ಸರ್ಕಾರ ಮತ್ತು ಶಾಸಕಾಂಗದ ನಡುವಿನ ಸೌಹಾರ್ದತೆಗಾಗಿ ಪತ್ರ: ಶಾಸಕ ಬಸವರಾಜ ರಾಯರೆಡ್ಡಿ
ವಿಜಯನಗರ, ಜುಲೈ 25: ಶಾಸಕರು ಹಾಗೂ ಸಚಿವರ ನಡುವೆ ಸಮನ್ವಯತೆ ಕೊರತೆ ನೀಗಿಸಲು ಮತ್ತು ಅಭಿವೃದ್ಧಿ ವಿಚಾರದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ್ ಸೇರಿದಂತೆ ಕೆಲ ಸಚಿವರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆಯಲಾಗಿದೆ. ಈ ಪತ್ರಕ್ಕೆ ನಾನು ಕೂಡ ಸಹಿ ಮಾಡಿರುವೆ ಎಂದು ಶಾಸಕ ಬಸವರಾಜ ರಾಯರಡ್ಡಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪತ್ರದ ಆಧಾರದ ಮೇಲೆ ಸಿಎಂ ಸಿದ್ದರಾಮಯ್ಯನವರು ಜು.27ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಕೆಲವರು ಹೊಸ ಶಾಸಕರು ಮತ್ತು ಸಚಿವರು ಇದ್ದಾರೆ. ಶಾಸಕರು ಈ ರೀತಿ ಕೇಳುವುದರಲ್ಲಿ ತಪ್ಪೇನಿಲ್ಲ. ಇದು ನಮಗೆ ಅಸಮಾಧಾನ ಅಂತ ಅನಿಸೋಲ್ಲ, ಕಮ್ಯುನಿಕೇಷನ್ ಗ್ಯಾಪ್ ವಿಚಾರವೂ ಇದೆ ಎಂದರು.

ಶಾಸಕರು ಹಾಗೂ ಸಚಿವರ ನಡುವೆ ಸಮನ್ವಯತೆ ಇರಬೇಕು ಎಂದು ಕೇಳಲಾಗಿದೆ. ವೈಯಕ್ತಿಕವಾಗಿ ಸರ್ಕಾರದ ಬಗ್ಗೆ ನಮಗೆ ಯಾವುದೇ ಅಸಮಾಧಾನ ಇಲ್ಲ. ಕೆಲವರು, ಹೊಸ ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ, ಸಂಪರ್ಕ ಸಂಬಂಧ ಸಭೆ ಕರೆಯಿರಿ ಅಂತ ಹೇಳಿದ್ದಾರೆ, ಸಿಎಂ ಸಿದ್ದರಾಮಯ್ಯನವರು ಕೂಡ ಸಭೆಗೆ ದಿನಾಂಕ ನಿಗದಿಪಡಿಸಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಸರ್ಕಾರ ಈಗ ತಾನೇ ರಚನೆಯಾಗಿದೆ. ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. 135 ಶಾಸಕರು ಗೆದ್ದಿದ್ದಾರೆ. ಸುಭದ್ರ ಸರ್ಕಾರವಾಗಿದೆ. ಸಿದ್ದರಾಮಯ್ಯನವರು ಕೆಲಸ ಮಾಡುತ್ತಿಲ್ಲಾ ಅಂದ್ರೆ, ಯಾವ ವೈರಿಯೂ ಮೆಚ್ಚಲ್ಲ. ಇಡೀ ಭಾರತದಲ್ಲಿ ಅತ್ಯುತ್ತಮ ಸರ್ಕಾರ, ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕಾಂಗದ ಪಕ್ಷದ ಸಭೆ ಕರೆಯಬೇಕು ಎಂದು ಶಾಸಕರ ಒತ್ತಾಯ ಬಹಳ ಇತ್ತು. ನಾನು ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅಂತ ಹೇಳಿದವನಲ್ಲ. ಆಳಂದ ಶಾಸಕರು ಕೇಳಿದ್ದಾರೆ, ನಾನು ಸಹಿ ಮಾಡಿದ್ದೇನೆ. ಸರ್ಕಾರ ಮತ್ತು ಶಾಸಕಾಂಗದ ನಡುವೆ ಸೌಹಾರ್ದತೆ ಇರಲಿ ಅಂತ ಹೇಳಿದ್ದಾರೆ, ಅದ್ರಲ್ಲಿ ತಪ್ಪೇನಿಲ್ಲ ಎಂದರು.
ನಾನು ಬಹಳ ನೇರ ವ್ಯಕ್ತಿತ್ವದ ವ್ಯಕ್ತಿ. ಭಾರತದ ಈಗಿನ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯನನವರು ಕೂಡ ಉತ್ತಮ ಮುಖ್ಯಮಂತ್ರಿಯಾಗಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನನಗೂ ಸಚಿವ ಸ್ಥಾನ ಸಿಕ್ಕಿಲ್ಲ, ಹಾಗಂತ ನನಗೆ ಅಸಮಾಧಾನ ಇಲ್ಲ. ಸಮನ್ವಯದ ಕೊರತೆ ಇದೆ, ಸರಿಯಾಗಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ಇನ್ನು ವಿಧಾನಪರಿಷತ್‌ನ ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಸಿಎಂ ಬದಲಾವಣೆ ಕುರಿತ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಸಿದ್ದರಾಮಯ್ಯನವರು ಐದು ವರ್ಷ ಸಿಎಂ ಆಗಿರಲಿ ಎಂದು ಹೇಳುವುದರಲ್ಲಿ ತಪ್ಪೇನಿಲ್ಲ. ವಿರೋಧ ಪಕ್ಷದವರು ಟೀಕೆ ಮಾಡ್ತಾರೆ ಮಾಡಲಿ, ಅವರದ್ದು ಅದೇ ಕೆಲಸ ಹೊರತು ಬೇರೇನೂ ಇಲ್ಲ ಎಂದರು.












Click it and Unblock the Notifications