Basavanagudi Elections : ಚುನಾವಣೆಗೆ ಸಜ್ಜಾಗಿರುವ ಬಸವನಗುಡಿ ಕ್ಷೇತ್ರದ ಸ್ಥಿತಿಗತಿ
ಮುಂಬರುವ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರವು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕ ವಿಧಾಸಭೆಯ 224 ಕ್ಷೇತ್ರಗಳಲ್ಲಿ ಒಂದಾಗಿದೆ. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ರವಿ ಸುಬ್ರಮಣ್ಯ ಜಯ ಗಳಿಸಿದ್ದರು. ಜನತಾ ದಳ (ಜಾತ್ಯತೀತ)ಯ ಬಾಗೇ ಗೌಡ 38009 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಬಸವನಗುಡಿ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದೆ. ಈ ಪ್ರದೇಶದಲ್ಲಿರುವ ದೊಡ್ಡ ಬಸವಣ್ಣ(ನಂದಿ) ದೇವಸ್ಥಾನದಿಂದಾಗಿ ಇದಕ್ಕೆ ಬಸವನಗುಡಿ ಎಂದು ಹೆಸರು ಬಂದಿದೆ. ಬಸವನಗುಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಇದು ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ವಸತಿ ಮತ್ತು ವಾಣಿಜ್ಯ ಬಡಾವಣೆಯಾಗಿ ಗುರುತಿಸಿಕೊಂಡಿದೆ. ಇದರ ದಕ್ಷಿಣ ಭಾಗದಲ್ಲಿ ಜಯನಗರ ಬಡಾವಣೆ ಇದೆ. ಬಸವನಗುಡಿಯಲ್ಲಿ ಹೆಚ್ಚಾಗಿ ಕನ್ನಡಿಗರು ವಾಸಿಸುತ್ತಾರೆ. ಈ ಪ್ರದೇಶ ಸಾಂಪ್ರದಾಯಿಕ ತಿಂಡಿ ತಿನಿಸುಗಳಿಗೆ ಹೆಸರುವಾಗಿಯಾಗಿದೆ.

ಮೆಟ್ರೋ ಮಾರ್ಗಗಳ ಬೆಳವಣಿಗೆಯಿಂದಾಗಿ ಇಲ್ಲಿನ ಪ್ರವಾಸೋದ್ಯಮ ಹಾಗೂ ವ್ಯಾಪಾರ ಹೊಚ್ಚಾಗಿದೆ. ಜೊತೆಗೆ ಎಲ್ಲಾ ಏರಿಯಾಗಳಂತೆ ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ಪ್ರಮಾಣವೂ ಹೆಚ್ಚಾಗುತ್ತಿದೆ. ಬಸವನಗುಡಿ ಅಂದರೆ ಸಂಪ್ರದಾಯಕ್ಕೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣಗಳ ತವರೂರು.
ಗಾಂಧಿ ಬಜಾರ್, ಕಡಲೆಕಾಯಿ ಪರಿಷೆ, ವಿದ್ಯಾರ್ಥಿ ಭವನದ ದೊಸೆ, ಡಿವಿಜಿ ರಸ್ತೆಯನ್ನೂ ಮರೆಯುವ ಹಾಗೇ ಇಲ್ಲ. ಬೆಂಗಳೂರು ಗಣೇಶೋತ್ಸವದ ಬಗ್ಗೆ ಮರೆತರೂ ತಪ್ಪಾಗುತ್ತೆ. ಹೀಗೆ ಹಲವು ವಿಶೇಷತೆಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ.

ಬಸವನಗುಡಿ ಮೀಸಲು ರಹಿತ ಕ್ಷೇತ್ರ. ಬಸವನಗುಡಿ ಕ್ಷೇತ್ರ ಕೆಲವು ಚುನಾವಣೆಗಳಿಂದ ಬಿಜೆಪಿಯ ಭದ್ರ ನೆಲೆಯಾಗಿ ಬದಲಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಬಂಡಾಯದ ಲಾಭ ಪಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಂದಾಗಿದೆ.
ಹಿಂದಿನ ಚುನಾವಣಾ ಫಲಿತಾಂಶ:
2013 ಹಾಗೂ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಿಂದಿಕ್ಕಿ ಜೆಡಿಎಸ್ ಎರಡನೇ ಸ್ಥಾನಕ್ಕೆ ಬಂದಿದೆ. ಬಸವನಗುಡಿಯಲ್ಲಿ ಬಿಜೆಪಿ ಐದು ಬಾರಿ ಜಯಿಸಿದೆ. ಅದರಲ್ಲಿ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಅವರೇ ಸತತ ಮೂರು ಬಾರಿ ಆಯ್ಕೆಯಾಗಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ.

ರವಿ ಸುಬ್ರಹ್ಮಣ್ಯ ಮತ್ತೊಮ್ಮೆ ಬಿಜೆಪಿಯಿಂದ ಕಣಕ್ಕಿಳಿಯಲು ಪ್ರಬಲ ಆಕಾಂಕ್ಷಿ. ಅವರ ವಿರುದ್ಧ ಸ್ವಪಕ್ಷದಲ್ಲೇ ಅಸಮಧಾನವಿದೆ. ಕೋವಿಡ್ ವೇಳೆ ಲಸಿಕೆ ಮಾರಾಟ ಪ್ರಕರಣ, ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸಿ ಪ್ರಕರಣಗಳು ಇಲ್ಲಿ ದೊಡ್ಡ ಸದ್ದು ಮಾಡಿದ್ದವು. 'ಒಂದೇ ಕುಟುಂಬಕ್ಕೆ ಎರಡು ಸ್ಥಾನಗಳು ಬೇಡ' ಎನ್ನು ಸೂತ್ರಕ್ಕೆ ಬಿಜೆಪಿ ಮೊರೆ ಹೋದರೆ ಸಂಸದ ತೇಜಸ್ವಿ ಸೂರ್ಯ ಅವರ ಸಂಬಂಧಿಕರೂ ಆಗಿರುವ ರವಿ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ ಎಂಬ ಮಾತು ಬಿಜೆಪಿಯಲ್ಲಿ ಕೇಳಿಬರುತ್ತಿದೆ.
ಬಿಜೆಪಿ ಟಿಕೆಟ್ ಯಾರಿಗೆ?
ಇನ್ನೂ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಕಳೆದ ವಿಧಾನಸಭೆ, ಲೀಕಸಭಾ ಚುನಾವಣೆಯಲ್ಲೂ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಇದರಿಂದ ಅವರು ಅಸಮಾಧಾನಗೊಂಡಿದ್ದರು. ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರ ಹೆಸರೂ ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಸುಳಿದಾಡುತ್ತಿದೆ. ಚಕ್ರವರ್ತಿ ಸೂಲಿಬೆಲೆ ಅವರಿಗೆ ಬಸವನಗುಡಿ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರೇ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ಕಾಂಗ್ರೆಸ್, ಜೆಡಿಎಸ್ ಸ್ಪರ್ಧಿಗಳು ಯಾರು?
ಬೆಂಗಳೂರಿನ ಹಳೇ ಮಾದರಿ ಉಳಿಸಿಕೊಂಡೇ ಆಧುನಿಕತೆಗೆ ತೆರೆದುಕೊಂಡಿರುವ ಕ್ಷೇತ್ರದಲ್ಲಿ ಇಂದಿಗೂ ಕಡಲೆ ಕಾಯಿ ಪರಿಷೆ ಹಾಗೂ ದೇವರ ಉತ್ಸವಗಳು ನಡೆಯುತ್ತಿವೆ. ಕ್ಷೇತ್ರ ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ ರಾಜಕೀಯವು ಅಷ್ಟೇ ಜಿದ್ದಾಜಿದ್ದಿನಿಂದ ಕೂಡಿದೆ. ಹೀಗಾಗಿ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಜೆಡಿಎಸ್ ಅಭ್ಯರ್ಥಿಯ ಹೆಸರು ಘೋಷಿಸಿದೆ. ಜೆಡಿಎಸ್ ಕ್ಷೇತ್ರದಲ್ಲಿ ಅರಮನೆ ಶಂಕರ್‌ಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಯು ಬಿ ವೆಂಕಟೇಶ್ ಗೆ ಟಿಕೆಟ್ ನೀಡಿದೆ.
ಆಮ್ ಆದ್ಮಿ ಪಕ್ಷದಿಂದ ಭಾಸ್ಕರ್ ರಾವ್ ಅವರು ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಸವನಗುಡಿ ಕ್ಷೇತ್ರದಲ್ಲಿ ಬ್ರಾಹ್ಮಣರು ಹಾಗೂ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇನ್ನುಳಿದಂತೆ ಜಾತಿ ಲೆಕ್ಕಾಚಾರದ ಮೇಲೆ ಈ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಮಾಡುವ ಸಾಧ್ಯತೆ ಇದೆ.
Basavanagudi Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ರವಿ ಸುಬ್ರಮಣ್ಯ(ಬಿಜೆಪಿ) | 76,018 | ಬಾಗೇ ಗೌಡ(ಜೆಡಿಎಸ್) | 38,009 |
| 2013 | ರವಿ ಸುಬ್ರಮಣ್ಯ(ಬಿಜೆಪಿ) | 43,876 | ಕೆ. ಭೈರೇಗೌಡ(ಜೆಡಿಎಸ್) | 24,163 |
| 2008 | ರವಿ ಸುಬ್ರಮಣ್ಯ(ಬಿಜೆಪಿ) | 50,294 | ಕೆ. ಚಂದ್ರಶೇಖರ್(ಕಾಂಗ್ರೆಸ್) | 37,094 |
ಜಾತಿ ಲೆಕ್ಕಾಚಾರ ಹೇಗಿದೆ?
ಬಸವನಗುಡಿಯಲ್ಲಿ ಒಕ್ಕಲಿಗರು ಹಾಗೂ ಬ್ರಾಹ್ಮಣ ಮತಗಳೇ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಒಟ್ಟು 2,36,600 ಮತದಾರರಿದ್ದಾರೆ. ಈ ಪೈಕಿ ಒಕ್ಕಲಿಗರು-67,000 ಇದ್ದರೆ, ಬ್ರಾಹ್ಮಣರು-65,000 ಇದ್ದಾರೆ. ಇನ್ನು ಲಿಂಗಾಯತರು-4000, ಒಬಿಸಿ-20,500, ಎಸ್-ಎಸ್‌ಟಿ -34,500 ಹಾಗೂ ಮುಸ್ಲಿಂಮರು 6,500, ಇತರೇ ವರ್ಗದ ಮತದಾರರ ಸಂಖ್ಯೆ - 39,100 ಇದೆ.












Click it and Unblock the Notifications