Bantwal Elections: ಪ್ರಖರ ಹಿಂದುತ್ವದ ಕ್ಷೇತ್ರದಲ್ಲಿ ಬಿಜೆಪಿಯೋ, ಕೈ ಮೇಲೋ?
ನೇತ್ರಾವತಿ ನದಿ ತೀರದಲ್ಲಿರುವ, ಐತಿಹಾಸಿಕ ಪೊಳಲಿ ರಾಜರಾಜೇಶ್ವರಿ ದೇವಾಲಯವನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು/ವಿಧಾನಸಭಾ ಕ್ಷೇತ್ರ ಬಂಟ್ವಾಳ. ಜಿಲ್ಲಾ ಕೇಂದ್ರ ಮಂಗಳೂರಿನಿಂದ 23 ಕಿ.ಮೀಟರ್ ದೂರದಲ್ಲಿರುವ ಬಂಟ್ವಾಳ ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಚಕ್ರವರ್ತಿ ಅಶೋಕನ ಶಾಸನ, ಅಬ್ದುಲ್ ರಜಾಕ್ ಎಂಬ ವಿದೇಶಿ ಯಾತ್ರಿಕ 1448ರಲ್ಲಿ ಪೊಳಲಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದನೆಂದು ಇತಿಹಾಸದ ಪುಟದಲ್ಲಿ ದಾಖಲಾಗಿದೆ.
1975ರಲ್ಲಿ ಪುರಸಭೆಯಾಗಿ ರೂಪುಗೊಂಡ ನಂತರ ಬಂಟ್ವಾಳ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದೆ, ಜೊತೆಗೆ, ಕ್ಷೇತ್ರದ ಕೆಲವು ಪ್ರದೇಶಗಳು ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ (ಬಿ.ಸಿ.ರೋಡ್, ಪಾಣೆಮಂಗಳೂರು, ಕೈಕಂಬ, ಮೇಲ್ಕಾರ್) ಹೊಂದಿಕೊಂಡಿದೆ.
ಶ್ರೀ ಕಾರಿಂಜೇಶ್ವರ ದೇವಸ್ಥಾನ, ನರಹರಿ ಪರ್ವತ ಮುಂತಾದವು ಪಟ್ಟಣದ ಪ್ರಮುಖ ಪ್ರವಾಸೀ ಸ್ಥಳಗಳಾಗಿವೆ. ದಕ್ಷಿಣಕ್ಕೆ ಕೇರಳ, ಬೆಳ್ತಂಗಡಿ ಪುತ್ತೂರು ನಗರ ಪೂರ್ವಕ್ಕೆ, ಮಂಗಳೂರು ಪಶ್ಚಿಮಕ್ಕೆ, ಉತ್ತರಕ್ಕೆ ಕಾರ್ಕಳ ಪ್ರದೇಶಗಳಿವೆ.

ದಿನಸಿ, ತಂಬಾಕು, ಅಡಿಕೆ, ಭತ್ತ ಇಲ್ಲಿನ ಪ್ರಮುಖ ಬೆಳೆ, ಜೊತೆಗೆ, ಚಿನ್ನದ ಪ್ರಮುಖ ವ್ಯಾಪಾರ ಕೇಂದ್ರವೆಂದೂ ಬಂಟ್ವಾಳ ಗುರುತಿಸಿಕೊಂಡಿದೆ. ಕೋಮು ಸೂಕ್ಷ್ಮ ಪ್ರದೇಶವೆಂದೂ ಗುರುತಿಸಲ್ಪಟ್ಟಿರುವ ಇಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಳೆದ ಕೆಲವು ವರ್ಷಗಳಿಂದ ಜಿದ್ದಿನ ರಾಜಕೀಯ. ರಮಾನಾಥ ರೈ ಕ್ಷೇತ್ರದ ಮಂಚೂಣಿ ನಾಯಕರಾಗಿದ್ದರೂ ಕಳೆದ ಚುನಾವಣೆಯಲ್ಲಿ ಅವರು ಸೋಲುಂಡಿದ್ದರು.
ಬಂಟ್ವಾಳ ಮೊದಲಿನಿಂದಲು ಬಂಟ (ಶೆಟ್ಟಿ) ಸಮುದಾಯದ ಬಿಗಿ ಹಿಡಿತದಲ್ಲೇ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ಬಂಟ ಸಮುದಾಯ ಅಭ್ಯರ್ಥಿಗಳೇ ನಿರಂತರವಾಗಿ ಸ್ಪರ್ಧಿಸುತ್ತಾ ಬಂದಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಬಹುದಾಗಿದೆ.
ರಮಾನಾಥ ರೈ ನೇತೃತ್ವದಲ್ಲಿ ಇತ್ತೀಚೆಗೆ ನಡೆದ 'ಬಂಟ್ವಾಳ ಪ್ರಜಾಧ್ವನಿ ಯಾತ್ರೆ'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸ್ಥಳೀಯ ಕಾಂಗ್ರೆಸ್ ಮುಖಂಡರು ಇದು ಮುಂದಿನ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಗೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿದೆ.

1972 - 2018ರ ವರೆಗಿನ ಚುನಾವಣೆಯಲ್ಲಿ ಕಾಂಗ್ರೆಸ್ ಏಳು ಬಾರಿ ಇಲ್ಲಿಂದ ಗೆದ್ದಿದೆ. 1983ರಿಂದ ಈಚೆಗೆ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ. ಮಾಜಿ ಸಚಿವ ರಮಾನಾಥ ರೈ ಇಲ್ಲಿಂದ ಆರು ಬಾರಿ ಗೆದ್ದಿದ್ದಾರೆ. 2013ರ ಚುನಾವಣೆಯಲ್ಲಿ ರೈ ಅವರು ಬಿಜೆಪಿಯ ರಾಜೇಶ್ ನಾಯಕ್ ಅವರನ್ನು 17,850 ಮತಗಳ ಅಂತರದಿಂದ ಸೋಲಿಸಿದ್ದರು.
ರಾಜೇಶ್ ನಾಯಕ್ ಗೆಲುವು
ಕಳೆದ ಚುನಾವಣೆಯಲ್ಲಿ ರಾಜೇಶ್ ನಾಯಕ್ ಸೇಡು ತೀರಿಸಿಕೊಂಡು ರೈ ಅವರನ್ನು 15,971 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಈಗ ಕಾಂಗ್ರೆಸ್ಸಿನಲ್ಲಿರುವ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು ಈ ಹಿಂದೆ ಎರಡು ಬಾರಿ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ, ರೈ ವಿರುದ್ದ ಸೋಲುಂಡಿದ್ದರು. ಕಳೆದ ಚುನಾವಣೆಯಲ್ಲಿ ಶಕುಂತಲ ಶೆಟ್ಟಿ ಕೂಡಾ ಪುತ್ತೂರಿನಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಬಂಟ್ವಾಳದಿಂದ ರಮಾನಾಥ ರೈಗೆ ಟಿಕೆಟ್
ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದೆ, ಬಂಟ್ವಾಳದಿಂದ ರಮಾನಾಥ ರೈಗೆ ಟಿಕೆಟ್ ಸಿಕ್ಕಿದೆ. ಬಿಲ್ಲವ ಮುಖಂಡರಾದ ಪದ್ಮರಾಜ್ ಬಂಟ್ವಾಳ್ ಅವರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಜಿದ್ದಾಜಿದ್ದಿನ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಬಂಟ್ವಾಳದಲ್ಲಿ ಬಿಜೆಪಿ ಈ ಬಾರಿಯೂ ಹಿಂದೂ ಮತಗಳನ್ನೇ ನೆಚ್ಚಿಕೊಂಡಿದೆ. ಪಕ್ಷದ ಏಕೈಕ ಟಿಕೆಟ್ ಆಕಾಂಕ್ಷಿ ರಾಜೇಶ್ ನಾಯಕ್ ಉಳಿಪಾಡಿಗುತ್ತು.
ಕ್ಷೇತ್ರದಲ್ಲಿ ಎಸ್ ಡಿಪಿಐ ಪಾತ್ರವೇನು ಎನ್ನುವುದು ಕಾಂಗ್ರೆಸ್ ಪಾಲಿಗೆ ಬಹು ಮುಖ್ಯವಾದ ಅಂಶವಾಗುತ್ತೆ. ಕಾರಣ, ಅಲ್ಪಸಂಖ್ಯಾತ ಸಮುದಾಯದ ಮತವನ್ನು ರಮಾನಾಥ ರೈ ಅತಿಹೆಚ್ಚು ನಂಬಿಕೊಂಡಿದ್ದಾರೆ. ಎಸ್ ಡಿಪಿಐ ಎಷ್ಟರ ಮಟ್ಟಿಗೆ ಮತ ವಿಭಜನೆ ಮಾಡುತ್ತದೆ ಎನ್ನುವುದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ತರಾತುರಿಯ ಸ್ಪರ್ಧೆ ಇಲ್ಲಿಂದ ಇರುವ ಸಾಧ್ಯತೆ ದಟ್ಟವಾಗಿದೆ.
ಕಳೆದ ಚುನಾವಣೆಯಲ್ಲಿ (2018) ಅಭ್ಯರ್ಥಿಗಳಿಗೆ ಬಿದ್ದ ಮತ:
| ಒಟ್ಟು ಚಲಾವಣೆಯಾದ ಮತಗಳು | 1,82,737 |
| ರಾಜೇಶ್ ನಾಯಕ್ (ಬಿಜೆಪಿ) | 97,802 |
| ರಮಾನಾಥ ರೈ (ಕಾಂಗ್ರೆಸ್) | 81,831 |
| ಗೆಲುವಿನ ಅಂತರ | 15,971 |
2018ರ ಅಂಕಿಅಂಶದ ಪ್ರಕಾರ ಮತದಾರರ ವಿವರ:
| ಪುರುಷರು | 1,09,567 |
| ಮಹಿಳೆಯರು | 1,12,192 |
| ಇತರರು | 06 |
| ಒಟ್ಟು ಮತದಾರರು | 2,21,765 |












Click it and Unblock the Notifications