ಅಕ್ರಮವಾಗಿ ಹಣ ಗಳಿಸಿದ ಜನಾರ್ದನ ರೆಡ್ಡಿ ರಣಹೇಡಿ: ಸಹೋದರನ ವಿರುದ್ಧ ಸೋಮಶೇಖರ್ ರೆಡ್ಡಿ ಕಿಡಿ
ಬಳ್ಳಾರಿ, ಜೂನ್ 1: ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ನಡುವಿನ ರಾಜಕೀಯ ಅಸಮಾಧಾನ ಈಗ ಸ್ಫೋಟಗೊಂಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೂಲಕ ಗೆದ್ದು ಶಾಸಕರಾಗಿರುವ ಜನಾರ್ದನ ರೆಡ್ಡಿ ಅವರ ನಾನು ಬೆಳಸಿದ ಹೇಡಿಗಳು ಮನೆಯಲ್ಲಿದ್ದಾರೆ. ನಾನು ಸದನಕ್ಕೆ ಬಂದಿದ್ದೇನೆ ಎನ್ನುವ ಹೇಳಿಕೆ ವಿರುದ್ಧ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಕಿಡಿಕಾರಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ನಮ್ಮನ್ನು ಬಳಸಿಕೊಂಡು ಅವರ ಬೇಳೆ ಬೇಯಿಸಿಕೊಂಡರು. ಜನಾರ್ದನರೆಡ್ಡಿ ಹಿಂದೆ ಎಲ್ಲರನ್ನೂ ಖರೀದಿ ಮಾಡಿ ಕರುಣಾಕರರೆಡ್ಡಿಯನ್ನು ಗೆಲ್ಲಿಸಿದ್ದರು. ಈ ಬಾರಿ ಕಾಂಗ್ರೆಸ್, ಬಿಜೆಪಿಯಲ್ಲಿ ಇರುವವರನ್ನು ಖರೀದಿ ಮಾಡಿ ಕೆಆರ್ಪಿಪಿ ಪರವಾಗಿ ಕೆಲಸ ಮಾಡಿದ್ದಾರೆ ಎಂದರು.

ನಮ್ಮ ವಿರುದ್ಧ ಜನಾರ್ದನರೆಡ್ಡಿ ರಣಹೇಡಿ ಅಂತ ಪದ ಬಳಸಿದ್ದಾರೆ..? ನಮಗೆ ಏನ್ ಪದ ಬಳಸಿ ಏನ್ ಮಾತನಾಡಿದ್ದಾರೆ ಹೇಳಿ..? ನಾನು ಬೆಳೆಸಿದ ಹೇಡಿಗಳು ಮನೆಯಲ್ಲಿದ್ದಾರೆ. ನಾನು ಸದನಕ್ಕೆ ಬಂದಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನನಗೆ, ಶ್ರೀರಾಮುಲು. ಸೋಮಲಿಂಗಪ್ಪ. ಸುರೇಶಬಾಬು, ಕರುಣಾಕರ ರೆಡ್ಡಿಗೆ ಹೇಡಿ ಅಂತಾ ಕರೆದಿದ್ದಾರೆ. ನಿಜವಾದ ರಣಹೇಡಿ ಜನಾರ್ದನರೆಡ್ಡಿ, ನಾವಲ್ಲ ಎಂದು ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾತು ಮುಂದುವರಿಸಿದ ಸೋಮಶೇಖರ್ ರೆಡ್ಡಿ, ನಮ್ಮನ್ನ ಬಳಸಿಕೊಂಡು ಬೇಳೆ ಬೇಯಿಸಿಕೊಂಡ. ನಮ್ಮನ್ನ ಬಳಸಿಕೊಂಡು ಜನಾರ್ದನರೆಡ್ಡಿ ಅಕ್ರಮವಾಗಿ ಹಣ ಗಳಿಸಿದರು. ನಿಜವಾದ ರಣಹೇಡಿ ನಾವಲ್ಲ. ಜನಾರ್ದನ ರೆಡ್ಡಿ ರಣಹೇಡಿ. ಜನಾರ್ದನರೆಡ್ಡಿಗೆ ಚಿಕ್ಕದಿನಿಂದ ಒಂದು ಗುಣ ಇದೆ. ಯಾರೇ ಆಗಲಿ. ಅವನಿಗೆ ಅವನ ಕೆಳಗೆ ಇರಬೇಕು. ಅವರು ಹೇಳಿದ್ದು ಕೇಳಲಿಲ್ಲ ಎಂದರೆ ಅವರು ಎಲ್ಲರನ್ನೂ ಡೆಮಾಲಿಷ್ ಮಾಡುತ್ತಾರೆ. ನಾವೆಲ್ಲಾ ಒಂದಾಗಿದ್ದೇವೆ, ನಾವೂ ಜನಾರ್ದನ ರೆಡ್ಡಿಯನ್ನು ಎದುರಿಸುತ್ತೇವೆ. ಸಂಸತ್ ಚುನಾವಣೆಯಲ್ಲಿ ನಮ್ಮ ಬಲ ತೋರಿಸುತ್ತೇವೆ ಎಂದು ಸಹೋದರ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಸೋಮಶೇಖರ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications