ನಾನು ಉತ್ತರ ಕರ್ನಾಟಕದ ಗಂಡು ಆಗಿದ್ದರಿಂದ ಮೀಸಲಾತಿಯ ಜೇನುಗೂಡಿಗೆ ಕೈ ಹಾಕಿದ್ದು: "ಕೈ"ಗೆ ಸಿಎಂ ತಿರುಗೇಟು
ಬಳ್ಳಾರಿ, ಏಪ್ರಿಲ್, 30: ಜನಬಲ ಮತ್ತು ಹಣಬಲದ ನಡುವೆ ಚುನಾವಣೆ ನಡೆಯುತ್ತಿದೆ, ಯಾವಾಗಲೂ ಜನಬಲವೇ ಗೆದ್ದಿದೆ. ಈ ಬಾರಿ ಜನ ಬಲವೇ ಗೆಲುವು ಸಾಧಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಳ್ಳಾರಿಯಲ್ಲಿ ಹೇಳಿದರು. ಅಲ್ಲದೆ ಕಾಂಗ್ರೆಸ್‌ನವರು ನನಗೆ ಮೀಸಲಾತಿ ಜೇನುಗೂಡಿಗಗೆ ಕೈಹಾಕಬೇಡಿ ಎಂದು ಹೇಳಿದ್ದರು. ಆದರೆ ನಾನು ನಾನು ಉತ್ತರ ಕರ್ನಾಟಕದ ಗಂಡು ಆಗಿದ್ದರಿಂದ ನಾನು ಕೈ ಹಾಕಿದ್ದು ಎಂದು ತಿರುಗೇಟು ನೀಡಿದರು.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸಿದರು. ಸಿಎಂ ರೋಡ್ ಶೋ ನಗರದ ಗಡಗಿ ಚೆನ್ನಪ್ಪ ಸರ್ಕಲ್ ಮೂಲಕ ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ತೇರು ಬೀದಿ ತಲುಪಿತು. ತಮಟೆ, ಡೊಳ್ಳು ಮೊದಲಾದ ವಾದ್ಯಗಳೊಂದಿಗೆ ಬಿಜೆಪಿ ಬಾವುಟಗಳನ್ನು ಬೀಸುತ್ತ, ಪಕ್ಷದ ಪರ, ಅಭ್ಯರ್ಥಿ ಪರ ಜಯ ಘೋಷಣೆಗಳನ್ನು ಕೂಗುತ್ತ ಸಾಗಿದರು. ಬಳಿಕ ಸಿಎಂ ಸಾರ್ವಜನಿಕರನ್ನುದ್ಧೇಶಿಸಿ ಮಾತನಾಡಿದರು.

ಮೀಸಲಾತಿಯ ಜೇನುಗೂಡಿಗೆ ಕೈ ಹಾಕಬೇಡಿ ಎಂದು ಕಾಂಗ್ರೆಸ್ ಹೇಳಿತ್ತು. ನಾನು ಉತ್ತರ ಕರ್ನಾಟಕದ ಗಂಡು ಆಗಿದ್ದರಿಂದ ನಾನು ಕೈ ಹಾಕಿದ್ದು, ಕಾಂಗ್ರೆಸ್ ತಮ್ಮ ಸರ್ಕಾರ ಬಂದರೆ ಮೀಸಲಾತಿ ಹಿಂದಕ್ಕೆ ಪಡೆಯುತ್ತೇವೆ ಎನ್ನುತ್ತಾರೆ. ಇದಕ್ಕೆ ಜನರು ಬುದ್ಧಿ ಕಲಿಸುತ್ತಾರೆ. ಸಾಮಾಜಿಕ ನ್ಯಾಯ ಮುಟ್ಟಿದರೆ ಜನರು ಸಹಿಸುವುದಿಲ್ಲ. ಅಲ್ಲದೆ ಬಳ್ಳಾರಿ ಹುಲಿ ಎಂದು ಸೋಮಶೇಖರ ರೆಡ್ಡಿ ಅವರನ್ನು ಸಿಎಂ ಬೊಮ್ಮಾಯಿ ಅವರು ಬಣ್ಣಿಸಿದರು.
ಇನ್ನು ಜೀನ್ಸ್ ಕ್ಯಾಪಿಟಲ್ ಮಾಡುತ್ತೇನೆ ಎಂದು ರಾಹುಲ್ ಗಾಂಧಿ ಅವರು ಘೋಷಣೆ ಮಾಡಿದ್ದಾರೆ. ಅವರ ತಾಯಿ ಗೆದ್ದು ಘೋಷಣೆ ಮಾಡಿದ 3 ಸಾವಿರ ಕೋಟಿ ರೂಪಾಯಿ ಏನಾಯಿತು? ಈಗಾಗಲೇ ಜೀನ್ಸ್ ಅಪರೆಲ್ ಪಾರ್ಕ್ ಮಾಡಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದೇವೆ. ನಿಮ್ಮ ಆಶ್ವಾಸನೆ ಅಗತ್ಯವಿಲ್ಲ. ಸರ್ಕಾರ ಬಳ್ಳಾರಿ ಅಭಿವೃದ್ಧಿಗೆ ಕಂಕಣ ಬದ್ಧವಾಗಿದೆ. ಬಳ್ಳಾರಿ ನಗರದಲ್ಲಿ 16 ಸಾವಿರ ಜನರಿಗೆ ಪಟ್ಟ ಕೊಟ್ಟಿದೆ ಎಂದರು.
ಈ ಚುನಾವಣೆಯಲ್ಲಿ ಕೆಲವರು ಗೆಲ್ಲಬೇಕೆಂದು ಸ್ಪರ್ಧಿಸಿದರೆ ಇನ್ನು ಕೆಲವರು ಸೋಲಿಸಬೇಕೆಂದು ಸ್ಪರ್ಧಿಸಿದ್ದಾರೆ. ಗೆಲ್ಲುವವರಿಗೆ ಜನರ ಆಶೀರ್ವಾದ ಇರಲಿ. ಸೋಮಶೇಖರ ರೆಡ್ಡಿ ಅವರಿಗೆ ಹನುಮಂತನ ಆಶೀರ್ವಾದವಿದೆ, ಅವರನ್ನು ಸೋಲಿಸಲು ಯಾರಿಂದಲೂ ಆಗಲ್ಲ ಎಂದು ಭವಿಷ್ಯ ನುಡಿದರು.
ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಹೇಳಿದ ಬಸವರಾಜ ಬೊಮ್ಮಾಯಿ ಅವರು, ಪಕ್ಷದ ಅಭಿವೃದ್ಧಿ ಕೆಲಸಗಳನ್ನು ವಿವರಿಸಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿಗೆ ಆಶೀರ್ವದಿಸಿ. ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಅಭ್ಯರ್ಥಿ ಜಿ.ಸೋಮಶೇಖರರೆಡ್ಡಿ, ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮುರಾರಿಗೌಡ, ವಿರೂಪಾಕ್ಷಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಬಹಿರಂಗ ಸಭೆ ರದ್ದು
ಪೂರ್ವನಿಗದಿಯಂತೆ ನಗರದ ಮೋತಿ ವೃತ್ತದಲ್ಲಿ ಬಿಜೆಪಿ ಬಹಿರಂಗ ಸಭೆ ನಡೆಯಬೇಕಿತ್ತು. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಸೋಮಶೇಖರರೆಡ್ಡಿ ಅವರ ಪರ ಸಿಎಂ ಮೋತಿ ವೃತ್ತದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮತದಾರರನ್ನುದ್ಧೇಶಿಸಿ ಮಾತನಾಡಬೇಕಿತ್ತು. ಆದರೆ ಏಕಾಏಕಿ ಬಹಿರಂಗ ಸಭೆಯನ್ನು ರದ್ದುಗೊಳಿಸಿದ ಸಿಎಂ ಬಸವರಾಜ ಬೊಮ್ಮಾಯಿ ರೋಡ್ ಶೋ ಮುಗಿಸಿ ಹುಬ್ಬಳ್ಳಿಗೆ ತೆರಳಿದರು.
ಬಹಿರಂಗ ಸಭೆಯನ್ನು ಏಕಾಏಕಿ ರದ್ದು ಮಾಡಿದ್ದು ಏಕೆ? ಎಂದು ತಿಳಿದುಬಂದಿಲ್ಲ. ಇನ್ನು ಶನಿವಾರ ಸಂಜೆ ಏರ್ಪಡಿಸಿದ್ದ ರೋಡ್ ಶೋ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲೂ ನಡೆಯಿತು. ಈ ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಅವರು ಬೇರೆ ಕಡೆ ಸ್ಟಾರ್ ಪ್ರಚಾರಕರಾಗಿ ಭಾಗಿಯಾಗಿದ್ದರಿಂದ ಅವರದೇ ಕ್ಷೇತ್ರದಲ್ಲಿ ಭಾಗಿಯಾಗಲಿಲ್ಲ. ಆದರೆ ತಮ್ಮದೇ ಕ್ಷೇತ್ರದಲ್ಲಿ ನಡೆದ ರೋಡ್ ಶೋನಲ್ಲಿ ಶ್ರೀರಾಮುಲು ಅವರು ಗೈರಾದದ್ದು, ಹಲವು ಚರ್ಚೆಗಳಿಗೆ ಕಾರಣವಾಯಿತು.












Click it and Unblock the Notifications