ಬಳ್ಳಾರಿಯಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಮೇಕರ ಈಶ್ವರ ರೆಡ್ಡಿ ಸ್ಪರ್ಧೆ
ಬಳ್ಳಾರಿ, ಏಪ್ರಿಲ್ 02 : ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಮೇಕರ ಈಶ್ವರ ರೆಡ್ಡಿ ಘೋಷಣೆ ಮಾಡಿದ್ದಾರೆ. ಬಳ್ಳಾರಿಯಲ್ಲಿ ಅಧಿಕೃತವಾಗಿ ಕೆಪಿಜೆಪಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ಸಿಕ್ಕಿದೆ.
ಮೇಕರ ಈಶ್ವರ ರೆಡ್ಡಿ ಅವರು ಸೋಮವಾರ ಚುನಾವಣೆಗೆ ಸ್ಪರ್ಧಿಸುವ ಕುರಿತು ಘೋಷಣೆ ಮಾಡಿದ್ದಾರೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ 'ಆಟೋ' ಚಿಹ್ನೆಯಡಿ ಅವರು ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ.
ಕಳೆದ ಆರು ವರ್ಷಗಳಿಂದ ಮೇಕರ ಈಶ್ವರ ರೆಡ್ಡಿ ಅವರು ಯುವಕರು, ಸಮಾಜಸೇವಾ ಆಸಕ್ತರಿಂದ ಆರಂಭವಾದ 'ಯುವಸೇನ ಸೋಷಿಯಲ್ ಕ್ಲಬ್' ಸಂಚಾಲಕರಾಗಿ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಸಾಮಾಜಿಕ ಕಾರ್ಯಗಳಲ್ಲಿ ತಮ್ಮದೇ ಆದ ಕಾರ್ಯಪಡೆ, ತಮ್ಮದೇ ಆದ ಸೇವೆ, ತಮ್ಮದೇ ಆದ ಗುರಿ, ಉದ್ದೇಶಗಳನ್ನು ಹೊಂದಿ ಜನಪರ ಚಳವಳಿಗಳನ್ನು ಹಮ್ಮಿಕೊಳ್ಳುತ್ತಲೇ ಜನರ ಸಮಸ್ಯೆಗಳಿಗೆ ನಿಸ್ವಾರ್ಥದಿಂದ ಸ್ಪಂದಿಸುತ್ತಿದ್ದಾರೆ.
ಜನರ ಸಮಸ್ಯೆಗಳನ್ನು ಜಿಲ್ಲಾಡಳಿತ, ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸಿ, ಪರಿಹಾರಗಳನ್ನು ಪಡೆಯಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಇವರ ಜನಪರ ಕಾಳಜಿ, ನಿಸ್ವಾರ್ಥ ಸೇವೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವರ ಬೆಂಬಲಿಗರು ಸಕ್ರಿಯ ರಾಜಕಾರಣಕ್ಕೆ ಬರಲು ಒತ್ತಡ ಹೇರುತ್ತಲೇ ಇದ್ದರು.
ಕೋಟ್ಯಾಂತರ ರೂಪಾಯಿ ಚುನಾವಣಾ ಖರ್ಚನ್ನು ನಿರ್ವಹಿಸಲು ಸಾಧ್ಯವಿಲ್ಲದ ಕಾರಣ, ಸಕ್ರಿಯ ರಾಜಕಾರಣಕ್ಕೆ ಆಸಕ್ತಿ ತೋರದ ಮೇಕಲ ಈಶ್ವರ ರೆಡ್ಡಿ ಅವರು ಈ ಬಾರಿ ಕೆಪಿಜೆಪಿಯ 'ಆಟೋ' ಚಿನ್ಹೆಯಡಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಸ್ಥಳೀಯ ಸಮಸ್ಯೆಗಳನ್ನು ಕೇಂದ್ರೀಕರಿಸಿದ 16 ಅಂಶಗಳ 'ನಿಮ್ಮೆಲ್ಲರ ಕನಸು, ನಮ್ಮಿಂದ ನನಸು' ಎನ್ನುವ ಶೀರ್ಷಿಕೆ ಅಡಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಮೇಕರ ಈಶ್ವರ ರೆಡ್ಡಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications