ಜಯಲಲಿತಾ ಆರೋಪ ಮುಕ್ತ, ಬಿ.ವಿ.ಆಚಾರ್ಯ ಸಂದರ್ಶನ
ಬೆಂಗಳೂರು, ಮೇ 11 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಆರೋಪ ಮುಕ್ತಗೊಳಿಸಿ ಕರ್ನಾಟಕ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ. ಇದರಿಂದ ಜಯಲಲಿತಾ ಅವರಿಗೆ ಸಮಾಧಾನ ಸಿಕ್ಕಂತಾಗಿದೆ.
ಸೋಮವಾರ 918 ಪುಟಗಳ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಜಯಲಲಿತಾ, ವಿ.ಕೆ.ಶಶಿಕಲಾ, ಜೆ.ಇಳವರಸಿ ಮತ್ತು ವಿ.ಎನ್.ಸುಧಾಕರನ್ ಅವರನ್ನು ದೋಷಮುಕ್ತಗೊಳಿಸಿದರು. ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ವಿ.ಆಚಾರ್ಯ ತೀರ್ಪಿನ ಪ್ರತಿ ಸಿಕ್ಕಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ. [ಜಯಾ ತೀರ್ಪು ಕ್ಷಣ-ಕ್ಷಣದ ಮಾಹಿತಿ]

ಒನ್ ಇಂಡಿಯಾ ಜೊತೆ ಮಾತನಾಡಿದ ಬಿ.ವಿ.ಆಚಾರ್ಯ ಅವರು, 'ಹೈಕೋರ್ಟ್ ತೀರ್ಪಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು ಮತ್ತು ಜಯಲಲಿತಾ ಅವರ ವಿರುದ್ಧದ ಆರೋಪಗಳನ್ನು ಸಾಬೀತು ಮಾಡಲು ಪ್ರಾಸಿಕ್ಯೂಷನ್ ಅಗತ್ಯ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿತ್ತು' ಎಂದು ಹೇಳಿದರು. ಆಚಾರ್ಯ ಅವರ ಸಂದರ್ಶನದ ವಿವರ ಇಲ್ಲಿದೆ.... [ಇಬ್ಬರು ಸ್ವಾಮಿಗಳ ಕೈಯಲ್ಲಿ ಅಮ್ಮನ ರಾಜಕೀಯ ಭವಿಷ್ಯ!]
ತೀರ್ಪಿನ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
'ಪ್ರಾಸಿಕ್ಯೂಷನ್ ಜಯಲಲಿತಾ ಅವರ ವಿರುದ್ಧದ ಆರೋಪಗಳನ್ನು ಸಾಬೀತು ಮಾಡಲು ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು. ಕೆಳಹಂತದ ನ್ಯಾಯಾಲಯ ಎಲ್ಲಾ ವಿವರವಾದ ವಿಚಾರಣೆಯನ್ನು ನಡೆಸಿ ಶಿಕ್ಷೆ ನೀಡಿತ್ತು. ಹೈಕೋರ್ಟ್ ಶಿಕ್ಷೆಯನ್ನು ರದ್ದುಗೊಳಿಸಿದೆ'.
ಹೈಕೋರ್ಟ್ ತೀರ್ಪಿಗೆ ಪ್ರಮುಖ ಕಾರಣವೇನು?
'ಹೈಕೋರ್ಟ್ ಯಾವ ಆಧಾರದ ಮೇಲೆ ಶಿಕ್ಷೆಯನ್ನು ರದ್ದುಪಡಿಸಿದೆ ಎಂದು ಈಗಲೇ ಹೇಳುವುದು ಅಸಾಧ್ಯ. ಹೈಕೋರ್ಟ್ ತೀರ್ಪಿನ ಸಂಪೂರ್ಣ ಪ್ರತಿ ಇನ್ನೂ ನನಗೆ ಸಿಕ್ಕಿಲ್ಲ, ಅದು ಸಿಕ್ಕ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ.'
ವಾದ ಮಾಡಲು ಕಾಲಾವಕಾಶ ಸಿಕ್ಕಿಲ್ಲವೇ?
'ಪ್ರಕರಣದಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಒಂದು ದಿನದ ಲಿಖಿತ ವಿವರಣೆ ಸಲ್ಲಿಸಲು ಸುಪ್ರೀಂಕೋರ್ಟ್ ವಿಶೇಷ ಅಭಿಯೋಜಕರನ್ನು ಏಕೆ ನೇಮಕ ಮಾಡಿತು? ಎಂದು ನನಗೆ ಆಶ್ಚರ್ಯವಾಗುತ್ತಿದೆ. ವಿವರಣೆ ಸಲ್ಲಿಸಿದ ನಂತರ ಕೋರ್ಟ್ ಮುಂದೆ ವಾದ ಮಂಡನೆ ಮಾಡಬೇಕಾಗಿತ್ತು. ಆದರೆ, ಲಿಖಿತ ವಿವರಣೆ ಬಗ್ಗೆ ವಾದ ಮಾಡಲು ಕಡಿಮೆ ಕಾಲಾವಕಾಶ ಸಿಕ್ಕಿತು'.












Click it and Unblock the Notifications