ಶ್ರೀರಾಮುಲು ಏಕಾಂಗಿಯಾಗಿ ಚುನಾವಣೆ ಎದುರಿಸಬೇಕು!
ಬಳ್ಳಾರಿ, ಮಾ. 22 : ಗಣಿಧಣಿಗಳ ಜಿಲ್ಲೆಯ ರಾಜಕೀಯ ಕಣ ರಂಗೇರುತ್ತಿದೆ. ಬಿಜೆಪಿಯಿಂದ ಸಿಡಿದು ನಿಂತು ಬಿಎಸ್ಆರ್ ಕಾಂಗ್ರೆಸ್ ಪಕ್ಷ ಕಟ್ಟಿದ್ದ ಬಿ.ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಆದರೆ, ಶ್ರೀರಾಮುಲು ಅವರ ಬೆಂಬಲಿಗರು ಜೈಲು ಸೇರಿರುವುದು ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ ಎಂದು ಕಾದು ನೋಡಬೇಕು.
ಶ್ರೀರಾಮುಲು ಸ್ವಾಭಿಮಾನಕ್ಕಾಗಿ ಬಿಜೆಪಿ ಬಿಟ್ಟು ಹೊರಬಂದಾಗ ಅಂದಿನ ಶಾಸಕರಾದ ಬಿ. ನಾಗೇಂದ್ರ ಹಾಗೂ ಬಿ.ಎಸ್. ಆನಂದ ಸಿಂಗ್ ಅವರಿಂದ ದೂರಾಗಿದ್ದರು. ಈಗ ಅವರು ಬಿಜೆಪಿಗೆ ಮರಳಿದ್ದು, ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದಾರೆ. ಆದರೆ, ಅವರಿಗೆ ಬೆಂಬಲ ನೀಡುವ ಶಾಸಕರು ಜೈಲು ಸೇರಿದ್ದು, ಶ್ರೀರಾಮುಲು ಅವರನ್ನು ಏಕಾಂಗಿಯಾಗಿ ಮಾಡಿದೆ.

ಬಿ.ಶ್ರೀರಾಮುಲು ಅವರ ಪರಮಾಪ್ತರಾದ ಮಾಜಿ ಸಚಿವ ಜನಾರ್ದನರೆಡ್ಡಿ, ಸುರೇಶ್‌ಬಾಬು, ನಾಗೇಂದ್ರ, ಆನಂದ್‌ಸಿಂಗ್ ಈಗ ಜೈಲಿನಲ್ಲಿದ್ದಾರೆ. ಆದ್ದರಿಂದ ಲೋಕಸಭೆ ಚುನಾವಣೆ ಕಣಕ್ಕೆ ಧುಮುಕಿರುವ ಶ್ರೀರಾಮುಲು ಏಕಾಂಗಿಯಾಗಿದ್ದಾರೆ. ಸಹೋದರಿ ಜೆ.ಶಾಂತ ಮತ್ತು ತಮ್ಮ ಬಿಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಶ್ರೀರಾಮುಲು ಶನಿವಾರದಿಂದ ಪ್ರಚಾರ ಆರಂಭಿಸಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿ ಶಾಸಕ ನಾಗೇಂದ್ರ, ಹೊಸಪೇಟೆ ಶಾಸಕ ಆನಂದ್ ಸಿಂಗ್, ಕಂಪ್ಲಿ ಶಾಸಕ ಟಿ.ಎಚ್. ಸುರೇಶ್‌ಬಾಬು ಸಿಬಿಐನಿಂದ ಬಂಧಿತರಾಗಿ ಜೈಲು ಸೇರಿರುವುದರಿಂದ ಬಳ್ಳಾರಿ ಜಿಲ್ಲೆಯ ಮೂರು ಕ್ಷೇತ್ರಗಳು ಶಾಸಕರಿಲ್ಲದೆ ಅನಾಥವಾಗಿವೆ. ಈ ಕ್ಷೇತ್ರಗಳಲ್ಲಿ ಸ್ವತಃ ಶ್ರೀರಾಮುಲು ಪ್ರಚಾರ ನಡೆಸಬೇಕಾಗಿದೆ.
ಶ್ರೀರಾಮುಲು ಅವರಿಗೆ ಎನ್.ವೈ.ಹನುಂತಪ್ಪ ಈ ಬಾರಿ ಎದುರಾಳಿ. 2009ರ ಚುನಾವಣೆಯಲ್ಲಿಯೂ ಬಿ.ಶ್ರೀರಾಮುಲು ಅವರ ಸಹೋದರಿ ಜೆ.ಶಾಂತಾ ಅವರ ವಿರುದ್ಧ 2,243 ಮತಗಳ ಅಂತರದಲ್ಲಿ ಸೋತಿದ್ದ ಹನುಂತಪ್ಪ ಅವರು, ಎರಡನೇ ಬಾರಿಯು ಅದೇ ಕುಟುಂಬದ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ನಾಯಕರ ಗುಂಪುಗಾರಿಗೆ ಮುಂದುವರೆದರೆ ಅದು ಶ್ರೀರಾಮುಲು ಅವರ ಗೆಲುವಿಗೆ ಪ್ರಮುಖ ಅಸ್ತ್ರ ವಾಗುತ್ತದೆ.
ಎದುರಾಗಳಿಗಳು : ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರಿಗೆ ಕಾಂಗ್ರೆಸ್ ಪಕ್ಷದ ಎನ್.ವೈ.ಹನುಮಂತಪ್ಪ, ಆಮ್ ಆದ್ಮಿ ಪಕ್ಷದ ಶಿವಕುಮಾರ್ ಗಿರಿಯಪ್ಪ ಮಾಳಗಿ ಎದುರಾಳಿಗಳಾಗಿದ್ದಾರೆ. ಜೆಡಿಎಸ್ ಪಕ್ಷ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಹಿನ್ನೋಟ : 2009ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಶಾಂತ 402,213 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಹನುಮಂತಪ್ಪ ಅವರು 399,970 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಎ.ರಾಮಾಂಜನಪ್ಪ 16,167 ಮತಗಳನ್ನು ಪಡೆದಿದ್ದರು. [ಮಾಹಿತಿ : ಇಂಡಿಯಾವೋಟ್ಸ್.ಕಾಮ್]












Click it and Unblock the Notifications