ಪತಿಯ ಕಾಟಕ್ಕೆ ಬೇಸತ್ತು ತವರು ಸೇರಿದ ಪತ್ನಿ: ವಾಪಸ್ ಕರೆ ತರಲು ಮಚ್ಚು ಸಮೇತ ಬಂದ ಭೂಪ
ವಿಜಯನಗರ, ಮಾರ್ಚ್ 30: ಮದ್ಯಪಾನ ವ್ಯಸನಿ ಗಂಡನ ಕಾಟ ತಾಳಲಾರದೇ ತವರು ಮನೆ ಸೇರಿದ್ದ ಪತ್ನಿಯನ್ನು ಪತಿಯೇ ಕೊಲೆ ಮಾಡಲು ಯತ್ನಿಸಿದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲೋನಿಯಲ್ಲಿ ನಡೆದಿದೆ.
ರಮೇಶ ಪತ್ನಿಯನ್ನು ಕೊಲೆ ಮಾಡಲು ಮುಂದಾಗಿದ್ದ ಆರೋಪಿ ಎಂದು ಗುರುತಿಸಲಾಗಿದೆ.
ಹೊಸಪೇಟೆ ಮೂಲದ ರಮೇಶ್ ಕಳೆದ 8 ವರ್ಷಗಳ ಹಿಂದೆ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲೋನಿಯ ಆಶಾ ವನಜಾ ಅವರನ್ನು ಮದುವೆಯಾಗಿದ್ದನು. ಗಂಡ ರಮೇಶನ ಮದ್ಯ ಸೇವನೆ ಚಟ ಹೆಚ್ಚಿದ ಹಿನ್ನೆಲೆಯಲ್ಲಿ ಬೇಸತ್ತ ಪತ್ನಿ ಆಶಾ ವನಜಾ, ಗಂಡನ ಜೊತೆ ಸಂಸಾರ ಮಾಡಲು ನಿರಾಕರಿಸಿ, ಇತ್ತೀಚಿಗೆ ತವರು ಮನೆ ಸೇರಿದ್ದರು ಎನ್ನಲಾಗಿದೆ.

ತವರು ಮನೆಯಲ್ಲಿರುವ ಪತ್ನಿ ಆಶಾ ವನಜಾಳನ್ನು ವಾಪಸ್ ಕರೆ ತರಲು ರಮೇಶ ಸಾಕಷ್ಟು ಬಾರಿ ಪ್ರಯತ್ನಿಸಿದ್ದು, ಪತಿಯ ವರ್ತನೆಯಿಂದ ಬೇಸತ್ತ ಆಕೆ ಪುನಃ ಗಂಡನ ಮನೆಗೆ ಬರುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ತವರು ಮನೆಗೆ ಹೋಗಿ ವರ್ಷವಾದ್ರೂ ಬಾರದ ಪತ್ನಿಯ ಮೇಲೆ ಕುಪಿತಗೊಂಡ ಪತಿ ರಮೇಶ್, ಗುರುವಾರ ಮಧ್ಯಾಹ್ನದ ವೇಳೆಗೆ ಮಚ್ಚು ಹಿಡಿದು ತವರು ಮನೆಗೆ ಬಂದಿದ್ದಾನೆ. ಆಶಾ ವನಜಾಳನ್ನು ಮನೆಗೆ ಬರುವಂತೆ ಕರೆದ ರಮೇಶ್ ಒಂದು ವೇಳೆ ಬರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಥಳೀಯರು, ಮಚ್ಚು ಕಸಿದುಕೊಂಡು ಮಹಿಳೆಯನ್ನು ರಕ್ಷಿಸಿದ್ದಾರೆ. ರಮೇಶ್‌ಗೆ ಬುದ್ದಿವಾದ ಹೇಳಿದ್ದಾರೆ. ಅಲ್ಲದೇ ಕೂಡಲೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು,ಗಂಡ ರಮೇಶನನ್ನು ಮಚ್ಚು ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾರು-ಬೈಕ್ ಭೀಕರ ಅಪಘಾತ: ಇಬ್ಬರು ದಾರುಣ ಸಾವು
ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‍ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ಸಮೀಪ ನಡೆದಿದೆ.
ಮೃತ ಯುವಕರನ್ನು ತರೀಕೆರೆ ಪಟ್ಟಣದ ನಿವಾಸಿಗಳಾದ ಬಿಲಾಲ್(28) ಹಾಗೂ ಅಜೀಂ(28) ಎಂದು ಗುರುತಿಸಲಾಗಿದ್ದು, ಇಬ್ಬರು ಯುವಕರು ಬುಧವಾರ ಬೆಳಗ್ಗೆ ಪಟ್ಟಣದಿಂದ ಸಂದೀಪಿನಿ ಶಾಲೆಯತ್ತ ಒಂದೇ ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಕಾರು ಬೈಕ್‍ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‍ನಲ್ಲಿದ್ದ ಇಬ್ಬರು ಸವಾರರು ಕೆಲ ಅಡಿಗಳಷ್ಟು ದೂರಕ್ಕೆ ಹಾರಿ ಬಿದ್ದ ಪರಿಣಾಮ ಇಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವವು ಬಾಗಲಕೋಟೆ ತಾಲೂಕಿನ ಮಲ್ಲಾಪುರ ಕ್ರಾಸ್ ಬಳಿ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಸುಮಾರು 35 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಮೃತ ವ್ಯಕ್ತಿಯ ಮುಖದ ಗುರುತು ಸರಿಯಾಗಿ ಪತ್ತೆಯಾಗಿಲ್ಲ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಕುಡಿದು ಜಗಳವಾಡಿ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications