ತುಂಗಭದ್ರಾ ಡ್ಯಾಂ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಏಕೆ?
ವಿಜಯನಗರ, ಆಗಸ್ಟ್ 30; ಉತ್ತರ ಕರ್ನಾಟಕದ ಭಾಗದ ಜನರ ಜೀವನಾಡಿಯಾದ ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕರ್ನಾಟಕದ ಮತ್ತು ಆಂಧ್ರ ಪ್ರದೇಶದ ಹಲವು ಜಿಲ್ಲೆಗಳ ಜನರು ಇದೇ ನೀರನ್ನು ಕುಡಿಯುವುದರಿಂದ ಜನರು ಆತಂಕಗೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕಳೆದ 12 ವರ್ಷಗಳಿಂದಲೂ ಡ್ಯಾಂ ನೀರು ಪದೇ ಪದೇ ಹಸಿರುಬಣ್ಣಕ್ಕೆ ತಿರುಗುತ್ತಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಸಂಬಂಧ ವೈಜ್ಞಾನಿಕ ಸಂಶೋಧನೆ ಕೈಗೊಂಡು ಕ್ರಮ ಕೈಗೊಂಡಿಲ್ಲ.
ಪ್ರತಿ ವರ್ಷವೂ ಮಾಧ್ಯಮಗಳಲ್ಲಿ ಇದರ ಬಗ್ಗೆ ಸುದ್ದಿಗಳು ಪ್ರಕಟವಾದಾಗ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಬಳಿಕ ಮರೆತು ಬಿಡುತ್ತಾರೆ. ಇದೇ ನೀರನ್ನು ಜನರು ಕುಡಿಯುತ್ತಾರೆ. ಜಾನುವಾರುಗಳಿಗೂ ಸಹ ಇದೇ ನೀರು ಆಧಾರವಾಗಿದೆ. ನೀರು ಹಸಿರು ಬಣ್ಣಕ್ಕೆ ತಿರುಗುವುದರ ಬಗ್ಗೆ ಸೂಕ್ತ ಕ್ರಮ ಕೈಗಳ್ಳಬೇಕೆಂದು ಜನರು ಆಗ್ರಹ ಮಾಡುತ್ತಿದ್ದಾರೆ.
ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ, "ಈ ಹಿಂದೆ ತುಂಗಭದ್ರಾ ಜಲಾಶಯದ ನೀರನ್ನು ಧಾರವಾಡ ಪ್ರಯೋಗಾಲಯಕ್ಕೆ ಕಳುಹಿಸಿ, ಪರೀಕ್ಷಿಸಲಾಗಿತ್ತು. ಈಗ ಮತ್ತೆ ನೀರು ಹಸಿರುಬಣ್ಣಕ್ಕೆ ತಿರುಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು" ಎಂದು ಹೇಳಿದ್ದಾರೆ.

ಜಲಾಶಯದ ಸಾಮರ್ಥ್ಯ
ತುಂಗಭದ್ರಾ ಜಲಾಶಯದ ಒಟ್ಟು ಸಾಮರ್ಥ್ಯ 135 ಟಿಎಂಸಿ. ಅದರಲ್ಲಿ ಈಗಾಗಲೇ 35 ಟಿಎಂಸಿ ಹೂಳು ತುಂಬಿದೆ. ಇದರಲ್ಲಿ ತುಂಗಭದ್ರಾ ಜಲಾಶಯ 100.855 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕೃಷಿ ಜಮೀನು ಮತ್ತು ಕುಡಿಯಲು ನೀರು ಒದಗಿಸುತ್ತದೆ. ಈಗ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕುಡಿಯಲು ಯೋಗ್ಯವಲ್ಲ
ತುಂಗಭದ್ರಾ ಜಲಾಶಯದ ನೀರು ಶುದ್ಧೀಕರಿಸದೇ ಕುಡಿಯಲು ಯೋಗ್ಯವಲ್ಲ ಎಂದು 2009-10ನೇ ಸಾಲಿನಲ್ಲಿ ಧಾರವಾಡದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊಸಪೇಟೆ ನಗರಸಭೆಗೆ ವರದಿ ಸಲ್ಲಿಸಿತ್ತು. ನಗರಸಭೆ ಅಧಿಕಾರಿಗಳು ಬಾಟಲಿಯಲ್ಲಿ ಸಂಗ್ರಹಿಸಿಕೊಟ್ಟ ನೀರನ್ನು ಪರೀಕ್ಷಿಸಿ ಆಗ ವರದಿ ನೀಡಲಾಗಿತ್ತು. ಆದರೂ ಇಲ್ಲಿವರೆಗೂ ಜಲಾಶಯದ ನೀರಿಗೆ ತ್ಯಾಜ್ಯ ಸೇರದಂತೆ ಎಚ್ಚರಿಕೆ ವಹಿಸುವ ಕಾರ್ಯಗಳು ನಡೆದಿಲ್ಲ.

ಹಸಿರು ಬಣ್ಣಕ್ಕೆ ಕಾರಣವೇನು?
ಶಿವಮೊಗ್ಗ, ಹರಿಹರ ಭಾಗದಲ್ಲಿ ಹೆಚ್ಚಾಗಿ ಭತ್ತ ಮತ್ತು ಅಡಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು,ಅತಿಯಾದ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಅಲ್ಲಿನ ನೀರು ಡ್ಯಾಂಗೆ ಸೇರುತ್ತಿದೆ. ಇನ್ನು ಕಾರ್ಖಾನೆಗಳ ತ್ಯಾಜ್ಯ ಹಾಗೂ ಜಲಾಶಯದ ಮೇಲ್ಭಾಗದ ನಗರ, ಪಟ್ಟಣ, ಹಳ್ಳಿಗಳ ಚರಂಡಿಗಳ ಮಲೀನ ನೀರು ಜಲಾಶಯದ ಒಡಲು ಸೇರುತ್ತಿರುವುದು ಕೂಡ ಕಾರಣವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಜಲಾಶಯದ ಹಿನ್ನೀರಿನ (ಗುಂಡಾ ಕಾದಿಟ್ಟ ಅರಣ್ಯ ) ಪ್ರದೇಶದಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡು ಬಂದಿದೆ. ಪ್ರತಿವರ್ಷ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಹಸಿರು ಬಣ್ಣಕ್ಕೆ ತಿರುಗುವ ಈ ನೀರು ಬಾರಿ ಮುಂಚಿತವಾಗಿ ಹಸಿರಾಗಿದೆ.

ಪರಿಸರ ಸಚಿವರ ತವರು ಜಿಲ್ಲೆ
ತುಂಗಭದ್ರಾ ಜಲಾಶಯ ಇರುವ ವಿಜಯನಗರ ಜಿಲ್ಲೆ ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತವರು ಜಿಲ್ಲೆಯಾಗಿದೆ. ಸಚಿವರಾದ ಬಳಿಕ ಅಧಿಕಾರಿಗಳ ಜೊತೆ ಸಭೆ ಕರೆದು ರಾಜ್ಯದ ಯಾವುದೇ ನದಿಗಳಿಗೆ ತ್ಯಾಜ್ಯ ಹರಿಸುವ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪರಿಸರ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಆದರೆ ಸಚಿವರ ತವರು ಜಿಲ್ಲೆಯಲ್ಲಿಯೇ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದೆ.

ಸೈನೋ ಬ್ಯಾಕ್ಟಿರಿಯಾ ಎಫೆಕ್ಟ್
ತುಂಗಭದ್ರಾ ಜಲಾಶಯದಲ್ಲಿ ನೀಲಿ ಹಸಿರು ಪಾಚಿ (ಬೂಗ್ರೀನ್ ಅಲ್ಲಿ) ಅಪಾರ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಈ ರೀತಿ ಉಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಅತಿಯಾಗಿ ಸೈನೋ ಬ್ಯಾಕ್ಟಿರಿಯಾಗಳ ಉತ್ಪತ್ತಿಯಿಂದ ಹೀಗಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಜಲಾಶಯದಲ್ಲಿ ತ್ಯಾಜ್ಯ ಸೇರಿ ಪಾಸ್ಟೇಟ್, ನೈಟ್ರೇಟ್, ಸಟ್ ಮತ್ತು ಫೋಟ್ಯಾಸ್ ಹೆಚ್ಚಾಗಿ ಸಿಗುತ್ತದೆ. ಇದನ್ನು ತಿಂದು ಬಿಸಿಲು ಹೆಚ್ಚಾದಾಗ ಸೈನೋ ಬ್ಯಾಕ್ಟಿರಿಯಾ ಹೆಚ್ಚು ಉತ್ಪತ್ತಿಯಾಗುತ್ತಿದೆ ಎಂದು ತಜ್ಞ ಸಮದ್ ಕೊಟ್ಟೂರು ಹೇಳುತ್ತಾರೆ.
"ಕಾರ್ಖಾನೆಗಳ ತ್ಯಾಜ್ಯ, ಚರಂಡಿಗಳ ಮಲೀನ ನೀರು, ರೈತರ ಕೃಷಿ ಭೂಮಿಗಳಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರದ ಪರಿಣಾಮದಿಂದ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಬಹುದು. ರೈತರಲ್ಲಿ ಸಾವಯವ ಕೃಷಿ ಕುರಿತು ಜಾಗೃತಿ ಮೂಡಿಸಬೇಕು. ಇನ್ನೂ ಕಾರ್ಖಾನೆ ಹಾಗೂ ಜನವಸತಿ ಪ್ರದೇಶದ ತ್ಯಾಜ್ಯ ನೇರ ಜಲಾಶಯಕ್ಕೆ ಸೇರದಂತೆ ನಿಗಾವಹಿಸಬೇಕು" ಎಂದು ಸಮದ್ ಕೊಟ್ಟೂರು ಹೇಳಿದ್ದಾರೆ.












Click it and Unblock the Notifications