ವಿಜಯನಗರ ಉಪ ಚುನಾವಣೆ ಬಳಿಕ ಜಿಲ್ಲೆಯಾಗಲಿದೆಯೇ?
ಬಳ್ಳಾರಿ, ಡಿಸೆಂಬರ್ 5 : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಶಾಸಕರ ರಾಜೀನಾಮೆಗೆ ನಾಂದಿ ಹಾಡಿದ್ದು ವಿಜಯನಗರದ ಆನಂದ್ ಸಿಂಗ್. ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ರಾಜೀನಾಮೆ ನೀಡಿ ಶಾಸಕ ಸ್ಥಾನದಿಂದ ಅವರು ಅನರ್ಹರಾದರು.
ಗುರುವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆ ವಿಜಯನಗರ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನಡೆಯಲಿದೆ. ಒಟ್ಟು ಮತದಾರರ ಸಂಖ್ಯೆ 2,36,206. ಇವರಲ್ಲಿ ಪುರುಷರು 1,15,717, ಮತದಾರರು 1,20,427, ಇತರರು 62. ಸಂಜೆ 6 ಗಂಟೆ ತನಕ ಮತದಾನ ಮಾಡಲು ಅವಕಾಶವಿದೆ.
2018ರ ಚುನಾವಣೆ ಸಮಯದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಚುನಾವಣೆ ಗೆದ್ದಿದ್ದ ಆನಂದ್ ಸಿಂಗ್ 2019ರ ಉಪ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ವಿ. ವೈ. ಘೋರ್ಪಡೆ, ಜೆಡಿಎಸ್‌ನಿಂದ ಎನ್. ಎಂ. ನಬಿ ಚುನಾವಣಾ ಕಣದಲ್ಲಿದ್ದಾರೆ.

ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ಪರಭಾರೆ ಮಾಡಬಾರದು ಮತ್ತು ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟು ರಾಜೀನಾಮೆ ನೀಡಿರುವ ಆನಂದ್ ಸಿಂಗ್‌ಗೆ ಇದು ಮಹತ್ವದ ಚುನಾವಣೆಯಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟ ಆನಂದ್ ಸಿಂಗ್‌ಗೆ ತಕ್ಕಪಾಠ ಕಲಿಸಬೇಕು ಎಂದು ಕಾಂಗ್ರೆಸ್ ಉದ್ಯಮಿ ವಿ. ವೈ. ಘೋರ್ಪಡೆಗೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಉಪ ಚುನಾವಣೆ ಫಲಿತಾಂಶ ಏನಾಗಲಿದೆ? ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಜಾತಿವಾರು ಲೆಕ್ಕಾಚಾರ: ವಿಜಯನಗರ ಕ್ಷೇತ್ರದಲ್ಲಿ ಎಸ್.ಟಿ ಸಮುದಾಯದ ಅಂದಾಜು 50 ಸಾವಿರ ಮತದಾರರು ಇದ್ದಾರೆ. ಮುಸ್ಲಿಂ 40 ಸಾವಿರ, ಕುರುಬ 35 ಸಾವಿರ, ಎಸ್‌ಸಿ 40 ಸಾವಿರ, ಲಿಂಗಾಯತ 30 ಸಾವಿರ, ಬ್ರಾಹ್ಮಣ 15 ಸಾವಿರ ಮತಗಳಿವೆ. ವೈಶ್ಯ, ಕ್ಷತ್ರಿಯರು, ದೇವಾಂಗ ಸೇರಿದಂತೆ ಇತರೆ 35 ಸಾವಿರಕ್ಕೂ ಅಧಿಕ ಮತದಾರರು ಇದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಆನಂದ್ ಸಿಂಗ್ 83,214 ಮತಗಳನ್ನು ಪಡೆದಿದ್ದರು. ಬಿಜೆಪಿಯ ಎಚ್. ಆರ್. ಗವಿಯಪ್ಪ 74, 968 ಮತ, ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ದೀಪಕ್ ಸಿಂಗ್ 3835 ಮತಗಳನ್ನು ಪಡೆದಿದ್ದರು.












Click it and Unblock the Notifications