ಅಪ್ಪಾ, ನನ್ನ ಬದುಕಿಸಿಕೋ ಎಂದು ಆ ಪುಟಾಣಿ ಗೋಗರೆದರೂ...

Posted By:
Subscribe to Oneindia Kannada

ಬೆಂಗಳೂರು, ಮೇ 17 : "ಅಪ್ಪಾ, ನಿನ್ನ ಹತ್ರ ದುಡ್ಡಿಲ್ಲ ಅಂತ ಹೇಳ್ತೀಯಾ. ಕನಿಷ್ಠಪಕ್ಷ ನಮ್ಮ ಬಳಿ ಈ ಮನೆಯಾದರೂ ಇದೆ. ದಯವಿಟ್ಟು ಈ ಮನೆಯನ್ನು ಮಾರಿ ನನ್ನ ಚಿಕಿತ್ಸೆಗೆ ಹಣ ಒದಗಿಸಿಕೊಡಪ್ಪಾ. ವೈದ್ಯರು ಹೇಳ್ತಿದ್ದಾರೆ ನಾನು ಜಾಸ್ತಿ ದಿನ ಬದುಕಿರುವುದಿಲ್ಲವಂತೆ. ಏನಾದ್ರೂ ಮಾಡಪ್ಪಾ, ನನ್ನನ್ನು ಉಳಿಸಿಕೊ..."

ಹೀಗೆಂದು ಪುಟ್ಟ ಮಗಳೊಬ್ಬಳು ತನ್ನ ತಂದೆಯನ್ನು ಗೋಗರೆದು ಕೇಳಿಕೊಂಡ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಆದರೆ, ಈಗ ವೈರಲ್ ಆದರೆ ಏನು ಪ್ರಯೋಜನ? ಮೊದಲೇ ಜನರ ಗಮನಕ್ಕೆ ಬಂದಿದ್ದರೆ, ಜನರೇ ತಂದೆಯ ಸ್ಥಾನದಲ್ಲಿ ನಿಂತು ಆಕೆಯನ್ನು ಬದುಕಿಸಿಕೊಳ್ಳುತ್ತಿದ್ದರೇನೋ... ಆದರೆ, ದುರಾದೃಷ್ಟವಶಾತ್ ಹಾಗಾಗಿಲ್ಲ. ಆ ಪುಟ್ಟ ಹುಡುಗಿ ಇನ್ನಿಲ್ಲ! ['ಯಾವ ತಂದೆ ಮಗಳನ್ನು ಸಾಯಲು ಬಿಡಲು ಸಾಧ್ಯ?']

ಹದಿಮೂರು ವರ್ಷದ ಆ ನತದೃಷ್ಟ ಹುಡುಗಿ ಇದ್ದಿದ್ದು ವಿಜಯವಾಡಾದಲ್ಲಿ. ಬೋನ್ ಮ್ಯಾರೋ ಕ್ಯಾನ್ಸರ್ ನಿಂದ ಆಕೆ ಬಳಲುತ್ತಿದ್ದಳು. ಕ್ಯಾನ್ಸರ್ ಕಟ್ಟಕಡೆಯ ಹಂತ ತಲುಪಿತ್ತು. ಆಕೆಯ ಚಿಕಿತ್ಸೆಗೆ ಭಾರೀ ಹಣ ಬೇಕಾಗಿತ್ತು. ಅಪ್ಪ ದೊಡ್ಡ ಶ್ರೀಮಂತ. ಆದರೆ, ತನ್ನ ಸ್ವಂತ ಮಗಳನ್ನು ಉಳಿಸಿಕೊಳ್ಳಲೂ ಆತ ಒಂದು ಕಾಸೂ ಬಿಚ್ಚಲಿಲ್ಲ, ನಿರ್ದಯಿ. ಅಂದ ಹಾಗೆ, 'ಅಪ್ಪ' ಅಂತ ಕರೆಯಿಸಿಕೊಳ್ಳಲೂ ಅನರ್ಹನಾದ ಆ ವ್ಯಕ್ತಿ ಶಿವಕುಮಾರ್ ಬದುಕಿರುವುದು ನಮ್ಮ ಬೆಂಗಳೂರಿನಲ್ಲಿ!

ಆ ಹುಡುಗಿಯ ಹೆಸರು ಸಾಯಿಶ್ರೀ. ನೋಡಲು ಮುದ್ದಾಗಿದ್ದಳು, ಆಟಪಾಠದಲ್ಲೂ ಬಲೇ ಚುರುಕು. ಆದರೇನು ಮಾಡುವುದು, ಹಾಳು ಕ್ಯಾನ್ಸರ್ ಆಕೆಯನ್ನು ಹಿಂಡಿಹಿಪ್ಪೆಯನ್ನಾಗಿ ಮಾಡಿತ್ತು. ಆಕೆಯ ತಾಯಿ ಮಗಳ ಹೆಸರಲ್ಲೇ ಇದ್ದ ಮನೆಯನ್ನು ಮಾರಲು ಯತ್ನಿಸಿದರೂ, ನಿರ್ದಯಿ ಅಪ್ಪ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಮನೆ ಮಾರದಂತೆ ಮಾಡಿದ್ದ. ಕೊನೆಗೂ ಸಾಯಿಶ್ರೀ ದೇವರ ಪಾದ ಸೇರೇಬಿಟ್ಟಳು. [ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]

ವಿಡಿಯೋದಲ್ಲಿ ಆಕೆಯ ಮಾತುಗಳು ಹೀಗಿದ್ದವು

ವಿಡಿಯೋದಲ್ಲಿ ಆಕೆಯ ಮಾತುಗಳು ಹೀಗಿದ್ದವು

"ಅಪ್ಪ, ತಿಂಗಳುಗಳಿಂದ ಶಾಲೆಗೇ ಹೋಗಿಲ್ಲ. ಸ್ನೇಹಿತರೊಂದಿಗೆ ಆಟವಾಡಬಯಸುತ್ತೇನೆ. ಚಿಕಿತ್ಸೆ ಸಿಕ್ಕು ಗುಣವಾದರೆ ಸಂತೋಷದಿಂದ ಶಾಲೆಗೆ ಹೋಗುತ್ತೇನೆ. ನನ್ನ ಅಮ್ಮನ ಬಳಿ ನಿಜವಾಗ್ಲೂ ದುಡ್ಡಿಲ್ಲ. ದಯವಿಟ್ಟು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸು. ನನ್ನನ್ನು ಬದುಕಿಸಿಕೋ..." ಎಂದು ಹೃದಯ ಕಿತ್ತುಬರುವಂತೆ ಕೇಳಿಕೊಂಡಿದ್ದಳು.[ದೊರೆಗಂತೂ ಮನಸಿಲ್ಲ, ನಾವೂ ಹೃದಯ ಕಳ್ಕೊಂಡರೆ ಗೋವು ಬದ್ಕೋದು ಹೇಗೆ]

ಬೆಂಗಳೂರನಲ್ಲಿದ್ದ ಅಪ್ಪ ಕಲ್ಲು ಹೃದಯದವನಾಗಿದ್ದ

ಬೆಂಗಳೂರನಲ್ಲಿದ್ದ ಅಪ್ಪ ಕಲ್ಲು ಹೃದಯದವನಾಗಿದ್ದ

ಈ ಮಾತನ್ನು ಕೇಳಲು ಅಪ್ಪ ಕಲ್ಲು ಹೃದಯದವನಾಗಿದ್ದ. ಸಾಯಿಶ್ರೀ ಮಗುವಾಗಿದ್ದಾಗಲೇ ಗಂಡ ಹೆಂಡತಿ ನಡುವೆ ಮನಸ್ತಾಪ ಬಂದು ಇಬ್ಬರೂ ದೂರವಾಗಿದ್ದರು. ತಾಯಿ ಮಗಳು ವಿಜಯವಾಡಾದಲ್ಲಿ ನೆಲೆಸಿದ್ದರೆ, ಅಪ್ಪ ಬೆಂಗಳೂರಿನಲ್ಲಿದ್ದ. ಎಲ್ಲಿದ್ದರೇನಂತೆ, ಸ್ವಂತಃ ಮಗಳು ಸಾಯುವ ಸ್ಥಿತಿಯಲ್ಲಿದ್ದರೆ ಚಿಕಿತ್ಸೆ ಕೊಡಿಸಲು ಅವನಿಗೆ ಆಗುತ್ತಿರಲಿಲ್ಲವೆ? ಮುದ್ದಾಗಿದ್ದ ಮಗಳ ಮೇಲೆ ಅಂಥ ದ್ವೇಷವೇನಿತ್ತು?[ಮದುವೆ ವಾರ್ಷಿಕೋತ್ಸವ ದಿನವೇ ಮಸಣ ಸೇರಿದ ಸಬ್ ಇನ್ ಸ್ಪೆಕ್ಟರ್]

ಚಿಕಿತ್ಸೆಯೂ ಇಲ್ಲ, ಹಣವನ್ನೂ ನೀಡಲಿಲ್ಲ

ಚಿಕಿತ್ಸೆಯೂ ಇಲ್ಲ, ಹಣವನ್ನೂ ನೀಡಲಿಲ್ಲ

2016ರ ಆಗಸ್ಟ್ 27ರಂದು ಸಾಯಿಶ್ರೀ ರಕ್ತ ಪರೀಕ್ಷೆ ಮಾಡಿದಾಗ ಆಕೆಗೆ ಕ್ಯಾನ್ಸರ್ ಇದೆಯೆಂದು ಪತ್ತೆಯಾಯಿತು. ಕಿಮೋಥೆರಪಿಗೆ 10 ಲಕ್ಷ ಮತ್ತು ಬೋನ್ ಮ್ಯಾರೋ ಕಸಿಗೆ 30 ಲಕ್ಷ ರುಪಾಯಿ ಬೇಕೆಂದು ವೈದ್ಯರು ಹೇಳಿದ್ದರು. ಇದನ್ನು ಸಾಯಿಶ್ರೀಯ ಅಪ್ಪನ ಬಳಿ ಪ್ರಸ್ತಾಪಿಸಿದಾಗ, ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಬಾ ಎಂದಿದ್ದ. ಇಲ್ಲಿಗೆ ಕರೆದುಕೊಂಡು ಬಂದರೆ, ಚಿಕಿತ್ಸೆಯೂ ಇಲ್ಲ, ಹಣವನ್ನೂ ನೀಡಲಿಲ್ಲ ಎಂದು ಆರೋಪಿಸುತ್ತಾರೆ ಸಾಯಿಶ್ರೀ ತಾಯಿ ಸುಮಾ.

ಅಪ್ಪ ಆಕೆಯನ್ನು ಸರಿಯಾಗಿ ನೋಡಿಕೊಂಡಿಲ್ಲ

ಅಪ್ಪ ಆಕೆಯನ್ನು ಸರಿಯಾಗಿ ನೋಡಿಕೊಂಡಿಲ್ಲ

ಮಗಳನ್ನು ಬೆಂಗಳೂರಿನಲ್ಲಿ ಬಿಟ್ಟು ಬಂದಾಗಲೂ ಶಿವಕುಮಾರ್ ಎಂಬ ಹೆಸರಿನ ಅಪ್ಪ ಆಕೆಯನ್ನು ಸರಿಯಾಗಿ ನೋಡಿಕೊಂಡಿಲ್ಲ, ಹೊಡಿದುಬಡಿದು ಮಾಡುತ್ತಿದ್ದ. ಸಾಯಿಶ್ರೀ ಅಳುತ್ತಾ ಅಮ್ಮನಿಗೆ ಫೋನ್ ನಲ್ಲಿ ಹೇಳಿದಾಗ, ಬೆಂಗಳೂರಿಗೆ ಓಡಿಬಂದ ಸುಮಾ ಅವರು ಆಕೆಯನ್ನು ಮರಳಿ ವಿಜಯವಾಡಾಗೆ ಕರೆದುಕೊಂಡು ಬಂದು ಪೊಲೀಸರಿಗೆ ದೂರು ನೀಡಿದರು. ಆದರೆ, ಅಪ್ಪನಿಗೆ ರಾಜಕೀಯ ಬೆಂಬಲ ಇದ್ದಿದ್ದರಿಂದ ಪೊಲೀಸರು ದೂರು ಸ್ವೀಕರಿಸಲೇ ಇಲ್ಲ.

ಮೇ 14ರಂದು ಕೊನೆಯುಸಿರೆಳೆದಳು

ಮೇ 14ರಂದು ಕೊನೆಯುಸಿರೆಳೆದಳು

ಸಾಲದೆಂಬಂತೆ, ಸಾಯಿಶ್ರೀ ಹೆಸರಲ್ಲಿದ್ದ ಮನೆಯನ್ನು ಮಾರಲು ಅವಕಾಶ ನೀಡಲಿಲ್ಲ. ಶಿವಕುಮಾರ್ ಸಹೋದರ ಟಿಡಿಪಿ ಶಾಸಕ ಬೋಂಡಾ ಉಮಾಮಹೇಶ್ವರ ಅವರ ಸಹಾಯದಿಂದ ಮನೆ ಮಾರದಂತೆ ಮಾಡಿದ್ದ ಅಪ್ಪ. ಸಕಾರಕ್ಕೆ ಚಿಕಿತ್ಸೆ ಸಿಗದೆ ಸಾಯಿಶ್ರೀ ಕೊನೆಗೂ ಮೇ 14ರಂದು ಕೊನೆಯುಸಿರೆಳೆದಳು. ವೈದ್ಯೆಯಾಗಬೇಕೆಂದು ಕನಸು ಕಂಡಿದ್ದ ಸಾಯಿಶ್ರೀಯ ಕನಸು ಮಣ್ಣಲ್ಲಿ ಹೂತುಹೋಗಿದೆ.

ಈಗ ಮಾನವ ಹಕ್ಕು ಆಯೋಗ ಈ ಪ್ರಕರಣವನ್ನು ತೆಗೆದುಕೊಂಡಿದ್ದು, ಶಿವಕುಮಾರ್ ಮತ್ತು ಶಾಸಕನ ವಿರುದ್ಧ ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಮುಂದಾಗಿದ್ದಾರೆ. ಆದರೆ, ಶಿವಕುಮಾರ್ ವಿರುದ್ಧ ಕೇಸು ದಾಖಲಾದ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a heart wrenching video, a girl had begged her father to give money for her bone marroaw cancer treatment. The father living in Bengaluru did not give even a single paisa. The video went viral only after her death.
Please Wait while comments are loading...