Bangarapet Elections: ಕಾಂಗ್ರೆಸ್ ಒಳಜಗಳವೇ ಬಂಗಾರಪೇಟೆಯಲ್ಲಿ ಗೆಲುವಿಗೆ ಅಡ್ಡಿ?

ಬಂಗಾರಪೇಟೆ ಕೋಲಾರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. ಅತಿ ಹೆಚ್ಚು ದಲಿತ ಸಮುದಾಯದ ಮತಗಳನ್ನು ಹೊಂದಿರುವ ಕ್ಷೇತ್ರವಿದು. ಕೆ. ಸಿ. ರೆಡ್ಡಿಯವರು ಮೈಸೂರು ಪ್ರಾಂತ್ಯದ ಮೊದಲ ಮುಖ್ಯಮಂತ್ರಿಗಳಾಗಿದ್ದಾಗ ಬಂಗಾರಪೇಟೆ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದರು. ಬಂಗಾರಪೇಟೆ ಎಂದಾಕ್ಷಣ ಉದ್ಯಾನ ನಗರಿ ಬೆಂಗಳೂರು ನಗರದ ಜನರಿಗೆ ನೆನಪಾಗುವುದು ನಾಲಿಗೆಯಲ್ಲಿ ನೀರೂರಿಸುವ ಬಂಗಾರಪೇಟೆ ಪಾನಿಪೂರಿ.

ಕಳೆದ ಎರಡು ಚುನಾವಣೆಗಳಲ್ಲಿ ಸತತವಾಗಿ ಗೆಲ್ಲುವ ಮೂಲಕ ಕಾಂಗ್ರೆಸ್‌ನ ಎಸ್‌. ಎನ್. ನಾರಾಯಣ ಸ್ವಾಮಿ ಕ್ಷೇತ್ರವನ್ನು ಪಕ್ಷದ ಭದ್ರಕೋಟೆಯಾಗಿ ಮಾಡಿದ್ದಾರೆ. ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬಂಗಾರಪೇಟೆ ಕ್ಷೇತ್ರಕ್ಕೆ ಈ ಬಾರಿಯೂ ಎಸ್‌. ಎನ್. ನಾರಾಯಣ ಸ್ವಾಮಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಜೆಡಿಎಸ್ ಪಕ್ಷವೂ ಎಂ. ಮಲ್ಲೇಶ್‌ ಬಾಬು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದೆ. ಬಿಜೆಪಿ ಅಭ್ಯರ್ಥಿ ಯಾರು? ಎಂದು ತಿಳಿದರೆ ಕ್ಷೇತ್ರದ ಚುನಾವಣಾ ಕಣ ಅಂತಿಮ.

Bangarapet Constituency Map

ರಾಜಕೀಯ ಇತಿಹಾಸ; ಸಾಮಾನ್ಯ ಕ್ಷೇತ್ರವಾಗಿದ್ದ ಬಂಗಾರಪೇಟೆ 1967ರಲ್ಲಿ ಬೇತಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿತು. 1972ರ ತನಕ ಬೇತಮಂಗಲ ಬಳಿಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. 2008ರಲ್ಲಿ ಬಂಗಾರಪೇಟೆಯನ್ನು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಮರುವಿಂಗಡನೆ ಮಾಡಲಾಗಿದೆ. 1957 ಮತ್ತು 1962ರಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದಾಗ ಪಕ್ಷೇತರ ಅಭ್ಯರ್ಥಿ ಇ. ನಾರಾಯಣ ಗೌಡ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಶಾಸಕರಾಗಿದ್ದರು. 1967ರಲ್ಲಿ ಬೇತಮಂಗಲ ಕ್ಷೇತ್ರವಾದಾಗಲೂ ಕಾಂಗ್ರೆಸ್ ಟಿಕೆಟ್‌ನಲ್ಲಿ ಕಣಕ್ಕಿಳಿದು ಅವರು 3ನೇ ಬಾರಿಗೆ ಗೆದ್ದರು. 1972ರಲ್ಲಿ ಪಕ್ಷೇತರ ಅಭ್ಯರ್ಥಿ ದೊರೆಸ್ವಾಮಿ ನಾಯ್ಡು ಕಾಂಗ್ರೆಸ್‌ನ ಕೆ. ಸಿ. ವೆಂಕಟೇಶ್ ಮಣಿಸಿದರು.

ಬೇತಮಂಗಲ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಎಂದು 1978ರಲ್ಲಿ ಘೋಷಣೆ ಆಯಿತು. ಆಗ ಇಂದಿರಾ ಕಾಂಗ್ರೆಸ್ ಪಕ್ಷದ ಸಿ. ವೆಂಕಟೇಶಪ್ಪ ಜನತಾ ಪಕ್ಷದ ಟಿ. ಚನ್ನಯ್ಯರನ್ನು ಸೋಲಿಸಿದರು. 1983ರಲ್ಲಿ ಲಕ್ಷ್ಮಮ್ಮರನ್ನು ಸೋಲಿಸಿದರು. 1985ರಲ್ಲಿ ಕಾಂಗ್ರೆಸ್ ವಿ. ವೆಂಕಟಮುನಿಯನ್ನು ಕಣಕ್ಕಳಿಸಿತು. ಜನತಾ ಪಕ್ಷದ ಎ. ಚಿನ್ನಪ್ಪ ವಿರುದ್ಧ ಸೋತರು. ಬೇತಮಂಗಲ ನಾರಾಯಣ ಸ್ವಾಮಿ ಎಂದೇ ಖ್ಯಾತಿ ಪಡೆದಿರುವ ಎಂ. ನಾರಾಯಣಸ್ವಾಮಿ 1989ರಲ್ಲಿ ಜನತಾದಳದ ಅಭ್ಯರ್ಥಿಯಾದರು. ಸಿ. ವೆಂಕಟೇಶಪ್ಪ ಕಾಂಗ್ರೆಸ್ ಟಿಕೆಟ್ ಸಿಗದೇ ಪಕ್ಷೇತರರಾದರು. ಎಂ. ನಾರಾಯಣಸ್ವಾಮಿ ಗೆದ್ದರು. ಮತ್ತೆ ಕಾಂಗ್ರೆಸ್‌ಗೆ ಬಂದ ಸಿ. ವೇಂಕಟೇಶಪ್ಪ 1999ರಲ್ಲಿ ಎಂ. ನಾರಾಯಣಸ್ವಾಮಿ ಸೋಲಿಸಿದರು.

sn narayanaswamy bangarapet congress mla

ಸಾಕಷ್ಟು ಬದಲಾವಣೆಗಳು; 2004ರ ಚುನಾವಣೆ ವೇಳೆಗೆ ಬಂಗಾರಪೇಟೆಯಲ್ಲಿ ಹಲವು ಬದಲಾವಣೆ ಆಯಿತು. ಕಾಂಗ್ರೆಸ್ ಹಾಲಿ ಶಾಸಕರನ್ನು ಬಿಟ್ಟು ರಾಮಚಂದ್ರರನ್ನು ಅಭ್ಯರ್ಥಿ ಮಾಡಿತು. ಅತ್ತ ಜನತಾದಳದಿಂದ ಹೊರಬಂದಿದ್ದ ಎಂ. ನಾರಾಯಣಸ್ವಾಮಿ ಪಕ್ಷೇತರ ಅಭ್ಯರ್ಥಿಯಾದರು, 40,570 ಮತ ಪಡೆದರು. ಬಿಜೆಪಿ ಅಭ್ಯರ್ಥಿ ಬಿ. ಪಿ. ವೆಂಕಟಮುನಿಯಪ್ಪ 547 ಮತಗಳ ಅಂತರದಿಂದ ಗೆಲುವು ಕಂಡರು. ಬಂಗಾರಪೇಟೆಯಲ್ಲಿ ಬಿಜೆಪಿಯದ್ದು ಇದು ಮೊದಲ ಗೆಲುವು.

2008ರ ವೇಳೆಗೆ ಎಂ. ನಾರಾಯಣಸ್ವಾಮಿ ಕಾಂಗ್ರೆಸ್ ಸೇರಿದರು. ಬಿಜೆಪಿಯ ಬಿ. ಪಿ. ವೆಂಕಟಮುನಿಯಪ್ಪ ಸೋಲಿಸಿ ಕ್ಷೇತ್ರದಿಂದ 3ನೇ ಬಾರಿಗೆ ಆಯ್ಕೆಯಾದರು. ಆಪರೇಷನ್ ಕಮಲಕ್ಕೆ ಒಳಗಾದರು. 2011ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಕಾಂಗ್ರೆಸ್‌ನ ಎಸ್. ಎನ್. ನಾರಾಯಣಸ್ವಾಮಿ ಸೋಲಿಸಿ 4ನೇ ಬಾರಿಗೆ ಶಾಸಕರಾದರು. 2013ರಲ್ಲಿ ಎಂ. ನಾರಾಯಣಸ್ವಾಮಿ ಮತ್ತೆ ಬಿಜೆಪಿ ಅಭ್ಯರ್ಥಿಯಾದರು. ಆದರೆ ಜನರು ಕಾಂಗ್ರೆಸ್‌ನ ಎಸ್. ಎನ್. ನಾರಾಯಣಸ್ವಾಮಿ ಬೆಂಬಲಿಸಿದರು. 28,377 ಮತಗಳ ಅಂತರದಲ್ಲಿ ಅವರು ಗೆದ್ದು ಮೊದಲ ಬಾರಿಗೆ ಶಾಸಕರಾದರು.

2018ರಲ್ಲಿ ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದ ಬಿ. ಪಿ. ವೆಂಕಟಮುನಿಯಪ್ಪಗೆ ಟಿಕೆಟ್ ನೀಡಿತು. ಆದರೆ ಕಾಂಗ್ರೆಸ್‌ನ ಎಸ್. ಎನ್. ನಾರಾಯಣಸ್ವಾಮಿ 70,871 ಮತಗಳನ್ನು ಪಡೆದು ಗೆಲುವು ಕಂಡರು. ಜೆಡಿಎಸ್‌ನ ಮಲ್ಲೇಶ್‌ ಬಾಬು 49,300 ಮತ್ತು ಬಿಜೆಪಿಯ ಬಿ. ಪಿ. ವೆಂಕಟಮುನಿಯಪ್ಪ 33,533 ಮತಗಳನ್ನು ಪಡೆದರು. 2023ರ ಚುನಾವಣೆಗೆ ಸಹ ಕಾಂಗ್ರೆಸ್‌ನ ಎಸ್. ಎನ್. ನಾರಾಯಣಸ್ವಾಮಿ ಮತ್ತು ಮಲ್ಲೇಶ್‌ ಬಾಬು ಎದುರಾಳಿಗಳು. ಬಿಜೆಪಿ ಟಿಕೆಟ್ ಯಾರಿಗೆ? ಎಂಬುದು ಪ್ರಶ್ನೆ.

Bangarapet Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಎಸ್. ಎನ್. ನಾರಾಯಣಸ್ವಾಮಿ (ಕಾಂಗ್ರೆಸ್) 70, 871 ಮಲ್ಲೇಶ್‌ ಬಾಬು (ಜೆಡಿಎಸ್) 49,300
2013 ಎಸ್. ಎನ್. ನಾರಾಯಣಸ್ವಾಮಿ (ಕಾಂಗ್ರೆಸ್) 71,570 ಎಂ. ನಾರಾಯಣಸ್ವಾಮಿ (ಬಿಜೆಪಿ) 43,193
2008 (ಉಪ ಚುನಾವಣೆ) ಗೆಲುವು ಎಂ. ನಾರಾಯಣಸ್ವಾಮಿ (ಬಿಜೆಪಿ) 56,824 ಎಸ್. ಎನ್. ನಾರಾಯಣಸ್ವಾಮಿ (ಕಾಂಗ್ರೆಸ್) 52,781

ಎಂ. ನಾರಾಯಣಸ್ವಾಮಿ ಮತ್ತೆ ಟಿಕೆಟ್ ಕೇಳುತ್ತಿದ್ದಾರೆ. ಬಿ. ಪಿ. ವೆಂಕಟಮುನಿಯಪ್ಪ ಪುತ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ. ವಿ. ಮಹೇಶ್‌ಗೆ ಟಿಕೆಟ್ ಕೇಳಿದ್ದಾರೆ. ಭೋವಿ ಸಮುದಾಯದ ಶೇಷು, ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿ ಪತ್ನಿ ಶೈಲಜಾ ಹೆಸರು ಸಹ ಕೇಳಿ ಬರುತ್ತಿದೆ. ಆದರೆ ಯಾರು ಅಭ್ಯರ್ಥಿ? ಎಂಬ ಗುಟ್ಟು ಬಿಜೆಪಿ ಬಿಟ್ಟುಕೊಟ್ಟಿಲ್ಲ.

ಬಂಗಾರಪೇಟೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಹಣಾಹಣಿ ಎಂಬ ಮಾತಿದೆ. ಆದರೆ ಜೆಡಿಎಸ್‌ನ ಮಲ್ಲೇಶ್‌ ಬಾಬು ಕಳೆದ ಚುನಾವಣೆಯಲ್ಲಿ 49,300 ಮತ ಪಡೆದು ಪಕ್ಷದ ಪ್ರಭಾವವಿದೆ ಎಂದು ತೋರಿಸಿದ್ದಾರೆ. ಕೋಲಾರ ಕಾಂಗ್ರೆಸ್‌ನ ರಮೇಶ್ ಕುಮಾರ್ ಮತ್ತು ಕೆ. ಎಚ್. ಮುನಿಯಪ್ಪ ಬಣದ ಒಳಜಗಳ ಕಾಂಗ್ರೆಸ್‌ನ ಎಸ್. ಎನ್. ನಾರಾಯಣಸ್ವಾಮಿ ಹ್ಯಾಟ್ರಿಕ್‌ಗೆ ತಡೆ ಹಾಕಬಹುದು.

ಬಂಗಾರಪೇಟೆ ಕ್ಷೇತ್ರದ ಒಟ್ಟು ಮತದಾರರು 1,89,238. ಪುರುಷರು 95,339. ಮಹಿಳೆಯರು 93,741. ಇತರರು 30.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+