ಮೋದಿ ಭರವಸೆ: ನಗರ ಹಾಗೂ ಗ್ರಾಮೀಣ ಪ್ರದೇಶದ ನಡುವಿನ ಅಂತರ ತಗ್ಗಿಸುವ ಗುರಿ
ರಾಜ್ಯ ವಿಧಾನಸಭಾ ಚುನಾವಣಾ ಬೆನ್ನಲ್ಲೆ ವಿಜಯನಗರದ ಹೊಸಪೇಟೆಯ ಬಿಜೆಪಿ ಸಮಾವೇಶದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಈ ವೇಳೆ ಹೊಸಪೇಟೆಯಲ್ಲಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
ಸಭೆಯನ್ನುದ್ದೇಶಿಸಿ ಮಾತನಾಡುವಾಗ ಮೋದಿ ಕನ್ನಡದಲ್ಲಿ ಭಾಷಣ ಆರಂಭಿಸಿದರು. 'ವೈಭವಶಾಲಿ ವಿಜಯನಗರ ಜನತೆಗೆ ನನ್ನ ನಮಸ್ಕಾರಗಳು' ಎಂದು ಮೋದಿ ಹೇಳಿದರು. ಈ ವೇಳೆ ಮೋದಿ ಪರ ಘೋಷಣೆಗಳು ಮೊಳಗಿದವು.

'ಇಡೀ ದೇಶದಲ್ಲಿ ಕರ್ನಾಟಕ ರಾಜ್ಯವನ್ನು ನಂಬರ್ ಒನ್ ಮಾಡಲು ಸಂಕಲ್ಪ ಮಾಡಿದ್ದೇವೆ. ಇದಕ್ಕಾಗಿ ಹನುಮಂತನ ಆಶೀರ್ವಾದ ಕೇಳಲು ಬಂದಿದ್ದೇವೆ. ಇದು ಅಭಿವೃದ್ಧಿ, ವಿಕಾಸದ ಹೆಜ್ಜೆ. ಯಾವುದೇ ಕಾರಣಕ್ಕೂ ಕರ್ನಾಟಕ ಗೌರವಕ್ಕೆ ಒಂದು ಕಪ್ಪು ಚುಕ್ಕೆ ಬೀಳದಂತೆ ನೋಡಿಕೊಳ್ಳಲಾಗುತ್ತದೆ' ಎಂದು ಮೋದಿ ಭರವಸೆಯನ್ನು ನೀಡಿದರು.
ಈ ವೇಳೆ ಮೋದಿ ಇಲ್ಲಿನ ಇತಿಹಾಸವನ್ನು ಮೆಲುಕು ಹಾಕಿದರು. 'ವಿಜಯನಗರ ಸಾಮ್ರಾಜ್ಯದ ಇತಿಹಾಸ ಭಾರತದ ಗೌರವವಾಗಿದೆ. ಶ್ರೀಕೃಷ್ಣದೇವರಾಯ ಅವರ ಆಡಳಿತದ ಕಾಲದಲ್ಲಿ ಈ ಕ್ಷೇತ್ರವನ್ನು ಅಮರವನ್ನಾಗಿ ಮಾಡಿದ್ದಾರೆ. ಅವರು ಬೇರೆ ಬೇರೆ ದೇಶಗಳೊಂದಿಗೆ ಸಂಬಂಧ ಗಟ್ಟಿಗೊಳಿಸಿದ್ದಾರೆ. ಪ್ರತಿಯೊಬ್ಬ ನಾಗರಿಕನ ಬಗ್ಗೆ ಚಿಂತೆಯನ್ನು ಮಾಡಿದ್ದಾರೆ. ಪುರಾಣದಲ್ಲಿ ಈ ಕ್ಷೇತ್ರದ ಬಗ್ಗೆ ಬರೆಯಲಾಗಿದೆ. ಇದರ ಬಗ್ಗೆ ವಿಶೇಷವಾದ ಉಲ್ಲೇಖವಿದೆ. ಆದರೆ ಹಂಪಿಗೆ ಬೇಕಾದ ಗೌರವ ಸಿಗುತ್ತಿಲ್ಲ. ಹೀಗಾಗಿ ನಮ್ಮ ಸರ್ಕಾರ ಬಂದ ನಂತರ ಹಂಪಿಯ ಕಲ್ಲಿನ ಚಿತ್ರವನ್ನು ನೋಟಿನಲ್ಲಿ ಮುದ್ರಿಸಲಾಯಿತು' ಎಂದು ಮೋದಿ ನೆನೆಸಿಕೊಂಡರು.

'ನೀವೆಲ್ಲಾ ಈ ಜಿಲ್ಲೆ ನಿರ್ಮಾಣ ಮಾಡಲು ಬಹಳ ವರ್ಷ ಆಸೆ ಪಟ್ಟಿದ್ದೀರಿ. ನಿಮ್ಮೆಲ್ಲರ ಆಸೆಯನ್ನು ಈಡೇರಿಸುವ ಕೆಲಸ ಬಿಜೆಪಿ ಮಾಡಿದೆ. ಈ ಭಾಗದಲ್ಲಿ ಬಹಳ ವೇಗವಾಗಿ, ಬಹಳ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಹೀಗಾಗಿ ನೀವೆಲ್ಲರು ನಿಶ್ಚಯಿಸಬೇಕಿದೆ. ಈ ಬಾರಿಯ ಸರ್ಕಾರ ಬಿಜೆಪಿಯ ಸರ್ಕಾರ ಎಂದು' ಎಂದು ಮೋದಿ ಹೇಳಿದರು.
ಜೊತೆಗೆ 'ನಗರ ಹಾಗೂ ಗ್ರಾಮೀಣ ಪ್ರದೇಶದ ನಡುವೆ ಬಹಳ ದೊಡ್ಡ ಕಂದಕ ನಿರ್ಮಾಣವಾಗಿದೆ. ಇದನ್ನು ತೊಡೆದು ಹಾಕಲು ನಾವು ಪ್ರಯತ್ನ ಮಾಡುತ್ತೇವೆ. ನಗರದಲ್ಲಿ ಯಾವೆಲ್ಲಾ ಸೌಲಭ್ಯಗಳು ಸಿಗುತ್ತವೋ ಅವು ಗ್ರಾಮೀಣದಲ್ಲೂ ಸಿಗುವಂತೆ ಮಾಡುವ ಉದ್ದೇಶ ಹಾಗೂ ನಮ್ಮ ಪ್ರಯತ್ನ ಇದೆ' ಎಂದರು.
ಈ ವೇಳೆ ಈ ಭಾಗದ ರೈತರ ಬಗ್ಗೆ ಮೋದಿ ಪ್ರಸ್ತಾಪ ಮಾಡಿದರು. 'ರೈತರದ್ದು ಒಂದು ಬೇಡಿಕೆ ಇದೆ. ಅದು ಏನೆಂದರೆ, ಅವರ ಜಮೀನಿಗೆ ನೀರಾವರಿ ವ್ಯವಸ್ಥೆ ಬೇಕಾಗಿದೆ. ಈ ಆಸೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಈಡೇರಲು ಸಾಧ್ಯ. ಅದಾಗ್ಯೂ ಕೆರೆಗಳ ನವೀಕರಣವನ್ನು ನಮ್ಮ ಸರ್ಕಾರ ಮಾಡುತ್ತಿದೆ' ಎಂದು ಮೋದಿ ಹೇಳಿದರು.
ವಿಜಯನಗರ ಜಿಲ್ಲೆ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ವ್ಯವಸಾಯದ ಕಾಲೇಜನ್ನು ಪ್ರಾರಂಭ ಮಾಡಿದ್ದೇವೆ. ಅನೇಕ ಯುವಕರನ್ನು ತಯಾರಿ ಮಾಡುತ್ತಿದ್ದೇವೆ. ಇದರಿಂದ ಪ್ರತಿಯೊಂದು ಮನೆಗೆ ಕುಡಿಯುವ ನೀರು, ಆರೋಗ್ಯ ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶದ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಮೋದಿ ಹೇಳಿದರು.












Click it and Unblock the Notifications