ಗಣಿನಾಡಿನ ಮದಿರೆ ಗ್ರಾಮದಲ್ಲಿ ಶವಯಾತ್ರೆಗೆ ಹಳ್ಳದ ಹಾದಿ...
ಬಳ್ಳಾರಿ, ಡಿಸೆಂಬರ್ 06: ಇಂದಿಗೂ ರಾಜ್ಯದ ಅಸಂಖ್ಯ ಹಳ್ಳಿಗಳಲ್ಲಿ ಮೂಲಸೌಲಭ್ಯಗಳಿಲ್ಲ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಇಂಥ ಮೂಲ ಸೌಕರ್ಯಗಳಿಲ್ಲದೇ ಗ್ರಾಮಸ್ಥರು ಪ್ರತಿನಿತ್ಯದ ಜೀವನವನ್ನೇ ಸವಾಲೆಂಬಂತೆ ಕಳೆಯಬೇಕಿದೆ. ಈ ಸೌಲಭ್ಯದ ವಿಷಯಕ್ಕೆ ಬಂದರೆ, ಈಚೆಗೆ ಮತ್ತೂ ಒಂದು ಸಮಸ್ಯೆ ಹಳ್ಳಿಗಳನ್ನು ಕಾಡುತ್ತಿದೆ.
ಅದೇ ಸ್ಮಶಾನದ ಭೂಮಿಯ ಕೊರತೆ. ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮ ಪಂಚಾಯಿತಿಗೆ ಒಳಪಡುವ ಮದಿರೆ ಗ್ರಾಮದಲ್ಲೂ ಈ ಕೊರತೆ ಗ್ರಾಮಸ್ಥರನ್ನು ಸಮಸ್ಯೆಗೆ ದೂಡಿದೆ.
ಸ್ಮಶಾನಕ್ಕೆ ಸೂಕ್ತ ಜಾಗವಿಲ್ಲದೇ ಮದಿರೆ ಗ್ರಾಮದೊಳಗೆ ಹಾದುಹೋಗುವ ಹಳ್ಳ ದಾಟಿ ಶವವನ್ನು ಹೊತ್ತೊಯ್ಯುಬೇಕಾದ ಸನ್ನಿವೇಶವಿದೆ. ಆ ಹಳ್ಳದಾಚೆಗೆ ರುದ್ರಭೂಮಿ ಇರುವುದರಿಂದ ಅನಿವಾರ್ಯ ಕಾರಣದಿಂದಾಗಿ ಶವವನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ಊಳಬೇಕಾದ ಪರಿಸ್ಥಿತಿಯಿದೆ. ಆದರೆ ಸೋಮಸಮುದ್ರ ಗ್ರಾಮ ಪಂಚಾಯಿತಿಯಾಗಲೀ ಅಥವಾ ಜಿಲ್ಲಾಡಳಿತವಾಗಗಲೀ ಈ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಬೇರೆ ಕಾಲದಲ್ಲಿ ಹಳ್ಳ ದಾಟುವುದು ಕಷ್ಟವೆನಿಸುವುದಿಲ್ಲ. ಆದರೆ ಮಳೆಗಾಲ ಬಂತೆಂದರೆ ಸಾಕು. ಹಳ್ಳ ತುಂಬಿ ಹರಿಯುತ್ತದೆ. ಆಗ ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ ಹಳ್ಳದಲ್ಲೇ ಇಳಿದುಕೊಂಡು ಶವಸಂಸ್ಕಾರ ಮಾಡಬೇಕು. ಹಳ್ಳದ ದಂಡೆಯ ಪಕ್ಕದಲ್ಲಿ ಹೊಲಗಳಿವೆಯಾದರೂ ಶವ ಹೊತ್ತೊಯ್ಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಕುರಿತು ಗ್ರಾಮ ಪಂಚಾಯಿತಿ ಕಚೇರಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಇಲ್ಲವಾಗಿದೆ ಎಂದು ಗ್ರಾಮಸ್ಥರು ನಿರಾಶರಾಗಿದ್ದಾರೆ.












Click it and Unblock the Notifications