ಹಾಲಿನ ದರ 3 ರೂ. ಹೆಚ್ಚಳ; ಕೆಎಂಎಫ್ ಅಧ್ಯಕ್ಷರ ಸಮರ್ಥನೆ
ಬಳ್ಳಾರಿ, ಜುಲೈ 25; ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನ ಮಾಡಿದಂತೆ ಪ್ರತಿ ಲೀಟರ್ ಹಾಲಿನ ದರವನ್ನು ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಲೀಟರ್‌ಗೆ 3 ರೂ. ಹೆಚ್ಚಿಸಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ, ರಾಬಕೊವಿ ಜಿಲ್ಲಾ ಹಾಲು ಸಹಕಾರ ಒಕ್ಕೂದ ಅಧ್ಯಕ್ಷ ಎಲ್. ಭೀಮನಾಯ್ಕ ತಿಳಿಸಿದರು. ಹಾಲಿನ ದರ ಏರಿಕೆಯನ್ನು ಅವರು ಸಮರ್ಥಿಸಿಕೊಂಡರು.
ಮಂಗಳವಾರ ಬಳ್ಳಾರಿ ನಗರದ ಕೆಎಂಎಫ್‍ನ ಡೈರಿ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿದರು. ಆಗಸ್ಟ್ 1 ರಿಂದ ಹಾಲಿನ ದರ ಹೆಚ್ಚಾಗುತ್ತಿರುವುದರ ಕುರಿತು ಮಾತನಾಡಿದರು. ಹೊಸ ದರವು ಜಾರಿಗೆ ಬರಲಿದೆ ಹಾಗೂ ಹೆಚ್ಚುವರಿ ಮಾಡುವ ಮಾರಾಟ ದರದ ಸಂಪೂರ್ಣ ಮೊತ್ತವನ್ನು ರೈತರಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದರು.

"ಕರ್ನಾಟಕ ಹಾಲು ಮಹಾಮಂಡಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ ರೂ. 3 ಹೆಚ್ಚಳಕ್ಕೆ ಸಮ್ಮತಿ ನೀಡಲಾಗಿದೆ. ಆಗಸ್ಟ್ 1 ರಿಂದ ನೂತನ ದರ ಜಾರಿಗೆ ಬರಲಿದೆ" ಎಂದು ಹೇಳಿದರು.
ದರ ಹೆಚ್ಚಳ ಮಾಡಿರುವುದು ಏಕೆ?; ಎಲ್. ಭೀಮನಾಯ್ಕ ಮಾತನಾಡಿ, "ರಾಜ್ಯದಲ್ಲಿ ಪ್ರಮುಖವಾಗಿ ಸಣ್ಣ, ಮಧ್ಯಮ ರೈತರು ಹಾಗೂ ಹೆಚ್ಚು ಮಹಿಳಾ ರೈತರೇ ಹೈನೋದ್ಯಮವನ್ನು ಜೀವನೋಪಾಯದ ಮೂಲ ಕಸುಬನ್ನಾಗಿ ಅಳವಡಿಸಿಕೊಂಡಿರುವುದು ಹಾಗೂ ಹಾಲು ಉತ್ಪಾದನೆ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮತ್ತು ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲು ಸಂಸ್ಕರಣೆ, ಸಾಗಾಣಿಕೆ, ಖರೀದಿ ದರಗಳಂತಹ ಎಲ್ಲಾ ಅಂಶಗಳನ್ನು ಪರಿಗಣಿಸಿ ದರ ಹೆಚ್ಚಿಸಲಾಗಿದೆ" ಎಂದು ಸಮರ್ಥನೆ ನೀಡಿದರು.
"ನಂದಿನಿ ಹಾಲಿನ ಮಾರಾಟ ದರವನ್ನು ಪ್ರಸ್ತುತ ರೂ. 3 ರಂತೆ ಪ್ರತಿ ಲೀಟರ್‌ಗೆ ಹೆಚ್ಚಳ ಮಾಡಿದ ನಂತರವು ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಸಹಕಾರಿ ಹಾಗೂ ಇತರೆ ಹಾಲಿನ ಬ್ಯಾಂಡ್‍ಗಳ ಮಾರಾಟ ದರಕ್ಕೆ ಹೋಲಿಸಿದಾಗ ಸಹ ನಂದಿನಿ ಹಾಲಿನ ಮಾರಾಟ ದರ ಕಡಿಮೆ ಇರುವುದನ್ನು ಗಮನಿಸಬಹುದು" ಎಂದರು.
"ಕರ್ನಾಟಕದಲ್ಲಿ 42 ರೂ., ಕೇರಳ 50 ರೂ., ದೆಹಲಿ 54 ರೂ., ಗುಜರಾತ್ 54 ರೂ., ಮಹಾರಾಷ್ಟ್ರ 54 ರೂ., ಆಂಧ್ರಪ್ರದೇಶದಲ್ಲಿ 56 ರೂ. ಇರುತ್ತದೆ. ಕೆಎಂಎಫ್ ಮಾರುಕಟ್ಟೆಯಲ್ಲಿರುವ ಇತರೆ ಎಲ್ಲಾ ಹಾಲಿನ ಮಾರಾಟ ದರಕ್ಕಿಂತ ಅತಿ ಕಡಿಮೆ ದರದಲ್ಲಿ ಹಾಲನ್ನು ಒದಗಿಸುತ್ತಿರುವುದನ್ನು ಗ್ರಾಹಕರು ಗಮನಿಸಿ ಈ ಹಿಂದಿನಂತೆಯೇ ಸಹಕರಿಸಬೇಕು" ಎಂದು ಮನವಿ ಮಾಡಿದರು.
"2022ನೇ ಸಾಲಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಮೇವಿನ ಲಭ್ಯತೆ ತೊಂದರೆಯಿಂದ, ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಂಡುಬಂದಿರುವುದರಿಂದ, ಹಾಲಿನ ಮಾರಾಟ ದರ ಹೆಚ್ಚಳದ ವಿಳಂಬ ಹಾಗೂ ಪಶು ಆಹಾರ ಬೆಲೆ ಹೆಚ್ಚಳದಿಂದಾಗಿ ಪಶುಸಾಕಾಣಿಕೆ ವೆಚ್ಚ ಹೆಚ್ಚಾಗಿ ಹೈನುಗಾರಿಕೆ ಲಾಭದಾಯಕ ವೃತ್ತಿಯಲ್ಲವೆಂದು ರಾಜ್ಯವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಹೈನುಗಾರರು ಹೈನುಗಾರಿಕೆಯಿಂದ ವಿಮುಖರಾಗಿ, ಹಾಲು ಸರಬರಾಜನ್ನು ನಿಲ್ಲಿಸಿದ್ದಾರೆ" ಎಂದು ಕೆಎಂಎಫ್ ಅಧ್ಯಕ್ಷರು ವಿವರಿಸಿದರು.
"ಇದರಿಂದಾಗಿ ಕಳೆದ ಸಾಲಿಗೆ ಹೋಲಿಸಿದರೆ ಹಾಲಿನ ಶೇಖರಣೆಯು ದಿನವಹಿ 94 ಲಕ್ಷ ಲೀಟರ್‌ಗಳಿಂದ 84 ಲಕ್ಷ ಲೀಟರ್‌ಗಳಿಗೆ ಇಳಿಕೆಯಾಗಿದ್ದು, ದಿನವಹಿ ಅಂದಾಜು 10 ಲಕ್ಷ ಲೀಟರ್ ಕಡಿಮೆಯಾಗಿರುತ್ತದೆ" ಎಂದು ಅಧ್ಯಕ್ಷರು ವಿವರಣೆ ನೀಡಿದರು.
ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಪ್ರತಿ ಲೀಟರ್ ನಂದಿನಿ ಹಾಲಿನ ದರವನ್ನು 5 ರೂ. ಏರಿಕೆ ಮಾಡಬೇಕು ಎಂದು ಮನವಿ ಮಾಡಿತ್ತು. ಆದರೆ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿ ಲೀಟರ್‌ಗೆ ದರವನ್ನು 3 ರೂ. ಏರಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ.












Click it and Unblock the Notifications