ಬೆಂಗಳೂರಿನಲ್ಲಿರುವುದು 14 ಲಕ್ಷ ಮರಗಳು ಮಾತ್ರ
ಬೆಂಗಳೂರು, ಮೇ 9 : ಬೆಂಗಳೂರನ್ನು ಉದ್ಯಾನನಗರಿ ಎಂದು ಕರೆಯುವ ಮುನ್ನ ಒಮ್ಮೆ ಆಲೋಚಿಸಬೇಕಾಗಿದೆ. ಏಕೆಂದರೆ, ನಗರದಲ್ಲಿ ಕೇವಲ 14 ಲಕ್ಷ ಮರಗಳಿವೆ ಎಂಬ ಆತಂಕಕಾರಿ ಮಾಹಿತಿ ಅಧ್ಯಯನದಿಂದ ಹೊರಬಿದ್ದಿದೆ. ಅಧ್ಯಯನದ ಪ್ರಕಾರ ನಗರದ ಆರು ಮಂದಿಗೆ ಕೇವಲ ಒಂದು ಮರವಿದೆ.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಂಗಳೂರು ನಗರದ ಜನಸಂಖ್ಯೆ ಒಂದು ಕೋಟಿ ತಲುಪಿತ್ತಿದೆ. ಆದರೆ, ನಗರದಲ್ಲಿ ಆರು ಮಂದಿಗೆ ಒಂದು ಮರವಿದ್ದು ಇದು ಪ್ರಾಕೃತಿಕ ಅಸಮತೋಲನ ಸೂಚಿಸುತ್ತದೆ ಮತ್ತು ಮಾನವನ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತದೆ ಎಂದು ಅಧ್ಯಯನ ಆಂತಕ ವ್ಯಕ್ತಪಡಿಸಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ಭಾರತೀಯ ವಿಜ್ಞಾನ ಸಂಸ್ಥೆಯು ನಡೆಸಿದ ‘ಬೆಂಗಳೂರಿನ ವೃಕ್ಷಗಳು' ಕುರಿತ ಅಧ್ಯಯನ ವರದಿಯಲ್ಲಿ ನಗರದಲ್ಲಿ 14,78,412 ವೃಕ್ಷಗಳಿವೆ ಎಂಬ ಅಂಶ ಬೆಳಕಿಗೆ ಬಂದಿದೆ. ನಗರದ ಬಿಬಿಎಂಪಿ ವಾರ್ಡ್ ವಾರು ಚಿತ್ರಗಳನ್ನು ಸೆರೆಹಿಡಿದು ನಂತರ, ಅವುಗಳನ್ನು ಆರು ವಿಭಾಗಮಾಡಿ ಈ ಅಧ್ಯಯನ ವರದಿ ತಯಾರಿಸಲಾಗಿದೆ. [ಎಸಿ ಸಿಟಿ ಬೆಂಗಳೂರು ಆಗಲಿದೆ ಬೆಂಗಾಡು!]
ವರದಿ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕ ಡಾ.ಟಿ.ವಿ.ರಾಮಚಂದ್ರ ಅವರು, ಉಪಗ್ರಹ ಆಧಾರಿತ ತಂತ್ರಜ್ಞಾನದ ಮೂಲಕ ನಗರ ವ್ಯಾಪ್ತಿಯಲ್ಲಿರುವ ವಾರ್ಡ್ ವಾರು ವೃಕ್ಷಗಳ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. ಅವುಗಳನ್ನು ಆರು ವಿಭಾಗಗಳಾಗಿ ವಿಂಗಡಿಸಿ, ಸಮೀಕ್ಷೆ ಮಾಡಲಾಗಿದ್ದು, ಇವುಗಳಲ್ಲಿ ಈ ಅಂಕಿಅಂಶಗಳು ತಿಳಿದುಬಂದಿದೆ ಎಂದು ಹೇಳಿದ್ದಾರೆ.
ವರ್ತೂರು, ಬೆಳ್ಳಂದೂರು, ಅಗರ, ಅರಮನೆ ನಗರ ವಾರ್ಡ್‌ಗಳಲ್ಲಿ 40,000ಕ್ಕೂ ಅಧಿಕ ಮರಗಳಿವೆ. ಆದರೆ, ಚಿಕ್ಕಪೇಟೆ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ, ಕುಶಾಲನಗರ ವಾರ್ಡ್‌ಗಳಲ್ಲಿ 100ಕ್ಕಿಂತ ಕಡಿಮೆ ಮರಗಳಿವೆ. ಈ ಮರಗಳು ಇನ್ನೆರಡು ವರ್ಷಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿ ಆತಂಕ ವ್ಯಕ್ತಪಡಿಸಿದೆ.
ನಗರದಲ್ಲಿ ಮರಗಳ ಮಾರಣ ಹೋಮದಿಂದಾಗಿ ಉಷ್ಣಾಂಶ ಹೆಚ್ಚಾಗುತ್ತಿದೆ. ನಗರದ ಪರಿಸರವನ್ನು ಸ್ವಚ್ಛವಾಗಿ ಇಡಬೇಕಾದರೆ, ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿಯುವುದನ್ನು ತಪ್ಪಿಸಬೇಕಿದೆ ಎಂದು ಡಾ.ಟಿ.ವಿ.ರಾಮಚಂದ್ರ ಅವರು ಒತ್ತಾಯಿಸಿದ್ದಾರೆ.
ಗಿಡ ನೆಡಲು ಕ್ರಮ ಕೈಗೊಳ್ಳಿ : ವರದಿ ಕುರಿತು ಮಾತನಾಡಿದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನಾಚಾರ್ಯ ಅವರು, ರಸ್ತೆ ವಿಸ್ತರಣೆಯ ಯೋಜನೆಯಿಂದಾಗಿ ಮರಗಳ ನಾಶವಾಗುತ್ತಿದೆ. ಒಂದು ಮರ ಕಡಿದರೆ, ಮೂರು ಮರಗಳನ್ನು ನೆಡಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸುವ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.












Click it and Unblock the Notifications