ತುಂಗಭದ್ರಾ ಡ್ಯಾಂ ವ್ಯಾಪ್ತಿಯ ಜನರಿಗೆ ಸಂತಸದ ಸುದ್ದಿ
ವಿಜಯನಗರ, ಜುಲೈ 21: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದ್ದು, ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಮೂರು ಅಥವಾ ನಾಲ್ಕು ದಿನಗಳಲ್ಲಿ ಡ್ಯಾಂ ಭರ್ತಿಯಾಗಲಿದೆ.
ಈ ಕುರಿತು ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ. ತುಂಗಭದ್ರಾ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಜಿಲ್ಲಾ ಆಡಳಿತ ವತಿಯಿಂದ ಅವರು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಸಂದೇಶ: ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ ಅವರು, 'ಸಂತಸದ ಸುದ್ದಿ, ನೀರಾವರಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ತುಂಗಾ ಮತ್ತು ಭದ್ರಾ ನದಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿದಿನ ನಮ್ಮ ತುಂಗಾಭದ್ರ ಅಣೆಕಟ್ಟಿಗೆ 10 ಟಿಎಂಸಿ ನೀರು ಬರುತ್ತಿದೆ" ಎಂದು ಹೇಳಿದ್ದಾರೆ.
"ಇನ್ನು ಮೂರು ದಿನಗಳ ಒಳಗಾಗಿ ಡ್ಯಾಂ ಸಂಪೂರ್ಣ ತುಂಬುವ ನಿರೀಕ್ಷೆ ಇದೆ. ಪ್ರಸ್ತುತ 1.2 ಲಕ್ಷ ಕ್ಯುಸೆಕ್ ನೀರಿನ ಒಳಹರಿವು ಇದ್ದು, ಮುಂದಿನ ಮೂರು ಅಥವಾ ನಾಲ್ಕು ದಿನಗಳು ಇದೇ ರೀತಿ ಇರುವ ಸಾಧ್ಯತೆ ಇರುತ್ತದೆ" ಎಂದು ತಿಳಿಸಿದ್ದಾರೆ.
"ಈಗಾಗಲೇ ಅಧಿಕಾರಿಗಳು ಡ್ಯಾಂನಲ್ಲಿರುವ ನೀರನ್ನು ನದಿ ಮೂಲಕ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಜಿಲ್ಲಾ ಆಡಳಿತ ಕೋರಲಾಗಿದೆ" ಎಂದು ಮನವಿ ಮಾಡಿದ್ದಾರೆ.
ತುಂಗಭದ್ರಾ ಜಲಾಶಯದ ಪೂರ್ಣ ಮಟ್ಟ 1633 ಅಡಿಗಳು. 21/7/2024ರ ಮಾಹಿತಿಯಂತೆ 1624.41 ಅಡಿಗಳ ನೀರಿನ ಸಂಗ್ರವಿದೆ. ಡ್ಯಾಂ ಸಾಮರ್ಥ್ಯ 105.79 ಟಿಎಂಸಿ ಅಡಿಗಳು. ಭಾನುವಾರದ ಮಾಹಿತಿಯಂತೆ 74.58 ಟಿಎಂಸಿ ಅಡಿ ನೀರಿನ ಸಂಗ್ರವಿದೆ. ಡ್ಯಾಂಗೆ ಒಳಹರಿವು 1,12,101 ಕ್ಯುಸೆಕ್ ಆಗಿದೆ. 2,464 ಕ್ಯುಸೆಕ್ ಹೊರ ಹರಿವು ಇದೆ.
ಕಾಲುವೆಗಳಿಗೆ ನೀರು: ಮುಂಗಾರು ಹಂಗಾಮಿನಲ್ಲಿ ಮಳೆ ತೀವ್ರತೆ ಹೆಚ್ಚುತ್ತಿದೆ. ಇದರಿಂದಾಗಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಒಳಹರಿವು ಪ್ರಾರಂಭವಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹಣೆಯಾಗಿದ್ದು, ಒಳಹರಿವು ಸಹ ಹೆಚ್ಚಿದೆ. ಆದ್ದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರುಗಳೊಡನೆ ಚರ್ಚಿಸಿ, ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಹರಿಸುವಂತೆ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಶಿವರಾಜ ಎಸ್. ತಂಗಡಗಿ ಸೂಚನೆ ಕೊಟ್ಟಿದ್ದಾರೆ.
ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳಿಗೆ ಮುಂಗಾರು ಹಂಗಾಮಿಗೆ ವೇಳಾಪಟ್ಟಿಯಂತೆ ಕಾಲುವೆವಾರು ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜು.19 ರಿಂದ ಸರಾಸರಿ 4100 ಕ್ಯೂಸೆಕ್‌ನಂತೆ, ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು.19ರಿಂದ ಆ.03ರ ತನಕ ಸರಾಸರಿ 25 ಕ್ಯೂಸೆಕ್‌ನಂತೆ ನೀರು ಹರಿಸಲಾಗುತ್ತದೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ವಿತರಣಾ ಕಾಲುವೆಗೆ ಜು.19 ರಿಂದ ಸರಾಸರಿ 650 ಕ್ಯೂಸೆಕ್‌ನಂತೆ ನೀರು ಹರಿಸಲಾಗುವುದು. ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆಗೆ ಜು.22 ರಿಂದ ಸರಾಸರಿ 1300 ಕ್ಯೂಸೆಕ್‌ನಂತೆ ನೀರು ಹರಿಸಲಾಗುವುದು ಎಂದು ತಿಳಿಸಲಾಗಿದೆ.
ರಾಯಬಸವಣ್ಣ ಕಾಲುವೆಗೆ ಈಗಾಗಲೇ ಜು.01 ರಿಂದ 180 ಕ್ಯೂಸೆಕ್‌ನಂತೆ ನೀರು ಹರಿಬಿಡಲಾಗುತ್ತಿದೆ. ನದಿ ಪೂರಕವಾಗಿ ಸುಮಾರು 1000 ಕ್ಯೂಸೆಕ್ ಮತ್ತು ಕಾರ್ಖಾನೆಗಳಿಗೆ 60 ಕ್ಯೂಸೆಕ್‌ನಂತೆ ನೀರು ಹರಿಸಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.












Click it and Unblock the Notifications