ಮಳೆಗಾಗಿ ಪ್ರಾರ್ಥಿಸಿ ಹರಪನಹಳ್ಳಿ ತಾಲೂಕಿನಲ್ಲಿ ಕಪ್ಪೆಗಳಿಗೆ ಅದ್ಧೂರಿ ಮದುವೆ
ವಿಜಯನಗರ, ಜುಲೈ 12: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಾಗತಿಕಟ್ಟೆ ತಾಂಡಾದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.
ನಾಗತಿಕಟ್ಟೆ ತಾಂಡಾದ ಯುವಕರು ಎರಡು ಹೆಣ್ಣು- ಗಂಡು ಕಪ್ಪೆಗಳನ್ನು ತಂದು ವಿಶೇಷ ಸಿಂಗಾರ ಮಾಡಿ ಮದುವೆ ಮಾಡಿದ್ದಾರೆ. ಬೇವಿನ ಮರದ ಸೊಪ್ಪಿನ ಉಡುಗೆ ತೊಟ್ಟ ಇಬ್ಬರು ಬಾಲಕರು ಕಪ್ಪೆಗನ್ನು ಕೋಲಿನ ಎರಡು ಬದಿಯಲ್ಲಿ ಕಟ್ಟಿಕೊಂಡು, "ಬಾರೋ ಬಾರೋ ಮಳೆರಾಯ ಬಾಳೆಯ ಹೂವಿನ ತೋಟಕ್ಕೆ ನೀರಿಲ್ಲ,'' ಎಂದು ಹಾಡುತ್ತಾ ಗ್ರಾಮದ ಮನೆ ಮನೆಗೆ ತೆರಳಿ ವಿಶೇಷ ಗಮನ ಸೆಳೆದರು.
ಆ ಬಾಲಕರಿಗೆ ಯುವಕರ ತಂಡ ಸಾಥ್ ನೀಡಿದ್ದು, ಮನೆ ಮುಂದೆ ಬಂದ ನವ ವಿವಾಹಿತ ಕಪ್ಪೆಗಳಿಗೆ ನೀರು ಹಾಕಿ ವಿಶೇಷ ಪೂಜೆ ಸಲ್ಲಿಸಿ, ಯುವಕರ ತಂಡಕ್ಕೆ ದೇಣಿಗೆ ರೂಪದಲ್ಲಿ ಹಣ ಆಹಾರ ಪದಾರ್ಥಗಳನ್ನು ನೀಡಿ ತಾಂಡಾದವರು ಸಹಕರಿಸಿದ್ದಾರೆ.

ಈ ಗ್ರಾಮದಲ್ಲಿ ಸಣ್ಣ ಮಕ್ಕಳು ಪ್ರತಿ ವರ್ಷ ಇದೇ ರೀತಿ ಕಪ್ಪೆಗಳಿಗೆ ಮದುವೆ ಮಾಡುವ ಸಂಪ್ರದಾಯ ಇದೆ. ಈ ಮಕ್ಕಳು ಗ್ರಾಮದ ಮುಖಂಡರ ಮಾರ್ಗದರ್ಶನದಲ್ಲಿ ಕಪ್ಪೆಗಳಿಗೆ ಮದುವೆ ಮಾಡಿಸುತ್ತಾರೆ.

ಹರಪನಹಳ್ಳಿ ತಾಲೂಕಿನ ನಾಗತಿಕಟ್ಟೆ ತಾಂಡಾದ ಮುಖ್ಯ ಬೀದಿಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಿದ ಬಳಿಕ ಕಪ್ಪೆಗಳನ್ನು ಕೆರೆಯಲ್ಲಿ ವಿಸರ್ಜಿಸಲಾಯಿತು. ಹೀಗೆ ಸಂಗ್ರಹವಾದ ಆಹಾರ ಪದಾರ್ಥಗಳನ್ನು ಯುವಕರು ಗ್ರಾಮದ ಹೊರಭಾಗದಲ್ಲಿ ಒಂದೆಡೆ ಸೇರಿ ಅಡುಗೆ ತಯಾರಿಸಿ ಊಟ ಮಾಡಿದರು. ಕಪ್ಪೆಗಳ ಮದುವೆಯಿಂದ ಮಳೆಯಾಗುತ್ತದೆ ಎಂಬ ಅಪಾರ ನಂಬಿಕೆ ಈ ಭಾಗದ ಜನರಲ್ಲಿ ಮನೆ ಮಾಡಿರುವುದು ವಿಶೇಷವೇ ಸರಿ.

ಮಳೆಗಾಗಿ ಪ್ರಾರ್ಥಿಸಿ ಉತ್ತರ ಕರ್ನಾಟಕ ಭಾಗದ ಅಲ್ಲಲ್ಲಿ ಬಹುತೇಕ ಹಳ್ಳಿಗಳಲ್ಲಿ ಕತ್ತೆಗಳಿಗೆ, ನಾಯಿಗಳಿಗೆ ಮತ್ತು ಕಪ್ಪೆಗಳಿಗೆ ಮದುವೆ ಮಾಡಿಸುವುದು ವಾಡಿಕೆ. ಈ ತರಹದ ವಿಚಿತ್ರ ಘಟನೆಗಳು ಅಲ್ಲಲ್ಲಿ ಕಂಡು ಬರುತ್ತವೆ.












Click it and Unblock the Notifications