ಬಳ್ಳಾರಿ : ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ
ಬಳ್ಳಾರಿ, ಸೆ.14 : ದೆಹಲಿಯ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಗಲ್ಲುಶಿಕ್ಷೆ ಪ್ರಕಟಗೊಂಡ ಬೆನ್ನಲ್ಲೇ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ದುಷ್ಕರ್ಮಿಗಳು 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ನಡೆದಿದೆ.
ಶನಿವಾರ ಹಗರಿಬೊಮ್ಮನಹಳ್ಳಿಯಲ್ಲಿ ಹೊಲಕ್ಕೆ ಹೋಗುತ್ತಿದ್ದ 15 ವರ್ಷದ ಬಾಲಕಿ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿ ಕುತ್ತಿಗೆಗೆ ದುಪ್ಪಟ್ಟ ಬಿಗಿದು ಕೊಲೆ ಮಾಡಲಾಗಿದೆ. ಬಾಲಕಿಯನ್ನು ಮೆಕ್ಕೆಜೋಳದ ಹೊಲಕ್ಕೆ ಎಳೆದುಕೊಂಡು ಹೋದ ದುಷ್ಕರ್ಮಿಗಳು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾರೆ.

ಬಾಲಕಿ ಮುಖದ ಮೇಲೆ ಉಗುರಿನಿಂದ ಗೀರಿದ ಹಾಗೂ ಹಣೆಯಲ್ಲಿ ಸಿಗರೇಟಿನಿಂದ ಸುಟ್ಟಿರುವ ಗಾಯಗಳಿವೆ. ಹೊಲಕ್ಕೆ ಹೋಗಿದ್ದ ಮಗಳು ಬಹಳ ಹೊತ್ತಾದರೂ ಮನೆಗೆ ಆಗಮಿಸಿರಲಿಲ್ಲ. ಪೋಷಕರು ಹುಡುಕುತ್ತಾ ಹೋದಾಗ ಬೆಳಗ್ಗೆ 11.30ರ ಸುಮಾರಿಗೆ ಮೆಕ್ಕೆಜೋಲದ ಹೊಲದಲ್ಲಿ ಬಾಲಕಿ ಶವ ಪತ್ತೆಯಾಗಿದೆ.
ಶವ ಪತ್ತೆ ಹಚ್ಚಲು ನಾಯಿ ನರೆವು : ಮನೆಯಿಂದ ಹೊಲಕ್ಕೆ ಹೋಗಿರುವ ಮಗಳು ತುಂಬಾ ಹೊತ್ತಾದರೂ ಮನೆಗೆ ಬಾರದ ಕಾರಣ ಆಕೆಯ ಪೋಷಕರು ಹುಡುಕಾಡಿದ್ದಾರೆ. ಆಗ, ಮನೆಯ ಸಾಕು ನಾಯಿಯ ಸಹಾಯದಿಂದ ಹುಡುಕಲು ಹೊರಟಾಗ ಶವ ಮೆಕ್ಕೆಜೋಳದ ಹೊಲದಲ್ಲಿ ದೊರಕಿದೆ.
ಹಗರಿಬೊಮ್ಮನಹಳ್ಳಿ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಎಸ್. ಭೀಮಾನಾಯ್ಕ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃತ್ಯ ಎಸಗಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಪೊಲೀಸರು ಮಾತ್ರ ಯಾವುದೆ ಒತ್ತಡ, ಪ್ರಭಾವಕ್ಕೆ ಒಳಗಾಗದೆ ಆರೋಪಿಗಳ ಪತ್ತೆಗೆ ಮುಂದಾಗಬೇಕು. ವಿಶೇಷ ತಂಡಗಳನ್ನು ರಚಿಸಿ, ಕಾರ್ಯಾಚರಣೆ ನಡೆಸಬೇಕು ಎಂದರು.












Click it and Unblock the Notifications