ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯಪಾಲರು ಹಿಂದಿಯಲ್ಲೇಕೆ ಭಾಷಣ ಮಾಡಬೇಕು?

By Prasad
|
Google Oneindia Kannada News

ಬೆಂಗಳೂರು, ಜ. 29 : ಹಿಂದಿ ಹೇರಿಕೆ ವಿರುದ್ಧದ ಹೋರಾಟಕ್ಕೆ ಜನವರಿ 25ರಂದು 50 ವರುಷಗಳು ಸಂದವು. ಇದರ ನೆನಪಿಗಾಗಿ ಬಸವನಗುಡಿಯ ಬಿಪಿ ವಾಡಿಯಾ ರಸ್ತೆಯಲ್ಲಿರುವ ಮನೋರಮಾ ಹಾಲ್ ನಲ್ಲಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಆದರೆ, ಇದಾಗಿ ಕೆಲವೇ ದಿನಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ಕನ್ನಡಿಗರು ಮತ್ತೆ ದನಿ ಎತ್ತುವಂತಾಗಿದೆ.

ಮೊಟ್ಟಮೊದಲ ಬಾರಿಗೆ ಕರ್ನಾಟಕದ ರಾಜ್ಯಪಾಲರೊಬ್ಬರು ಜಂಟಿ ಸದನವನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡುತ್ತಿರುವುದು ಹಲವಾರು ಕನ್ನಡಿಗರನ್ನು ಕೆರಳಿಸಿದೆ. ರಾಜ್ಯದ ಇತಿಹಾಸದಲ್ಲಿ ಇಂಥ ವಿದ್ಯಮಾನ ನಡೆದಿರಲಿಲ್ಲ. ಆದರೆ, ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಸದನವನ್ನುದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಲಿದ್ದಾರೆ. ಇದಕ್ಕೆ ಸದನದ ಅನುಮೋದನೆಯೂ ದೊರಕಿದೆ.

ಕನ್ನಡೇತರ ರಾಜ್ಯಪಾಲರು ಇಲ್ಲಿಯವರೆಗೆ ಕನ್ನಡದಲ್ಲಿ ಬರೆದುಕೊಟ್ಟ ಭಾಷಣವನ್ನು ಕಷ್ಟಪಟ್ಟಾದರೂ ಓದುತ್ತಿದ್ದರು ಅಥವಾ ಇಂಗ್ಲಿಷ್ ನಲ್ಲಿ ಓದುತ್ತಿದ್ದರು. ಇದು ಅನೂಚಾನವಾಗಿ ನಡೆದುಕೊಂಡು ಬಂದಂತಹ ಸಂಪ್ರದಾಯ. ಇದು ರಾಜ್ಯದ ಮೇಲೆ ಹಿಂದಿ ಹೇರಿಕೆಯ ಒಂದು ಭಾಗ ಎಂದು ಕನ್ನಡದ ಕಟ್ಟಾಳುಗಳು ಕೆರಳಿನಿಂತಿದ್ದಾರೆ. [ಬನವಾಸಿ ಬಳಗದಿಂದ ಹಿಂದಿ ಹೇರಿಕೆ ಹೋರಾಟದ ನೆನಪು]

Why should governor address joint session in Hindi?

"ಗುಜರಾತಿ ಭಾಷೆಯಲ್ಲಿ ಮಾತನಾಡಿದ್ದರೆ, ಇನ್ನೂ ಕನ್ನಡ ಕಲಿತಿಲ್ಲ ಅಂತ ಒಂದು ಲೆಕ್ಕ; ಆದರೆ ಹಿಂದೀಲೆ ಮಾತಾಡ್ತೀನಿ ಅನ್ನೋ ಹಠ ನೋಡಿದರೆ ಇವರ ಉದ್ದೇಶ ಹಿಂದಿ ಸಾಮ್ರಾಜ್ಯ ಸ್ಥಾಪನೆ ಅಲ್ಲದೆ ಮತ್ತಿನೇನು?" ಎಂದು ಗಣೇಶ್ ಚೇತನ್ ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಇದು ಇವರೊಬ್ಬರ ಪ್ರಶ್ನೆ ಮಾತ್ರವಲ್ಲ, ಹಿಂದಿ ಬೇಡವೆನ್ನುವವರ ಪ್ರಶ್ನೆಯೂ ಆಗಿದೆ.

ಹಿಂದಿ ಹೇರಿಕೆ ಬಗ್ಗೆ ಸಾಕಷ್ಟು ಹೋರಾಟಗಳು ನಡೆಯುತ್ತಿದ್ದರೂ ಆ ಭಾಷೆ ಬೆಂಗಳೂರಿನಲ್ಲಿ ಸಾಕಷ್ಟು ದಾಂಗುಡಿಯಿಟ್ಟಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ, ಸಾಫ್ಟ್ ವೇರ್ ಕಂಪನಿಗಳಲ್ಲಿ, ಮಾಲ್ ಗಳಲ್ಲಿ, ಮೆಟ್ರೋಗಳಲ್ಲಿ ತನ್ನ ಇರುವನ್ನು ಸ್ಥಾಪಿಸುತ್ತ ಬಂದಿದೆ. ಇನ್ನು ಕಾಲೇಜು ಹುಡುಗ ಹುಡುಗಿಯರ ಬಾಯಲ್ಲಿ ಹಿಂದಿ ಬಿಟ್ಟರೆ ಬೇರೆ ಭಾಷೆಯೇ ಇಲ್ಲವೇನೋ ಎಂಬಂತೆ ನಲಿದಾಡುತ್ತಿರುವುದು ವಿಪರ್ಯಾಸ. [ಹಿಂದಿ ಹೇರಿಕೆ. ಕರವೇ ನಾರಾಯಣ ಗೌಡ್ರ ಲೇಖನ - 1]

"ವಜುಭಾಯಿ ವಾಲಾ ಅವರು ಸರಕಾರಕ್ಕೆ ಹಿಂದಿಯಲ್ಲಿಯೇ ಭಾಷಣ ತರ್ಜುಮೆ ಮಾಡಬೇಕೆಂದು ಆದೇಶಿಸಿದ್ದರೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರಾಗಲಿ ಏಕೆ ಕನಿಷ್ಠ ಪ್ರತಿಭಟನೆ ಸಲ್ಲಿಸಿಲ್ಲ? ಕರ್ನಾಟಕವೇನು ಹಿಂದಿ ಕಾಲೋನಿಯಾ? ವಿಧಾನಸಭೆಯಲ್ಲಿಯೇ ಇದಕ್ಕೆ ಅವಕಾಶ ಮಾಡಿಕೊಟ್ಟರೆ, ಮುಂದೆ ಹಿಂದಿ ಹೇರಿಕೆಯನ್ನು ತಡೆಗಟ್ಟಲಾದರೂ ಹೇಗೆ ಸಾಧ್ಯ" ಎಂದು ವಸಂತ್ ಶೆಟ್ಟಿ ಕೆಂಡ ಕಾರಿದ್ದಾರೆ.

ಆತ್ಮಗೌರವವಿಲ್ಲದವರು ಮಾತ್ರ ಹಿಂದಿ ಭಾಷಣಕ್ಕೆ ಅವಕಾಶ ನೀಡುತ್ತಾರೆ ಎಂಬ ಅಭಿಪ್ರಾಯ ಅವರು ಮಂಡಿಸಿದ್ದಾರೆ. ಮಂತ್ರಿಗಳು ಪ್ರತಿಭಟಿಸದಿದ್ದರೇನಂತೆ ಅವರನ್ನು ಆರಿಸಿರುವ ಕನ್ನಡಿಗರಿಗಾದರೂ ಪ್ರತಿಭಟಿಸುವ ಅಧಿಕಾರವಿದೆಯಲ್ಲವೆ? ಫೆಬ್ರವರಿ 2ರಿಂದ ಆರಂಭವಾಗಲಿರುವ ಜಂಟಿ ಅಧಿವೇಶನದಲ್ಲಿ ವಾಲಾ ಹಿಂದಿಯಲ್ಲಿ ಭಾಷಣ ಮಾಡಬೇಕಾ ಮಾಡಬಾರದಾ? ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಕೂಗು ವಿಧಾನಸಭೆ ಗೋಡೆಯನ್ನು ಅಪ್ಪಳಿಸಲಿ. ಅಂದಹಾಗೆ, ವಾಟಾಳ್ ನಾಗರಾಜ್ ಅವರೇ ಎಲ್ಲಿದ್ದೀರಿ? [ಸಂವಿಧಾನವೇ ಹುಳುಕನ್ನು ಪೊರೆದಿರುವಾಗ]

English summary
Why should governor Vajubhai Vala address joint session in Hindi? For the first time a governor addressing session in Hindi. Karnataka MLAs have least bothered to oppose it. Don't they have self respect? Kannadigas are asking. But, on social media protests have started on imposition of Hindi on Kannadigas. Joint session will begin on 2nd February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X