ಕಾಂಗ್ರೆಸ್ ನಾಯಕರ ವಿರುದ್ಧವೇ ಶಾಸಕ ಆನಂದ್ ಸಿಂಗ್ ದೂರು
Recommended Video
ಹೊಸಪೇಟೆ, ಜುಲೈ 23: ತಮ್ಮ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಪ್ರತಿ ದೂರು ನೀಡಿದ್ದಾರೆ.
'ಶಾಸಕ ಆನಂದ್ ಸಿಂಗ್ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ' ಜಿಲ್ಲಾ ಕಾಂಗ್ರೆಸ್ ನಾಯಕರು ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದೂರು ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಆನಂದ್ ಸಿಂಗ್ ಅವರು ಶನಿವಾರ ದೂರು ನೀಡಿದ್ದಾರೆ. 'ನಾನು ಕಾಣೆಯಾಗಿಲ್ಲ. ನನ್ನ ಗೌರವ, ಘನತೆ ಹಾಳು ಮಾಡುವ ಉದ್ದೇಶದಿಂದ ದೂರು ನೀಡಲಾಗಿದೆ' ಎಂದು ಅವರು ಆರೋಪಿಸಿದ್ದಾರೆ.

'ಜುಲೈ 13ರವರೆಗೂ ನಾನು ಹೊಸಪೇಟೆಯಲ್ಲಿಯೇ ಇದ್ದೆ. ಅಂದು ಸಂಜೆ ನನ್ನ ತಂದೆಯವರಾದ ಬಿ.ಎಸ್. ಪೃಧ್ವಿರಾಜ್ ಸಿಂಗ್ ಜಾರಿ ಬಿದ್ದಿದ್ದರ ಕಾರಣ ಹೊಸಪೇಟೆಯ ಡಾ.ಬಿ.ಆರ್. ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅವರ ಸಲಹೆ ಮೇರೆಗೆ ಜುಲೈ 15ರಂದು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಜುಲೈ 17ರಂದು ಅವರನ್ನು ಬಿಡುಗಡೆ ಮಾಡಲಾಗಿತ್ತು. 18 ಮತ್ತು 19ರಂದು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇನೆ' ಎಂದು ಬರೆದಿದ್ದಾರೆ.
'ಮಾಧ್ಯಮಗಳಲ್ಲಿ ಪುನಃ ಕಾಣೆಯ ಸುದ್ದಿ ಬರುತ್ತಿರುವುದನ್ನು ಗಮನಿಸಿ ತಂದೆಯವರ ಆರೋಗ್ಯ ತಪಾಸಣೆ ಬಾಕಿ ಇದ್ದರೂ ಅವರನ್ನು ಬೆಂಗಳೂರಿನ ಮನೆಯಲ್ಲಿಯೇ ಬಿಟ್ಟು ತಮ್ಮ ಠಾಣೆಗೆ ಹಾಜರಾಗಿ ಎಲ್ಲ ದಾಖಲೆಗಳನ್ನು ಸಲ್ಲಿಸುತ್ತಿದ್ದೇನೆ' ಎಂದು ವಿವರಿಸಿದ್ದಾರೆ.
ಜತೆಗೆ ತಮ್ಮ ಗೌರವಕ್ಕೆ ಹಾನಿಯುಂಟು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅವರು ದೂರಿನಲ್ಲಿ ಕೋರಿದ್ದಾರೆ.












Click it and Unblock the Notifications