ಗುರುವಾರದ ಕಲಾಪಕ್ಕೆ ಸಿಎಂ, ಸಚಿವರು ಗೈರು
ಬೆಳಗಾವಿ, ಡಿ. 5 : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಒಂಭತ್ತನೇ ದಿನದ ಕಲಾಪ ಗುರುವಾರ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಲವು ಸಚಿವರು ಕಲಾಪಕ್ಕೆ ಗೈರು ಹಾಜರಾಗಿದ್ದಾರೆ. ಪ್ರತಿಪಕ್ಷಗಳು ಸಿಎಂ ಗೈರು ಹಾಜರಿಯನ್ನು ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಗುರುವಾರ ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭಗೊಂಡಿತು. ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಎಂ ಸೇರಿದಂತೆ ಕೆಲವು ಸಚಿವರು ಸದನಕ್ಕೆ ಗೈರು ಹಾಜರಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. (ಬೆಂಗಳೂರಿಗೆ ಮರಳಿದ ಸಿಎಂ, ಅಧಿವೇಶನಕ್ಕೆ ಗೈರು)

ಸದನಕ್ಕೆ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ತುರ್ತು ಕೆಲಸದ ನಿಮಿತ್ತವಾಗಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ತೆರಳಿದ್ದಾರೆ. ಆದ್ದರಿಂದ ಕಲಾಪದಲ್ಲಿ ಭಾಗವಹಿಸುತ್ತಿಲ್ಲ ಎಂದು ವಿವರಣೆ ನೀಡಿದರು. ಸದ್ಯ ಕಲಾಪ ಮುಂದುವರೆದಿದೆ.
ಗುರುವಾರದ ಕಲಾಪದ ಮುಖ್ಯಾಂಶಗಳು
ಬಿಬಿಎಂಪಿ ವಿಭಜನೆಗೆ ಚಿಂತನೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯನ್ನು ವಿಭಜನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. ಜೆಡಿಎಸ್‌ನ ಇ.ಕೃಷ್ಣಪ್ಪ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಿಬಿಎಂಪಿ ವಿಭಜನೆಯಾದ ನಂತರ ಬೆಂಗಳೂರು ಪೊಲೀಸ್ ಆಯುಕ್ತ ಕಚೇರಿಯನ್ನು ಕೂಡ ವಿಭಜಿಸಲಾಗುವುದು ಎಂದರು. ಬಿಬಿಎಂಪಿಗೆ ವ್ಯಾಪ್ತಿಗೆ ಸೇರ್ಪಡೆಯಾದ ಹೊಸ ಬಡಾವಣೆಗಳು ಹಾಗೂ ಪೊಲೀಸ್ ಠಾಣೆಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸೇರ್ಪಡೆ ಮಾಡಲು ಆದೇಶ ನೀಡಲಾಗಿದೆ ಎಂದು ಜಾರ್ಜ್ ಸದನಕ್ಕೆ ಮಾಹಿತಿ ನೀಡಿದರು.
ವಿಶೇಷ ಅಪರಾಧ ಘಟಕ ಸ್ಥಾಪನೆ : ವಿವಿಧ ಜಿಲ್ಲೆಗಳಲ್ಲಿ ಯುವತಿಯರನ್ನು ಅಪಹರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುವಂತಹ ಪ್ರಕರಣಗಳು ನಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇಂತಹ ಪ್ರಕರಣಗಳ ತನಿಖೆ ನಡೆಸಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ಅಪರಾಧ ಘಟಕಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಪತಿಯಿಂದ ಬೇರೆಯಾಗಿದ್ದ ಮಹಿಳೆಯನ್ನು ಅಪಹರಿಸಿ, ದೆಹಲಿಯಲ್ಲಿ ವೇಶ್ಯಾವಾಟಿಕೆಗೆ ತಳ್ಳಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅವರು ತಿಳಿಸಿದರು.
ಕಾಲುಬಾಯಿ ರೋಗಕ್ಕೆ ಲಸಿಕೆ : ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಮಾದರಿಯಲ್ಲಿ ಕಾಲುಬಾಯಿ ರೋಗದ ಲಸಿಕೆ ಹಾಕುವ ಕುರಿತು ಜನರಲ್ಲಿ ಅರಿವು ಮೂಡಿಸಲು ಸರ್ಕಾರ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದು ಪಶುಸಂಗೋಪನೆ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಇತರ ಇಲಾಖೆಗಳ ನೆರವಿನಿಂದ ಕಾಲುಬಾಯಿ ರೋಗದ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಲಾಗತ್ತದೆ ಎಂದರು.
ಕಾಲುಬಾಯಿ ರೋಗದಿಂದ ಜಾನುವಾರುಗಳು ಸಾವನ್ನಪ್ಪಿದ ರೈತರಿಗೆ 5 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ, 10 ಕೋಟಿ ರೂ.ಗಳಿಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಅನುದಾನ ದುರುಪಯೋಗಕ್ಕೆ ಕಡಿವಾಣ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಕ್ಕೆ ನಿಗದಿಗೊಳಿಸಿದ ಹಣವನ್ನು ಬಳಕೆ ಮಾಡದೆ ನಿರ್ಲಕ್ಷ್ಯ ತೋರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜೈಲಿಗೆ ಕಳುಹಿಸುವಂತಹ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ, ಬುಡಕಟ್ಟು ಉಪಯೋಜನೆ (ಯೋಜನೆ, ಅನುದಾನ, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ-2013) ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಮೊಬೈಲ್ ಬಳಸಿದರೆ ಹುಷಾರ್ : ಸದನದಲ್ಲಿ ಮೊಬೈಲ್ ರಿಂಗ್ ಕೇಳಿಸಿದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಮೊಬೈಲ್ ರಿಂಗ್ ಆದ ಶಬ್ಧ ಕೇಳಿಸಿಕೊಂಡ ಸಭಾಪತಿಗಳು, ಇದನ್ನು ಸಹಿಸಲಾಗುವುದಿಲ್ಲ. ಸದನದಲ್ಲಿ ಮೊಬೈಲ್ ರಿಂಗ್ ಶಬ್ಧ ಕೇಳಿದರೆ ಸಿಬ್ಬಂದಿ ಮೂಲಕ ಅದನ್ನು ವಶಕ್ಕೆ ಪಡೆಯಲಾಗುವುದು. ಈ ನಿಯಮ ಸದಸ್ಯರು, ಸಚಿವರು, ಅಧಿಕಾರಿಗಳು, ನಾಗರಿಕರು ಹಾಗೂ ಪತ್ರಕರ್ತರಿಗೂ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.












Click it and Unblock the Notifications