ವಿಜಯನಗರ: ಒಂದೇ ಕುಟುಂಬದ ನಾಲ್ವರು ಮಕ್ಕಳು ನೀರು ಪಾಲು
ವಿಜಯನಗರ ನವೆಂಬರ್ 2: ಒಂದೇ ಕುಟುಂಬದ ನಾಲ್ವರು ಮಕ್ಕಳು ನೀರು ಪಾಲಾದ ಹೃದಯ ವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡದಲ್ಲಿ ನಡೆದಿದೆ.
ಒಂದೇ ಕುಟುಂಬದ ಸದಸ್ಯರಾದ ಅಭಿ ವೀರಾ ನಾಯ್ಕ (13), ಅಶ್ವಿನಿ (14), ಕಾವೇರಿ (18) ಅಪೂರ್ವಾ (18) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕೆರೆಯಲ್ಲಿ ಮುಳುಗುತ್ತಿದ್ದ ತಮ್ಮ ಸಹೋದರನನ್ನು ರಕ್ಷಿಸಲು ಹೋದ ಮೂರು ಜನ ಸಹೋದರಿಯರು ನೀರು ಪಾಲಾಗಿದ್ದಾರೆ.
ಮೊದಲು ಅಭಿ ನೀರಿನಲ್ಲಿ ಮುಳುಗುತ್ತಿದ್ದ. ಇದನ್ನು ಕಂಡು ಈತನ ರಕ್ಷಣೆಗೆ ಒಬ್ಬರಾದಂತೆ ಒಬ್ಬರು ಹೋದ ಸೋದರಿಯರು ನೀರು ಪಾಲಾಗಿದ್ದಾರೆ. ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿರುವ ಬಗ್ಗೆ ಗ್ರಾಮಸ್ಥರಿಗೆ ವಿಷಯ ತಿಳಿದು ಬಂದಿದ್ದು, ಕೂಡಲೇ ಶೋಧ ಕಾರ್ಯ ಆರಂಭಿಸಿದ್ದಾರೆ.

ಸದ್ಯ ಅಭಿ ವೀರಾ ನಾಯ್ಕ, ಅಶ್ವಿನಿ ಹಾಗೂ ಕಾವೇರಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಅಪೂರ್ವಾ ಎಂಬುವವರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.
ನಾಲ್ಕು ಜನ ಮಕ್ಕಳ ಸಾವಿನಿಂದ ಕುಟುಂಬ ಭಾರೀ ಆಘಾತಕ್ಕೊಳಗಾಗಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹಗಳ ಮೇಲೆ ಬಿದ್ದು ಮೃತ ಮಕ್ಕಳ ತಾಯಿ ರೋಧಿಸುವ ದೃಶ್ಯಗಳು ಎಂಥಹ ಕಲ್ಲೆದೆಯವರನ್ನೂ ಕರಗುವಂತಿತ್ತು.
ಇತ್ತೀಚಿಗೆ ಸುರಿದ ನಿರಂತರ ಮಳೆಯಿಂದಾಗಿ ಗ್ರಾಮದ ಕೆರೆ, ಹಳ್ಳ ಹಾಗೂ ಹೊಂಡಗಳು ತುಂಬಿ ಭರ್ತಿ ಆಗಿವೆ. ಹೀಗೆ ಭರ್ತಿ ಆಗಿರೋ ಹೊಂಡದಲ್ಲಿ ಮಕ್ಕಳು ಆಯತಪ್ಪಿ ಮುಳುಗಿ ಮೃತಪಟ್ಟಿದ್ದಾರೆ.
ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಓರ್ವಳ ಮೃತದೇಹಕ್ಕಾಗಿ ಶೋಧ ಕಾರ್ಯಮುಂದುವರಿದಿದೆ.












Click it and Unblock the Notifications