ಬಳ್ಳಾರಿ ಜಿ.ಪಂ ಪ್ರಯತ್ನ ಸ್ತ್ರೀ ಶಕ್ತಿ ಮಿನಿ ಸೂಪರ್ ಮಾರ್ಕೆಟ್
ಬಳ್ಳಾರಿ, ಅಕ್ಟೋಬರ್ 29: ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಹಕಾರದಿಂದ ದೇವಿಕಾ ಸ್ವ-ಸಹಾಯ ಗುಂಪಿನ ಸದಸ್ಯರ ವತಿಯಿಂದ ಮಿನಿ ಸೂಪರ್ ಮಾರುಕಟ್ಟೆ ಸ್ಥಾಪನೆ ಮಾಡಲಾಗಿದೆ. ಸಂಜೀವಿನಿ ಸ್ತ್ರೀ ಶಕ್ತಿ ಮಿನಿ ಸೂಪರ್ ಮಾರ್ಕೆಟ್ ಉದ್ಘಾಟನೆಗೊಂಡಿದೆ.
ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಕೆ. ವಿ ತ್ರಿಲೋಕ ಚಂದ್ರ ಈ ಸೂಪರ್ ಮಾರ್ಕೆಟ್ ಮಳಿಗೆಗಳನ್ನು ಉದ್ಘಾಟಿಸಿದರು. ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಪ್ರಮೋದ್ ಮುಂತಾದವರು ಉಪಸ್ಥಿತರಿದ್ದರು.

ಕೆಡಿಪಿ ಸಭೆಯಲ್ಲಿ ಸೂಚನೆ; ಬಳ್ಳಾರಿ ಜಿಲ್ಲಾ ಹಂತದಲ್ಲಿ ಆಯ್ದ ಸ್ವ ಸಹಾಯ ಗುಂಪು/ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ಮಿನಿ ಸೂಪರ್ ಮಾರುಕಟ್ಟೆ ಸ್ಥಾಪನೆ ಮಾಡುವಂತೆ ಕೆಡಿಪಿ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು.
ಇದರ ಅನ್ವಯ ಬಳ್ಳಾರಿ ನಗರದ ಎಸ್. ಪಿ ವೃತ್ತದ ಬಳಿ ಖಾಲಿ ಇರುವ ತಾಲ್ಲೂಕು ಪಂಚಾಯಿತಿ ಮಳಿಗೆಯಲ್ಲಿ ಬಳ್ಳಾರಿ ತಾಲ್ಲೂಕು ಸಂಗನಕಲ್ಲು ಗ್ರಾಮ ಪಂಚಾಯತ್‍ನ ಅರುಣೋದಯ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಡಿ ನೋಂದಾಯಿಸಿಕೊಂಡಿರುವ ದೇವಿಕಾ ಸ್ವ-ಸಹಾಯ ಗುಂಪಿನ ಸದಸ್ಯರ ವತಿಯಿಂದ ಮಿನಿ ಸೂಪರ್ ಮಾರುಕಟ್ಟೆ ಸ್ಥಾಪನೆ ಮಾಡಲಾಗಿದೆ.
ಸುಮಾರು 60 ಮಹಿಳಾ ಉದ್ದಿಮೆಗಳಿಂದ ತಯಾರಾದ ಉತ್ಪನ್ನಗಳನ್ನು ಈ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಗಣ್ಯರು ಸೂಪರ್ ಮಾರ್ಕೆಟ್ ಉದ್ಘಾಟನೆ ಮಾಡಿ, ಮಹಿಳಾ ಕಿರು ಉದ್ದಿಮೆದಾರರೊಂದಿಗೆ ಚರ್ಚಿಸಿ ಶುಭ ಹಾರೈಸಿದರು.
ಸಂಜೀವಿನಿ ಎನ್.ಆರ್.ಎಲ್.ಎಂ ಯೋಜನೆಯಡಿಯಲ್ಲಿ ಬಳ್ಳಾರಿ ಜಿಲ್ಲಾ ಪಂಚಾಯತ್ ಮೂಲಕ ರೂಪಿಸಿರುವ ಚಟುವಟಿಕೆಗಳಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಹೊರಹೊಮ್ಮುತ್ತಿರುವುದು ಬೆಳಕಿಗೆ ಬಂದಿರುತ್ತದೆ.
ಈಗಾಗಲೇ ರಚಿಸಿರುವ 100 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮೂಲಕ ಸುಮಾರು 6440 ಮಹಿಳಾ ಗುಂಪುಗಳನ್ನು ರಚಿಸಿ, ಸುಮಾರು 2093 ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿಯನ್ನು ಸ್ವ-ಸಹಾಯ ಗುಂಪುಗಳಿಗೆ ಸಾಲದ ರೂಪದಲ್ಲಿ ವಿತರಿಸಿ ವಿವಿಧ ಜೀವನೋಪಾಯ ಚಟುವಟಿಕೆಗಳ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಯೋಜನೆ ಮೂಲಕ ಪ್ರಯತ್ನಿಸಲಾಗುತ್ತಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಎಸ್.ಜಿ.ಎಸ್.ವೈ ಯೋಜನೆಯನ್ನು ಪುನರ್ ರಚಿಸಿ ಆಜೀವಿಕ-ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ (ಎನ್.ಆರ್.ಎಲ್.ಎಂ) ಆಗಿ 2010-11ರಿಂದ ಜಾರಿಗೊಳಿಸಿದೆ. ಇದರನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು 'ಸಂಜೀವಿನಿ' ಹೆಸರಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆ.ಎಸ್.ಆರ್.ಎಲ್.ಪಿ.ಎಸ್) ಮೂಲಕ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ.
ರಚನೆಗೊಂಡಿರುವ ಸ್ವ-ಸಹಾಯ ಗುಂಪುಗಳನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನವನ್ನು 'ಸಂಜೀವಿನಿ' ಯೋಜನೆ ಮಾಡುತ್ತಿದೆ. ಇದರಿಂದಾಗಿ ಗುಂಪಿನ ಮಹಿಳೆಯರು ತಯಾರು ಮಾಡಿದ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಯ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ. ಸ್ತ್ರೀಯರ ಆರ್ಥಿಕ ಸ್ವವಲಂಬನೆಗೆ ಇದು ಸಹಕಾರಿಯಾಗಿದೆ.
ಎಲ್ಲಾ ಸ್ವಸಹಾಯ ಗುಂಪುಗಳು, ಗ್ರಾಮ ಸಂಸ್ಥೆಗಳು ಮತ್ತು ಕ್ಲಸ್ಟರ್ ಹಂತದ ಒಕ್ಕೂಟಗಳಿಗೆ ಅವುಗಳು ರಚನೆಯಾಗಿ 7 ದಿನಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗುವುದು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ 8.5 ಕೋಟಿಗೂ ಹೆಚ್ಚು ಕುಟುಂಬಗಳು ಎನ್.ಆರ್.ಎಲ್.ಎಂ ಅಡಿಯಲ್ಲಿ 78.33 ಲಕ್ಷ ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕ ಹೊಂದಿವೆ.
ಉನ್ನತ ಮಟ್ಟದ ಒಕ್ಕೂಟಗಳು, ಎರಡನೇ ಹಂತದ ಗ್ರಾಮ ಸಂಸ್ಥೆಗಳು ಮತ್ತು ಮೂರನೇ ಹಂತದ ಕ್ಲಸ್ಟರ್ ಮಟ್ಟದ ಒಕ್ಕೂಟಗಳಿಗೆ ಸ್ವಸಹಾಯ ಗುಂಪುಗಳ ಸೇರ್ಪಡೆಯನ್ನು ಖಾತರಿಪಡಿಸುವ ಗುರಿಯನ್ನು ಯೋಜನೆ ಹೊಂದಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಮಹಿಳೆಯರನ್ನು ತಲುಪಲು ರಾಜ್ಯಗಳಾದ್ಯಂತ ಬ್ಲಾಕ್ ಮಟ್ಟದ ಸಿಬ್ಬಂದಿಯಿಂದ ವಿಶೇಷ ಕಾರ್ಯತಂತ್ರಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ.












Click it and Unblock the Notifications