ಭಟ್ಕಳ ಮೂಲದ ನಾಲ್ಕನೇ ಶಂಕಿತ ಉಗ್ರ ಬಲೆಗೆ
ಮಂಗಳೂರು/ಬೆಂಗಳೂರು, ಜ.11: ದುಬೈಗೆ ಹಾರಲು ಯತ್ನಿಸುತ್ತಿದ್ದ ಭಟ್ಕಳ ಮೂಲದ ಶಂಕಿತ ಉಗ್ರನೊಬ್ಬನನ್ನು ಬೆಂಗಳೂರು ಪೊಲೀಸರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬೆಂಗಳೂರು, ಹೈದರಾಬಾದ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತನನ್ನು ವಿಚಾರಣೆ ನಡೆಸಲಾಗುತ್ತಿದೆ.
ಎರಡು ದಿನ ಹಿಂದೆ ಬಂಧಿತರಾಗಿದ್ದ ಅಫಾಕ್ ಮತ್ತು ಸುಬೂರ್ ನೀಡಿದ ಮಾಹಿತಿಯಂತೆ ಎಸಿಪಿ ರವಿ ಕುಮಾರ್ ತಂಡ ಮಂಗಳೂರಿಗೆ ಹೊರಟು ತನಿಖೆ ಕೈಗೊಳ್ಳುವ ಮುನ್ನವೇ ಎಸ್ಕೇಪ್ ಆಗಲು ರಿಯಾಜ್ ಅಹ್ಮದ್ ಯತ್ನಿಸಿದ್ದ ಎಂದು ತಿಳಿದು ಬಂದಿದೆ.
ಶಂಕಿತ ಉಗ್ರನನ್ನು 33 ವರ್ಷದ ರಿಯಾಜ್ ಅಹ್ಮದ್ ಸಯೀದ್ ಎಂದು ಗುರುತಿಸಲಾಗಿದೆ. ಎಸಿಪಿ ಓಂಕಾರಯ್ಯ, ಇನ್ಸ್‍ಪೆಕ್ಟರ್ ರಂಗಪ್ಪ ಹಾಗೂ ಮಂಗಳೂರು ನಗರ ಡಿಸಿಪಿ ಸಂತೋಷ್ ಬಾಬು ನೇತೃತ್ವದ ತಂಡ ಸೈಯದ್ ನನ್ನು ಬಂಧಿಸಿದೆ. ಆದರೆ ಇದಕ್ಕೂ ಮುನ್ನ ಸಯೀದ್ ಎಸ್ಕೇಪ್ ಆಗುವ ಮಾಹಿತಿ ಪೊಲೀಸರಿಗೆ ದೊರೆತಿತ್ತು.

ಶನಿವಾರ ರಾತ್ರಿ ಬಜ್ಪೆ ವಿಮಾನ ನಿಲ್ದಾಣದಿಂದ 11.20ರ ಜೆಟ್ ಏರ್ ವೇಸ್ ನಲ್ಲಿ ದುಬೈಗೆ ತೆರಳಲು ಸಯೀದ್ ಟಿಕೆಟ್ ಬುಕ್ ಆಗಿತ್ತು. ಭಟ್ಕಳದಿಂದ ನೇರವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಯೀದ್ ಬಗ್ಗೆ ಮಾಹಿತಿ ಪಡೆದುಕೊಂಡ ಬೆಂಗಳೂರು ಪೊಲೀಸರು ಆತನನ್ನು ಬಂಧಿಸಿ ರಾತ್ರಿಯೇ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಬಂಧಿತ ಸಯೀದ್ ಚರ್ಚ್ ಸ್ಟ್ರೀಟ್ ಪ್ರಕರಣದಲ್ಲಿ ಶಾಮೀಲಾಗಿದ್ದ ಎಂದು ಬೆಂಗಳೂರು ಪೊಲೀಸರಿಗೆ ಮಾಹಿತಿ ದೊರೆತಿದೆ ಎನ್ನಲಾಗಿದೆ. ಬಂಧಿತ ಸಯೀದ್ ಗೆ ಭಟ್ಕಳ ಸಹೋದರರ ಜೊತೆ ಸಂಪರ್ಕವಿರುವ ಮಾಹಿತಿಯೂ ಸಿಕ್ಕಿದೆ ಎನ್ನಲಾಗಿದೆ.












Click it and Unblock the Notifications