಹಾಲಿ ಶಾಸಕರು ಮತ್ತೆ ಕೇಂದ್ರ ನಾಯಕರನ್ನಾಗಲಿ, ಇಲ್ಲವೇ ಕರ್ನಾಟಕದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಇಲ್ಲವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಟಿಕೆಟ್ ಮನವಿ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.
ತಾಲೂಕು ಕೇಂದ್ರವು ಆಗಿರುವ ಇಲ್ಲಿ ಶ್ರೀ ಗೊಡಚಿ ವೀರಭದ್ರೇಶ್ವರ ದೇವಾಲಯ ತುಂಬಾ ಪ್ರಸಿದ್ಧಿ ಪಡೆದಿದ್ದು, ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. 2011ರ ಜನಗಣತಿ ಪ್ರಕಾರ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಜನಸಂಖ್ಯೆ 31822 ಇದೆ.. ತಾಲೂಕಿನ ಕಿತ್ತೂರ ಗ್ರಾಮದ ಕಂಬಳಿಗಳು ಇಲ್ಲಿ ಖ್ಯಾತಿ ಪಡೆದಿದ್ದು, ಪ್ರತಿ ವರ್ಷಕ್ಕೊಮ್ಮೆ ಡಿಸೆಂಬರ್ ತಿಂಗಳಲ್ಲಿ ಗೊಡಚಿ ವೀರಭದ್ರೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ.












Click it and Unblock the Notifications