Belagavi Rain: ಧಾರಾಕಾರ ಮಳೆಗೆ ಯಲ್ಲಮ್ಮ ದೇವಸ್ಥಾನಕ್ಕೆ ನುಗ್ಗಿದ ನೀರು, ಜಲಾವೃತ: ಭಕ್ತರ ಪರದಾಟ
ಬೆಳಗಾವಿ, ಜೂನ್ 07: ರಾಜ್ಯದಲ್ಲಿ ಉತ್ತರ ಭಾಗಕ್ಕೂ ಮುಂಗಾರು ಮಳೆ ವಿಸ್ತರಣೆ ಆಗಿದೆ. ಪರಿಣಾಮ ಉತ್ತರ ಕರ್ನಾಟಕದ ಹಲವೆಡೆ ಗುರುವಾರ ಭಾರೀ ಮಳೆ ಆಗಿದೆ. ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಯ ಹಲವೆಡೆ ಧಾರಾಕಾರ ಮಳೆ ಆಗಿದ್ದು, ಶ್ರಿ ಯಲ್ಲಮ್ಮ ದೇವಿ ದೇವಸ್ಥಾನದ ಒಳಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಗುರುವಾರ ಸಂಜೆ ಯಲ್ಲಮ್ಮ ದೇವಿಯ ಗುಡ್ಡದಲ್ಲಿ ಗುಡುಗು, ಮಿಂಚು ಸಮೇತ ಜೋರು ಮಳೆಯ ಆಗಮನವಾಗಿದೆ. ಇದರಿಂದ ದೇವಸ್ಥಾನದ ಒಳಕ್ಕೆ ಮಳೆ ನೀರು ಜಲಪಾತದ ನೀರಿನಂತೆ ಭೋರ್ಗರೆದಿದೆ. ದೇವಸ್ಥಾನ ತಗ್ಗು ಪ್ರದೇಶದಲ್ಲಿ ಇರುವುದರಿಂದ ಗುಡ್ಡದ ಮೇಲೆ ಬಿದ್ದ ಮಳೆ ನೀರು ಸರಾಗವಾಗಿ ದೇವಸ್ಥಾನಕ್ಕೆ ನುಗ್ಗಿತು.

ಗೇಟು, ಸಂದಿಗಳಿಂದ ಮಳೆ ನೀರು ದೇವಸ್ಥಾನದ ಒಳಗೆ ಹರಿದಿದೆ. ಸುಮಾರು ಎರಡರಿಂದ ಮೂರು ಅಡಿಗಳಷ್ಟು ನೀರು ದೇವಸ್ಥಾನದಲ್ಲಿ ಕಂಡು ಬಂತು. ನೋಡ ನೋಡುತ್ತಿದ್ದಂತೆ ಇಡಿ ದೇಗುಲದ ಆವರಣ ಹೊಳೆಯಂತಾಯಿತು. ಇದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ, ಇಲ್ಲಿನ ಎಣ್ಣೆ ಹೊಂಡ.
ಹೌದು, ಪ್ರತಿ ಭಾರಿ ಮಳೆ ಬಂದಾಗ ಈ ಎಣ್ಣೆ ಹೊಂಡ ತುಂಬಿ ಹರಿಯುತ್ತದೆ. ಚರಿಂಡಿಗಳು ಹೂಡು ತುಂಬಿದ ಪರಿಣಾಮ ಸರಾಗವಾಗಿ ಎಣ್ಣೆ ಹೊಂಡದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಿಲ್ಲ. ಈ ಭಾರಿ ಹೊಂಡದ ನೀರು ನೇರ ದೇವಸ್ಥಾನ ಪ್ರಾಂಗಣಕ್ಕೆ ಹರಿದು ಬಂದಿದೆ ಎಂದು ಸ್ಥಳೀಯರು ಹೇಳಿದರು.
ಸವದತ್ತಿಯಲ್ಲಿ ಧಾರಾಕಾರ ಮಳೆಗೆ ಯಲ್ಲಮ್ಮ ದೇವಿಯ ಗುಡಿಯ ಪರಿಸ್ಥಿತಿ ... #savadatti #yallammanagudda pic.twitter.com/zFksNph7tu
— Belagavi - ಬೆಳಗಾವಿ (@BelagaviKA) June 6, 2024
ದರ್ಶನಕ್ಕೆ ಬಂದಿದ್ದ ಭಕ್ತರ ಪರದಾಟ
ಯಲಮ್ಮ ಗುಡ್ಡಕ್ಕೆ ದೇವಿ ದರ್ಶನಕ್ಕೆಂದು ಬಂದಿದ್ದ ವಿವಿಧ ಜಿಲ್ಲೆಗಳ, ರಾಜ್ಯ, ಹೊರ ರಾಜ್ಯದಿಂದ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಪರದಾಡಿದರು. ವಾಹನಗಳನ್ನು ಪಾರ್ಕಿಂಗ್ ನಿಂದ ಹೊರತೆಗೆಯಲಾಗದೇ ಸಮಸ್ಯೆ ಆಯಿತು.

ಜೂನ್ 10ರವರೆಗೆ ಹಳದಿ ಎಚ್ಚರಿಕೆ
ಬೆಳಗಾವಿಯಲ್ಲಿ ಮುಂದಿನ ಜೂನ್ 10ರವರೆಗೂ ಜೋರು ಮಳೆ ಮುನ್ಸೂಚನೆ ಇದೆ. ಈ ಪೈಕಿ ಜೂನ್ 9ರಂದು ಮತ್ತೆ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಮುಂದಿನ 48 ಗಂಟೆ ಜಿಲ್ಲೆಯ ವಿವಿಧೆಡೆ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ನಂತರ ಒಂದು ದಿನ ಭಾರೀ ಮಳೆ ಆಗಲಿದೆ.
ಬೆಳಗಾವಿ ಜಿಲ್ಲೆಗೆ ಇಂದು ಜೂನ್ 7, 8 ಮತ್ತು 10ರಂದು ಮೂರು ದಿನ ಭಾರೀ ಮಳೆ ಪ್ರಯುಕ್ತ ಐಎಂಡಿ ಹಳದಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಸ್ಥಳಿಯ ನಿವಾಸಿಗಳು, ದೇವಸ್ಥಾನಕ್ಕೆ ಬರುವವರಿಗೆ ಸೂಕ್ತ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.












Click it and Unblock the Notifications