ಬೆಳಗಾವಿ : ಮಂಗಳವಾರ ಸದನದಲ್ಲಿ ಆಗಿದ್ದೇನು?
ಬೆಳಗಾವಿ, ಡಿ.3 : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಏಳನೇ ದಿನದ ಕಲಾಪ ಆರಂಭವಾಗಿದೆ. ಅಕ್ರಮ ಗಣಿಗಾರಿಕೆ ಆರೋಪದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂತೋಷ್ ಲಾಡ್ ಆರು ದಿನಗಳು ಸದನಕ್ಕೆ ಹಾಜರಾಗಿಲ್ಲ. ಮಂಗಳವಾರದ ಕಲಾಪದಿಂದಲೂ ಅವರು ದೂರ ಉಳಿದಿದ್ದಾರೆ.
ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ರಾಜಸ್ಥಾನದ ವಿಧಾನಸಭೆ ಚುನಾವಣೆಗೆ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದರು. ರಾಜಸ್ಥಾನದಲ್ಲಿ ಚುನಾವಣೆ ಡಿ.1ರಂದು ಪೂರ್ಣಗೊಂಡಿದ್ದು, ಶಿವಕುಮಾರ್ ಅವರು ಸದನಕ್ಕೆ ಆಗಮಿಸಿದ್ದಾರೆ. ಮೊದಲ ಆರು ದಿನಗಳ ಕಲಾಪಕ್ಕೆ ಶಿವಕುಮಾರ್ ಹಾಜರಾಗಿರಲಿಲ್ಲ. (ಮಂತ್ರಿ ಆಗ್ತೀನಿ ಅಂತ ಊಟಕ್ಕೆ ಕುಳಿತ ಡಿಕೆ ಶಿವಕುಮಾರ್)

ಇನ್ನೂ ಬೆಳಗಾವಿ ಅಧಿವೇಶನ ಆರಂಭವಾಗುವ ಎರಡು ದಿನಗಳ ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ವಾರ್ತಾ ಮತ್ತು ಮೂಲ ಸೌಕರ್ಯ ಸಚಿವ ಸಂತೋಷ್ ಲಾಡ್ ಅಧಿವೇಶನಕ್ಕೆ ಹಾಜರಾಗಿಲ್ಲ. ಅಧಿವೇಶನ ಆರಂಭವಾಗಿ ಆರು ದಿನಗಳು ಕಳೆದರೂ ಸಂತೋಷ್ ಲಾಡ್ ಸುವರ್ಣ ವಿಧಾನಸೌಧದಲ್ಲಿ ಕಾಣಿಸಿಕೊಂಡಿಲ್ಲ. (ಲಾಡ್ ರಾಜೀನಾಮೆ)
ಮಂಗಳವಾರದ ಕಲಾಪದ ಮುಖ್ಯಾಂಶಗಳು
* ಬೆಂಗಳೂರಿನ 198 ವಾರ್ಡ್ ಗಳಲ್ಲಿಯೂ ಬೆಂಗಳೂರು ಒನ್ ಸೇವಾ ಕೇಂದ್ರ ಆರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶಾಸಕ ಸೋಮಶೇಖರ್ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ 89 ಬೆಂಗಳೂರು ಒನ್ ಕೇಂದ್ರಗಳಿದ್ದು, 59 ಸೇವೆಗಳನ್ನು ಜನರಿಗೆ ಒದಗಿಸುತ್ತಿವೆ. ಕೆಲವು ವಾರ್ಡ್‌ಗಳಲ್ಲಿ ಎರಡು ಕೇಂದ್ರಗಳಿವೆ. ಕೆಲವು ವಾರ್ಡ್ ಗಳಲ್ಲಿ ಕೇಂದ್ರ ಸ್ಥಾಪನೆ ನಿವೇಶನ ಲಭ್ಯವಿಲ್ಲ. ಜಾಗ ದೊರೆತರೆ ಎಲ್ಲಾ ವಾರ್ಡ್‌ಗಳಲ್ಲೂ ಸೇವಾ ಕೇಂದ್ರ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
* ಬಿಟಿ ಹತ್ತಿ ತಳಿಯ ಕನಕ ಮತ್ತು ನಿಟ್ಟಿ ಪ್ಲಸ್ ಬೆಳೆದು ನಷ್ಟ ಅನುಭವಿಸಿರುವ ರೈತರಿಗೆ ಆಯಾ ಕಂಪೆನಿಗಳಿಂದ ಪರಿಹಾರ ಕೊಡಿಸುವುದಾಗಿ ಕೃಷಿ ಸಚಿವ ಕೃಷ್ಣಬೈರೇಗೌಡ ಭರವಸೆ ಹೇಳಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು, ಬೆಳೆ ನಷ್ಟ ಕುರಿತಂತೆ ಕಂದಾಯ ಇಲಾಖೆ, ಕೃಷಿ ವಿವಿ ತಜ್ಞರು ಹಾಗೂ ಆರ್ಥಿಕ ಇಲಾಖೆಯಿಂದ ಸಮೀಕ್ಷೆ ನಡೆಸಲಾಗಿದೆ. ಇನ್ನು 15 ದಿನಗಳಲ್ಲಿ ಪರಿಹಾರ ವಿತರಣೆ ಮಾಡಲಾಗುವುದು ಎಂದು ಹೇಳಿದರು. ಮಹಿಕೋ ಕಂಪೆನಿಯಿಂದ ಬೀಜ ಪಡೆದು ಬೆಳೆದಿರುವ ಬಿಟಿ ಹತ್ತಿ ಸಂಪೂರ್ಣ ನಾಶವಾಗಿದೆ. ಕಂಪನಿಗಳ ಜೊತೆ ಈ ಕುರಿತು ಮಾತುಕತೆ ನಡೆಸಲಾಗಿದೆ ಎಂದು ಅವರು ಹೇಳಿದರು.
* ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸುತ್ತಿರುವ ಅರ್ಕಾವತಿ ಬಡಾವಣೆಯನ್ನು 2014ರ ವೇಳೆಗೆ, ಕೆಂಪೇಗೌಡ ಬಡಾವಣೆಯನ್ನು 2016ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆ ಸಭೆಗೆ ತಿಳಿಸಿದ್ದಾರೆ. ಬಿಡಿಎ ವತಿಯಿಂದ ಬೆಂಗಳೂರಿನಲ್ಲಿ ಶಿವರಾಮ ಕಾರಂತ, ನಿಜಲಿಂಗಪ್ಪ ಮತ್ತು ಕೆ.ಸಿ.ರೆಡ್ಡಿ ಬಡಾವಣೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
* ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ನಿವಾರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ತಾಂತ್ರಿಕ ಗುಣಮಟ್ಟ ಹೆಚ್ಚಿಸಲು ಗಮನ ಹರಿಸಲಾಗಿದ್ದು, 16 ಸಾವಿರ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ಬಂಡಿಸಿದ್ದೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಉಪವಿಭಾಗ ಮಟ್ಟದಲ್ಲಿ ಟಿಸಿ ಬ್ಯಾಂಕ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಕೇರಳ, ಕೋಲ್ಕತ್ತಾ ಹಾಗೂ ಬೆಂಗಳೂರಿನ ಕವಿಕಾದಿಂದ ಒಟ್ಟು 16 ಸಾವಿರ ಟಿಸಿಗಳನ್ನು ಖರೀದಿಸಲಾಗುವುದು ಎಂದರು.
* ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಸುಪ್ರೀಂಕೋರ್ಟ್ ನಿರ್ದೇಶನದ ನಂತರ ತೆರವುಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 1986ರಲ್ಲಿ ಅರಮನೆ ಮೈದಾನವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಮೈಸೂರು ರಾಜ ವಂಶಸ್ಥರು ಪ್ರಶ್ನೆ ಮಾಡಿದ್ದರು. ಆದರೆ, ಸರ್ಕಾರ ಪರವಾಗಿ ತೀರ್ಪು ಬಂತು. ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದಾಗ ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಸೂಚಿಸಿತ್ತು ಎಂದರು.












Click it and Unblock the Notifications