ಬಳ್ಳಾರಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ನೇಮಕ
ಬಳ್ಳಾರಿ, ಜುಲೈ, 18: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವೆಂಕಟೇಶ್ ಟಿ. ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಾಲಿ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ವೆಂಕಟೇಶ್ ಅವರು ಐಎಎಸ್ ಶ್ರೇಣಿಯ ಅಧಿಕಾರಿಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ವೆಂಕಟೇಶ್ ಅವರು ಬಳ್ಳಾರಿಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಹಾಲಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಅವರನ್ನು ಬೇರೆ ಕಡೆ ವರ್ಗಾಯಿಸಲಾಗಿದ್ದು, ಸ್ಥಳ ನಿಗದಿ ಆಗಿಲ್ಲ.

ಪವನ್‌ಕುಮಾರ್ ಮಾಲಪಾಟಿ ಅವರ ವರ್ಗಾವಣೆಯಿಂದಾಗಿ ತೆರವುಗೊಂಡ ಜಾಗಕ್ಕೆ ವೆಂಕಟೇಶ್ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ವಿಜಯನಗರ ಜಿಲ್ಲೆಗೆ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಪಂಚಾಯತಿ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಎಸ್.ದಿವಾಕರ್ ಅವರನ್ನು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಉಡುಪಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ನೇಮಕ
ಇನ್ನು ಇತ್ತೀಚೆಗಷ್ಟೇ ಉಡುಪಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯನ್ನು ಘೋಷಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಈ ಹಿಂದೆ ಉಡುಪಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಅನುಭವವಿದ್ದ ಡಾ.ವಿದ್ಯಾ ಕುಮಾರಿ ಅವರನ್ನು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ನಿಕಟಪೂರ್ವ ಜಿಲ್ಲಾಧಿಕಾರಿಯಾಗಿದ್ದ ಕೂರ್ಮರಾವ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದ್ದು, ಮುಂದಿನ ಹುದ್ದೆಗೆ ನಿಯುಕ್ತಿಗೊಳಿಸಿಲ್ಲ. ಡಾ.ವಿದ್ಯಾಕುಮಾರಿ ಅವರು ಸದ್ಯ ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಉಡುಪಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಡಾ.ವಿದ್ಯಾಕುಮಾರಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರು. 2014ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ವಿದ್ಯಾಕುಮಾರಿ ಅವರು ಆಗಿದ್ದಾರೆ. ಇನ್ನು ಈ ಹಿಂದೆ ಕೂರ್ಮರಾವ್ ಅವರು 2021ರ ಅಗಸ್ಟ್ 29ರಂದು ಉಡುಪಿ ಜಿಲ್ಲಾಧಿಕಾರಿ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಾಗಿದ್ದು, ಇದೀಗ ಮಹಿಳಾ ಅಧಿಕಾರಿಯನ್ನೇ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ ನೇಮಕ ಮಾಡಿದ್ದು, ಉಡುಪಿಯಲ್ಲಿ ಆಡಳಿತ ವ್ಯವಸ್ಥೆ ಮಹಿಳಾ ಬಲ ಬಂದಂತಾಗಿದೆ.












Click it and Unblock the Notifications