ನೇಗಿನಹಾಳ ಗ್ರಾಮದಲ್ಲಿ ಬನಶಂಕರಿ ದೇವಿಯ ಚಿನ್ನಾಭರಣ ಕದ್ದ ಖದೀಮರು
ಬೆಳಗಾವಿ, ಜುಲೈ .01: ದೇವಸ್ಥಾನಕ್ಕೆ ನುಗ್ಗಿ ಬನಶಂಕರಿ ದೇವಿಯ ಕತ್ತಲ್ಲಿದ್ದ ತಾಳಿ(ಮಂಗಲ ಸೂತ್ರ), ಕಿವಿಯೊಲೆ, ಮೂಗುತಿ, ಕಿರೀಟವನ್ನು ಕಳವು ಮಾಡಿರುವ ಘಟನೆ ನೇಗಿನಹಾಳ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂದೆ ಸಂಪಗಾವಿ ರಸ್ತೆಗೆ ಹೊಂದಿಕೊಂಡಿರುವ ಬನಶಂಕರಿ ದೇವಾಲಯದಲ್ಲಿ ಈ ಕಳ್ಳತನ ನಡೆದಿದ್ದು, ರಾತ್ರಿ ವೇಳೆ ಈ ಕೃತ್ಯ ಎಸಗಲಾಗಿದೆ.
ದೇವಸ್ಥಾನದ ಬೀಗ ಒಡೆದು ಸುಮಾರು 40 ಗ್ರಾಂ ತೂಕವಿರುವ ಬಂಗಾರದ ಒಡವೆಗಳು, 500 ಗ್ರಾಂ ತೂಕವಿರುವ ಬೆಳ್ಳಿಯ ಕೀರಿಟ ಕಳ್ಳತನ ಮಾಡಿದ್ದಾರೆ. ಪ್ರತಿನಿತ್ಯದಂತೆ ಮುಂಜಾನೆ 5ಗಂಟೆಗೆ ಪೂಜೆಗೆಂದು ಬಂದ ಅರ್ಚಕರಾದ ಯಲ್ಲಪ್ಪ ಕೆಂಪರೊಜಿ, ಪರಶುರಾಮ ಶಿರೊಳಕರ ಕಳ್ಳತನವಾದ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಳ್ಳತನದ ಬಗ್ಗೆ ದೇವಸ್ಥಾನದ ಹಿರಿಯರೊಂದಿಗೆ ಮಾತ್ರ ಚರ್ಚಿಸಿ ಎಂದಿನಂತೆ ಪೂಜಾರಿಗಳು ಪೂಜೆ ನಡೆಸಿರುವುದು ಸ್ಥಳೀಯರಿಗೆ ಅನುಮಾನ ಹುಟ್ಟಿಸಿದೆ.
ಕಳೆದ ಎರಡು ತಿಂಗಳ ಹಿಂದೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅರಳಾಪುರ ಗ್ರಾಮದಲ್ಲಿ ಮಾರಮ್ಮನ ದೇವಸ್ಥಾನದಲ್ಲಿ ಹುಂಡಿಯೊಡೆದು ಕಳ್ಳತನ ಮಾಡಿರುವ ಘಟನೆ ನಡೆದಿತ್ತು.

ಹುಂಡಿಯಲ್ಲಿದ್ದ 50 ಸಾವಿರಕ್ಕೂ ಹೆಚ್ಚು ಹಣ, ದೇವರ ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿ, ಮೈಕ್ ಸೆಟ್ ಸೇರಿದಂತೆ ಹಲವು ಉಪಕರಣಗಳನ್ನು ತಡರಾತ್ರಿ ಕಳವು ಮಾಡಿದ್ದರು. ದೇವಸ್ಥಾನದ ಒಳಗಿದ್ದ ಬೀರುವನ್ನು ಒಡೆದು ರೇಷ್ಮೆಸೀರೆಗಳು, ತಾಯಿಯ ಅಲಂಕಾರದ ವಸ್ತುಗಳನ್ನು ಖದೀಮರು ಕದ್ದಿದ್ದರು.












Click it and Unblock the Notifications