ಬೆಳಗಾವಿ; ದೇವಾಲಯಗಳಿಗೆ ಭಕ್ತರ ಪ್ರವೇಶ ನಿಷೇಧ
ಬೆಳಗಾವಿ, ಫೆಬ್ರವರಿ 21; ಮಹಾರಾಷ್ಟ್ರ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನಲೆಯಲ್ಲಿ ಬೆಳಗಾವಿಯ ಪ್ರಮುಖ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಪುನಃ ಜಿಲ್ಲಾಡಳಿತ ನಿಷೇಧ ಹೇರಿದೆ.
ಬೆಳಗಾವಿಯ ಪ್ರಸಿದ್ಧ ಸವದತ್ತಿ ಎಲ್ಲಮ್ಮ ಹಾಗೂ ಚಿಂಚಲಿ ಮಾಯವ್ವ ದೇವಾಲಯಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.
ಸವದತ್ತಿಯ ರೇಣುಕಾ ದೇವಿ, ಚಿಂಚಲಿ ಮಾಯಕ್ಕ ದೇವಾಲಯಗಳಿಗೆ ಮಹಾರಾಷ್ಟ್ರದ ರಾಜ್ಯದ ಭಕ್ತರೇ ಹೆಚ್ಚಾಗಿ ಆಗಮಿಸುತ್ತಾರೆ. ಈಗ ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ.

ಮುಂದಿನ ಆದೇಶದವರೆಗೆ ಯಾವುದೇ ಕಾರಣಕ್ಕೂ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ಈ ದೇವಾಲಯಗಳಿಗೆ ಭಕ್ತರ ಭೇಟಿಗೆ ಫೆಬ್ರವರಿ 1ರಿಂದ ಅವಕಾಶ ಕಲ್ಪಿಸಲಾಗಿತ್ತು.
ಈಗ ಪುನಃ ಎರಡೂ ದೇವಾಲಯಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಬೆಳಗಾವಿ ಜಿಲ್ಲಾಡಳಿತದ ಕ್ರಮದಿಂದ ಭಕ್ತರು ನಿರಾಸೆಗೊಂಡಿದ್ದಾರೆ.
ಶನಿವಾರ ಮಹಾರಾಷ್ಟ್ರ ರಾಜ್ಯದಲ್ಲಿ 6281 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 20,93,913ಕ್ಕೆ ಏರಿಕೆಯಾಗಿದೆ. 48,439 ಸಕ್ರಿಯ ಪ್ರಕರಣಗಳಿವೆ.
ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ 12 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 26,845.












Click it and Unblock the Notifications