ರಾಜ್ಯದಲ್ಲೇ ಮೊದಲು: ಏನಿದು C-TARA ಅಪ್ಲಿಕೇಶನ್?
ಬೆಳಗಾವಿ, ಜುಲೈ 14: ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿಶೇಷವಾಗಿ ಮಾನಿಟರಿಂಗ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ 'C-TARA' ಟಾಸ್ಕ್ ಅಸೈನ್‌ಮೆಂಟ್ ರಿವ್ಯೂವ್ ಅಪ್ಲಿಕೇಶನ್ ಅನ್ನು ಲೋಕಪಯೋಗಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಲೋಕಾರ್ಪಣೆ ಮಾಡಿದರು.

ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಿಶೇಷವಾಗಿ ಈ ಮಾನಿಟರಿಂಗ್ ಅಪ್ಲಿಕೇಶನ್ ಸಿದ್ಧಪಡಿಸಿದ್ದಾರೆ. 'C-TARA' ಅಪ್ಲಿಕೇಶನ್ ಹೇಗೆ ಕಾರ್ಯ ನಿರ್ವಹಣೆ ಮಾಡಲಿದೆ? ಎಂದು ವಿವರಣೆಯನ್ನು ನೀಡಲಾಗಿದೆ.
ಏನಿದು ಅಪ್ಲಿಕೇಶನ್?; ಬೆಳಗಾವಿ ಜಿಲ್ಲೆಯ ಪಂಚಾಯತ್ ರಾಜ್ ಇಲಾಖೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳು ಕಾರ್ಯಕ್ಷೇತ್ರಕ್ಕೆ ತೆರಳಿ ಉದಾಹರಣೆಗೆ ಶಾಲೆ, ಅಂಗನವಾಡಿ, ಪಿಎಚ್‌ಸಿ, ಹಾಸ್ಟೆಲ್ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಎಲ್ಲಾ ಅಧಿಕಾರಿಗಳು ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟುಕಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗುವಂತೆ ಅಪ್ಲಿಕೇಶನ್ ರೂಪಿಸಲಾಗಿದೆ.
ಈ ಅಪ್ಲಿಕೇಶನ್‌ನಲ್ಲಿ ವೆಬ್‌ಪೋರ್ಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎಂಬ ಎರಡು ವಿಧವಿದೆ. ಪೋರ್ಟಲ್‌ನಲ್ಲಿ ಎಲ್ಲ ಅಧಿಕಾರಿಗಳ ಕಾರ್ಯ ವೈಖರಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಕ್ಷೀಸಲು ಅವಕಾಶವಿದೆ ಹಾಗೂ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಾರ್ವಜನಿಕರ ದೂರುಗಳನ್ನು ಸಿಇಒ ಅವರು ತಾಲ್ಲೂಕಾವಾರು ಹಾಗೂ ಇಲಾಖಾವಾರು ದೂರುಗಳನ್ನು ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಕೊಂಡು ಬಗೆಹರಿಸಲು ಸಹ ಈ ಅಪ್ಲಿಕೇಶನ್‌ನಲ್ಲಿ ಅವಕಾಶವಿರುತ್ತದೆ. ಸಮಸ್ಯೆಯ ಗಂಭೀರತೆಯನ್ನು ಅರಿತು ಆದ್ಯತೆ ಮೇಲೆ ಕೆಲಸವನ್ನು ನಿರ್ವಹಿಸಲು ಈ ಒಂದು ಅಪ್ಲಿಕೇಶನ್‌ನಲ್ಲಿ ಅನುಕೂಲವನ್ನು ಕಲ್ಪಿಸಲಾಗಿದೆ.
ಕೆಲಸ ಹಂಚಿಕೆ ಮಾಡಿದ ಅಧಿಕಾರಿಯೇ ಸ್ಥಳಕ್ಕೆ ಭೇಟಿ ನೀಡಿ ಜಿಯೋ ಟ್ಯಾಗ್ ಫೋಟೋವನ್ನು ಅಳವಡಿಸಲು ಅವಕಾಶವಿರುವದರಿಂದ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕರ ದೂರುಗಳಿಗೆ ಯಾವ ಮಟ್ಟದಲ್ಲಿ ಸ್ಪಂದಿಸುತ್ತಾರೆ? ಎಂಬುದನ್ನು ಸುಲಭವಾಗಿ ಮೇಲ್ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲು ಸಹಾಯಕವಾಗಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಕೆಡಿಪಿ ಸಭೆಯಲ್ಲಿಯೂ ಅಪ್ಲಿಕೇಶನ್ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಮಾತನಾಡಿದ ಅವರು, "ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಅನುಕೂಲವಾಗುವಂತೆ ಎ, ಬಿ, ಸಿ ಕೆಟಗರಿಗಳನ್ನು ಸೃಷ್ಟಿಸಿ ಆಯಾ ಕೆಟಗರಿ ಅನುಸಾರ ವೈದ್ಯರನ್ನು ಪಿಎಚ್‌ಸಿ ಹಾಗೂ ಸಿಎಚ್‌ಸಿಗಳಿಗೆ ನಿಯೋಜಿಸಬಹುದು ಎಂಬ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗಿದೆ" ಎಂದರು.
ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, "ರಾಜ್ಯಾದ್ಯಂತ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು. ಜಿಲ್ಲೆಯ ಎಲ್ಲಾ ಆಸ್ಪತ್ರಗಳಿಗೆ ಡೆಂಗ್ಯೂ ಪರೀಕ್ಷಾ ಕಿಟ್‌ಗಳನ್ನು ವಿತರಿಸಬೇಕು. ಅಲ್ಲದೇ ಡೆಂಗ್ಯೂ ಜ್ವರದಿಂದ ಬಳಲುವ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆ ಒದಗಿಸುವದರ ಜೊತೆಗೆ ಡೆಂಗ್ಯೂ ಜ್ವರಕ್ಕೆ ಬೇಕಾಗುವಂತಹ ಅಗತ್ಯದ ಔಷಧಿಗಳ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಡೆಂಗ್ಯೂ ಜ್ವರದ ಲಕ್ಷಣಗಳು, ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಮುಂದಾಗುವಂತೆ" ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
"ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಆಗದಂತೆ ನಿಗಾವಹಿಸಬೇಕು. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಂತಹ ರೈತ ಕುಟುಂಬಗಳಿಗೆ ಶೀಘ್ರವೇ ಪರಿಹಾರ ಒದಗಿಸಬೇಕು. ಜಿಲ್ಲೆಯಲ್ಲಿ ಕೈಗೊಳ್ಳಲಾದ ಜಲ ಜೀವನ್ ಮಿಷನ್ ಯೋಜನೆಯಡಿ ಅಪೂರ್ಣ ಕಾಮಗಾರಿ ಹಾಗೂ ಸಮರ್ಪಕ ನೀರು ಪೂರೈಕೆ ಆಗುತ್ತಿರುವ ಕುರಿತು ಪರಿಶೀಲಿಸಬೇಕು" ಎಂದರು.












Click it and Unblock the Notifications