ಬೆಳಗಾವಿಯಲ್ಲಿ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಪ್ರಭಾಕರ್ ಭಟ್ ವಾಗ್ದಾಳಿ
ಬೆಳಗಾವಿ, ಅಕ್ಟೋಬರ್ 09 : ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರ ಶಾಲೆಗೆ ಮಧ್ಯಾಹ್ನದ ಬಿಸಿ ಊಟ ನಿಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಭಾಕರ್ ಭಟ್ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, "ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ, ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಮಕ್ಕಳ ಮಧ್ಯಾಹ್ನದ ಊಟ ನಿಲ್ಲಿಸಿ ರಾಜಕಾರಣ ಮಾಡುತ್ತಿದೆ" ಎಂದು ಭಟ್ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ನಾನು ಅಹಿಂದ ಅಂತಾ ದೊಡ್ಡದಾಗಿ ಹೇಳ್ತಾರೆ, ಆದರೆ, ಅವರು ತಿನ್ನುವ ಅನ್ನ ನಿಲ್ಲಿಸಿದ್ದು ಯಾರಿಗೆ? ಅಲ್ಲಿ ಓದುತ್ತಿರುವ ಎಲ್ಲ ಮಕ್ಕಳೂ ಅಹಿಂದ ಮಕ್ಕಳೆ ಆಗಿದ್ದಾರೆ ಎಂದರು
ಇನ್ನು ವಕ್ಫ್ ಬೋರ್ಡ್, ಕ್ರಿಶ್ಚಿಯನ್ ಬೋರ್ಡಿನಂತೆ ಹಿಂದೂಗಳ ದೇವಸ್ಥಾನಕ್ಕೂ ಬೋರ್ಡ್ ರಚಿಸಬೇಕು ಎಂದು ಒತ್ತಾಯಿಸಿದ ಅವರು ರಾಜಕೀಯದಲ್ಲಿ ಧರ್ಮ ಇರ್ಬೇಕು. ಧರ್ಮದಲ್ಲಿ ರಾಜಕೀಯ ಇರಬಾರದು. ಈ ಸರ್ಕಾರ ಧರ್ಮದಲ್ಲೂ ರಾಜಕೀಯ ಬೆರೆಸುತ್ತಿದೆ ಎಂದು ಆರೋಪಿಸಿದರು.
ಗೌರಿ ಹತ್ಯೆ ವಿಚಾರದಲ್ಲಿ ಸರ್ಕಾರ ಹಿಂದೂಗಳತ್ತ ಬೊಟ್ಟು ಮಾಡಬಾರದು. ನಾವು ಗೌರಿ ಮತ್ತು ಕಲಬುರ್ಗಿ ಹತ್ಯೆಯನ್ನ ಖಂಡಿಸುತ್ತೇವೆ, ಎಲ್ಲ ವಿಚಾರದಲ್ಲೂ ಹಿಂದೂ ಸಂಘಟನೆಗಳತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು.












Click it and Unblock the Notifications