ಬಳ್ಳಾರಿ ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಕತ್ತಿ ಝಳಪಿಸಿ ಬೆದರಿಕೆ: ಇಬ್ಬರ ಬಂಧನ
ಬಳ್ಳಾರಿ, ಮೇ 15: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಬಿ. ನಾಗೇಂದ್ರ ಅವರಿಗೆ ಕಿಡಿಗೇಡಿಗಳಿಬ್ಬರು ಕತ್ತಿ ತೋರಿಸಿ ಬೆದರಿಕೆ ಹಾಕಿದರೆನ್ನಲಾದ ಘಟನೆ ಬಳ್ಳಾರಿ ಜಿಲ್ಲೆಯ ದೇವಿ ನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕೂಡಲೇ ಆರೋಪಿಗಳನ್ನು ಕೌಲ್ ಬಜಾರ್ ಠಾಣೆಗೆ ಒಪ್ಪಿಸಲಾಗಿದೆ.
ಕರ್ನಾಟಕ ವಿಧಾನಸಭಾ ಚುಣಾವಣಾ ಫಲಿತಾಂಶ ಹೊರ ಬಿದ್ದ ಶನಿವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಶಾಸಕ ನಾಗೇಂದ್ರ ಆಪ್ತರೊಬ್ಬರ ಮನೆಗೆ ಹೋಗಿ ವಾಪಸ್ ಬರುವ ಸಂದರ್ಭ ರಸ್ತೆ ಬದಿಯಲ್ಲಿದ್ದ ಇಬ್ಬರು ಕೈಯಲ್ಲಿದ್ದ ಕತ್ತಿ ಝಳಪಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಶಾಸಕ ನಾಗೇಂದ್ರ ನಾಗೇಂದ್ರ ಕಾರಿನೊಳಗೆ ಕುಳಿತಿದ್ದರಿಂದ ಯಾವುದೇ ತೊಂದರೆ ಆಗಲಿಲ್ಲ. ಆರೋಪಿಗಳ ಬಳಿ ಮಾರಕಾಸ್ತ್ರಗಳು ಇರುವುದು ಗೊತ್ತಾಗುತ್ತಿದ್ದಂತೆಯೇ ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿ ಹಿಡಿದು ಥಳಿಸಿದ್ದಾರೆ. ಒಟ್ಟು ನಾಲ್ಕು ಆರೋಪಿಗಳಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಸಿರುಗುಪ್ಪ ರಸ್ತೆಯ ರಿಮ್ಯಾಂಡ್ ಹೋಂ ಬಳಿಯ ನಿವಾಸಿಗಳಾದ ರಮೇಶ್ ಹಾಗೂ ವೆಂಕಟೇಶ್ ಅವರು ಬೆದರಿಕೆಯೊಡ್ಡಿದ ಆರೋಪಿಗಳು ಎಂದು ತಿಳಿದು ಬಂದಿದ್ದು, ಆರೋಪಿಗಳನ್ನು ಕೌಲ್ ಬಜಾರ್ ಪೊಲೀಸರಿಗೆ ಒಪ್ಪಿಸಲಾಗಿದೆ.
ಶಾಸಕರಾಗಲೀ ಅಥವಾ ಅವರ ಬೆಂಬಲಿಗರಾಗಲೀ ಘಟನೆ ಕುರಿತು ದೂರು ನೀಡಿಲ್ಲ. ಆದರೆ, ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ಯಾರು? ಯಾವ ಕಾರಣಕ್ಕೆ ಕತ್ತಿ ಹಿಡಿದಿದ್ದರು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೌಲ್ ಬಜಾರ್ ಠಾಣೆಯಲ್ಲಿ ಎಫ್‌ಐಆರ್ 73/23 ದಾಖಲಾಗಿದ್ದು, ಇನ್‌ಸ್ಪೆಕ್ಟರ್ ವಾಸು ಕುಮಾರ್ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಮತ ಎಣಿಕೆ ಶನಿವಾರ ನಡೆದಿದ್ದು, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ. ನಾಗೇಂದ್ರ ಭರ್ಜರಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಿ. ನಾಗೇಂದ್ರ 1,03,836 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು 74,536 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದಾರೆ.












Click it and Unblock the Notifications