ಬೆಂಗಳೂರು : ಟರ್ಕಿಯಿಂದ ಗಡೀಪಾರಾಗಿದ್ದ 9 ಜನ ಬಿಡುಗಡೆ
ಬೆಂಗಳೂರು, ಫೆ. 2: ಟರ್ಕಿಯಿಂದ ಭಾರತಕ್ಕೆ ಗಡೀಪಾರಾಗಿದ್ದ 9 ಜನರನ್ನು ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇವರೆಲ್ಲ ಐಎಸ್ಐಎಸ್ ಭಯೋತ್ಪಾದಕ ಸಂಘಟನೆಗೆ ಸೇರಲು ಯತ್ನಿಸಿದ್ದರು ಎಂಬ ಶಂಕೆಯ ಮೇರೆಗೆ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು.
ಪೊಲೀಸರ ವಿಚಾರಣೆಯಲ್ಲಿ ತಾವೆಲ್ಲ ಪ್ರವಾಸಕ್ಕಾಗಿ ತೆರಳಿದ್ದೆವೆಂದು ಎಲ್ಲ 9 ಜನ ಹೇಳಿದ್ದಾರೆ. ಇವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲು ಸಾಕ್ಷಿ ಸಿಕ್ಕಿಲ್ಲ. ಆದ್ದರಿಂದ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. [ಐಎಸ್ಐಎಸ್ ಸೇರಲು ಹೊರಟವರು ಭಾರತಕ್ಕೆ ಗಡೀಪಾರು]
ಘಟನೆಯ ಹಿನ್ನೆಲೆ : ಟರ್ಕಿ ಗಡಿ ಮೂಲಕ 9 ಭಾರತೀಯರು ಸಿರಿಯಾ ಪ್ರವೇಶಿಸಲು ಯತ್ನಿಸುತ್ತಿದ್ದರು. ಅಲ್ಲಿಗೆ ತೆರಳಿ ಐಎಸ್ಐಎಸ್ ಸೇರುವ ಯೋಚನೆಯನ್ನು ಅವರು ಹೊಂದಿದ್ದರು ಎಂದು ಆರೋಪಿಸಿ ಟರ್ಕಿ ಸರ್ಕಾರ ಅವರನ್ನು ಭಾರತಕ್ಕೆ ಗಡೀಪಾರು ಮಾಡಿತ್ತು. [ಐಎಸ್ಐಎಸ್ ಸೇರಲು ಬಯಸುವವರ ಬಂಧನಕ್ಕೆ ಚಕ್ರವ್ಯೂಹ]

ಇವರೆಲ್ಲ ಬೆಂಗಳೂರಿನ ಮೂಲಕವೇ ಟರ್ಕಿಗೆ ತೆರಳಿದ್ದರು. ಆದ್ದರಿಂದ ಟರ್ಕಿ ಸರ್ಕಾರ ಕೂಡ ಇವರನ್ನು ವಿಮಾನದ ಮೂಲಕ ಬೆಂಗಳೂರಿಗೇ ಕಳುಹಿಸಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. [ಶಮಿವಿಟ್ ನೆಸ್ ಸಂಪರ್ಕ ಹೊಂದಿದ್ದ ಎಲ್ಲರ ವಿಚಾರಣೆ]
ಈ ತಂಡದಲ್ಲಿ ಏಳು ಜನ ಚೆನ್ನೈ ಮೂಲದವರು. ಇವರಲ್ಲಿ ಓರ್ವ ಮಹಿಳೆ ಹಾಗೂ ಐವರು ಮಕ್ಕಳಿದ್ದು ಎಲ್ಲರೂ ಒಂದೇ ಕುಟುಂಬದವರಾಗಿದ್ದರು. ತೆಲಂಗಾಣ ಹಾಗೂ ಹಾಸನದ ತಲಾ ಒಬ್ಬರು ಸೇರಿದ್ದಾರೆ.
ಪೊಲೀಸರ ಅಭಿಪ್ರಾಯ : ಉಗ್ರ ಸಂಘಟನೆಗೆ ಸೇರಲು ಇಚ್ಛಿಸುವವರು ಸಾಮಾನ್ಯವಾಗಿ ಮಕ್ಕಳು ಹಾಗೂ ಕುಟುಂಬವನ್ನು ಕರೆದೊಯ್ಯುವುದಿಲ್ಲ. ತಂಡದ ಎಲ್ಲರೂ ತಾವು ಪ್ರವಾಸಕ್ಕಾಗಿ ಟರ್ಕಿಗೆ ತೆರಳಿದ್ದಾಗಿ ತಿಳಿಸಿದ್ದಾರೆ. ಅವರು ಭಯೋತ್ಪಾದಕರಾಗಲು ತೆರಳಿದ್ದರು ಎಂಬುದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. [ಜಾಣ ಮೆಹದಿ ಪೊಲೀಸರ ಕಣ್ಣು ತಪ್ಪಿಸಿದ್ದು ಹೇಗೆ?]
ಬೆಂಗಳೂರಿನಲ್ಲಿ ಬಂಧಿತನಾಗಿರುವ ಮೆಹದಿ ಮಸ್ರೂರ್ ಬಿಸ್ವಾಸ್ ಜೊತೆಗೂ ಇವರು ಯಾವುದೇ ಸಂಬಂಧ ಹೊಂದಿರಲಿಲ್ಲ. ಆದ್ದರಿಂದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಒನ್ಇಂಡಿಯಾ ಕನ್ನಡ ಸುದ್ದಿ)












Click it and Unblock the Notifications