ಬೆಳಗಾವಿ-ಚಿಕ್ಕೋಡಿ ಲೋಕಸಭಾ ಟಿಕೆಟ್ ಪೈಪೋಟಿ ಅಂತ್ಯ: ಆಯ್ಕೆಯಾದ ಅಭ್ಯರ್ಥಿಗಳು ಇವರೇ?
ಬೆಳಗಾವಿ, ಮಾರ್ಚ್ 12: ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ತಪ್ಪಿಸಿ ಕಾಂಗ್ರೆಸ್ ಪಾರುಪತ್ಯೆ ಮೆರೆಯಲು ತಂತ್ರ ರೂಪಿಸಿರುವ ರಾಜ್ಯ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಒಮ್ಮತದಿಂದ ಅಂತಿಮಗೊಳಿಸಿದೆ. ಈ ಮೂಲಕ ಬೆಳಗಾವಿ (Belagavi Lok Saba) ಮತ್ತು ಚಿಕ್ಕೋಡಿ (Chikkodi Lok Sabha) ಕ್ಷೇತ್ರಗಳ ಟಿಕೆಟ್‌ಗಾಗಿ ಕಾಂಗ್ರೆಸ್ ನಲ್ಲಿಯೇ ನಡೆದಿದ್ದ ಟಿಕೆಟ್ ಪೈಪೋಟಿ ಅಂತ್ಯ ಕಂಡಿದೆ.
ಹೌದು, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಟಿಕೆಟ್‌ಗಾಗಿ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಹಲವು ಹೊಸ ಮುಖಗಳು ನಡೆಸುತ್ತಿರುವ ಲಾಬಿಗೆ ಸೋಮವಾರ ತೆರೆ ಬಿದ್ದಿರುವ ಬಗ್ಗೆ ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇವೆರಡು ಲೋಕಸಭಾ ಕ್ಷೇತ್ರಗಳಿಗಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಮಧ್ಯೆ ಟಿಕೆಟ್ ಲಾಭಿ ನಡೆದಿದೆ. ಅಂತಿಮವಾಗಿ ಚಿಕ್ಕೋಡಿ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ಅವರು ಒಮ್ಮತದ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.
ಇತ್ತ ಬೆಳಗಾವಿ ಕ್ಷೇತ್ರದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ (Mrinal Hebbalkar) ಸ್ಪರ್ಧೆಯನ್ನು ಅಂತಿಮಗೊಳಿಸಲಾಗಿದೆ. ಸದ್ಯ ಇದನ್ನು ವರಿಷ್ಠರಿಗೆ ಶಿಫಾರಸು ಮಾಡಲಾಗಿದ್ದು, ಕಾಂಗ್ರೆಸ್ ಮುಖ್ಯಸ್ಥರು ಅಧಿಕೃತಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
2 ಕ್ಷೇತ್ರ ಮರಳಿ ಪಡೆಯಲು ಕಾಂಗ್ರೆಸ್ ತಂತ್ರ
ಈ ಮೂಲಕ ಬಿಜೆಪಿಯ ಪಾಲಾಗಿರುವ ಎರಡು ಭದ್ರಕೋಟೆಯನ್ನು ಮರಳಿ ಪಡೆಯಲು ಕಾಂಗ್ರೆಸ್ ಅಂತಿಮವಾಗಿ ಈ ಭಾಗದ ಪ್ರಭಾವಿ ನಾಯಕರಾದ ಜಾರಕಿಹೊಳಿ ಮತ್ತು ಹೆಬ್ಬಾಳ್ಕರ್ ಅವರನ್ನು ಅವಲಂಬಿಸಿದಂತಾಗಿದೆ.

ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಟಿಕೆಟ್ ಹಂಚಿಕೆ, ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಸ್ಥಳೀಯ ಕಾಂಗ್ರೆಸ್ ನಾಯಕರು ಕ್ರಮವಾಗಿ ಕೈಗೊಂಡಿದ್ದಾರೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಹೊರಡಿಸಬೇಕಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
2 ಕ್ಷೇತ್ರಕ್ಕೆ ಹಾಲಿ ನಾಯಕರ ಪುತ್ರರೇ ಫೈನಲ್?
ಅಲ್ಲದೇ ಈ ಎರಡು ಕ್ಷೇತ್ರಗಳಿಂದ ಎರಡು ರಾಜಕೀಯ ಕುಟುಂಬದ ಸದಸ್ಯರನ್ನು ಬಿಟ್ಟು ಬೇರೆ ಯಾರನ್ನೂ ಕಾಂಗ್ರೆಸ್ ಕಣಕ್ಕಿಳಿಸುವುದಿಲ್ಲ ಎಂಬ ಮಾತುಗಳಿಗೆ ಪುಷ್ಠಿ ಸಿಕ್ಕಂತಾಗಿದೆ.
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಸಾಮರ್ಥ್ಯ ಹೊಂದಿರುವ ನಾಯಕರ ಇವರು ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ವರಿಷ್ಠರಿಗೆ ಈ ಬಗ್ಗೆ ಒತ್ತಾಯಿಸಲಾಗಿದೆ ಎನ್ನಲಾಗಿದೆ. ಮೃಣಾಲ್ ಮತ್ತು ಪ್ರಿಯಾಂಕಾ ಅವರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದು ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿದಂತಾಗುತ್ತದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದರು.
ಸಿಎಂ-ಡಿಸಿಎಂ ಚರ್ಚೆ: ಜಾರಕಿಹೊಳಿ ಹೇಳಿದ್ದೇನು?
ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಚರ್ಚೆ ವೇಳೆ ತಮ್ಮ ಮಗಳನ್ನು ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡುವ ನಿರ್ಧಾರಕ್ಕೆ ಸತೀಶ್ ಜಾರಕಿಹೊಳಿ ಅವರು ಒಪ್ಪಿಗೆ ಸೂಚಿಸಿದ್ದರು. ಈ ಬಗ್ಗೆ ಚಿಕ್ಕೋಡಿ ನಾಯಕರ ಜತೆಗೆ ಚರ್ಚಿಸಿ ತಿಳಿಸುವುದಾಗಿ ಸತೀಶ್ ಅವರು ಸಿಎಂ ಹಾಗೂ ಡಿಸಿಎಂಗೆ ಹೇಳಿದ್ದರು. ಒಂದು ವೇಳೆ ಪ್ರಿಯಾಂಕ ಜಾರಕಿಹೊಳಿಯವರೇ ಸ್ಪರ್ಧೆಗೆ ಮನಸ್ಸು ಮಾಡದಿದ್ದರೆ ಕಾಂಗ್ರೆಸ್‌ಗೆ ತುಸು ಕಷ್ಟವಾಗಲಿದೆ ಎಂದು ಸತೀಶ್ ಅವರು ಆವತ್ತೆ ತಿಳಿಸಿದ್ದರು ಎಂಬ ಮಾಹಿತಿ ಇದೆ.
ಸದ್ಯ ಕರ್ನಾಟಕ ಕಾಂಗ್ರೆಸ್ ನಾಯಕರು ಎರಡು ಕ್ಷೇತ್ರಗಳಿಂದ ಮೃಣಾಲ್ ಮತ್ತು ಪ್ರಿಯಾಂಕಾ ಅವರನ್ನು ಅಂತಿಮ ಅಭ್ಯರ್ಥಿಗಳನ್ನಾಗಿ ಮಾಡಿದೆ. ಆದರೆ ಈಬಗ್ಗೆ ಹೈಕಮಾಂಡ್ ಒಪ್ಪಿಗೆಗೆ ಕಾಯುತ್ತಿದೆ. ಈ ಮೂಲಕ ಇವೆರಡು ಕ್ಷೇತ್ರಗಳಿಂದ ಟಿಕೆಟ್‌ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಇತರ ಆಕಾಂಕ್ಷಿಗಳ ನಿರೀಕ್ಷೆಗೆ ತೆರೆ ಬಿದ್ದಿದೆ.












Click it and Unblock the Notifications