ಬಳ್ಳಾರಿ: ಗಣಿ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ, ಸಚಿವ ಶ್ರೀ ರಾಮುಲು ಹೇಳಿದ್ದೇನು?
ಬಳ್ಳಾರಿ, ಜನವರಿ, 15: ಪ್ರಭಾವಿ ಸಚಿವರ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲ ಗಣಿ ಉದ್ಯಮಿಗಳ ಮನೆ ಮೇಲೆ (ಜನವರಿ 14) ಐಟಿ ದಾಳಿ ನಡೆಸಿದೆ. ಹಾಗೂ ಅವರ ಸ್ಪಾಂಜ್ ಉಕ್ಕಿನ ಕಾರ್ಖಾನೆಗಳ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಆಪ್ತನ ಕಚೇರಿ, ನಿವಾಸದ ಮೇಲೆ ಐಟಿ ದಾಳಿ ವಿಚಾರವಾಗಿ ಬಳ್ಳಾರಿಯಲ್ಲಿ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ತಮ್ಮ ಪಾಲುದಾರಿಕೆಗೆ ಸೇರಿದ್ದೆನ್ನಲಾದ ಸ್ಪಾಂಜ್ ಉಕ್ಕಿನ ಕಾರ್ಖಾನೆ ಮೇಲೆ ಐ.ಟಿ ದಾಳಿ ನಡೆದಿದೆ ಎಂಬ ಆರೋಪವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ತಳ್ಳಿಹಾಕಿದ್ದಾರೆ. "ನಾನು ಯಾವ ಕಾರ್ಖಾನೆಯಲ್ಲೂ ಪಾಲುದಾರಿಕೆ ಹೊಂದಿಲ್ಲ. ಗಣಿಗಾರಿಕೆ ನಡೆಯುವ ಸಂದರ್ಭದಲ್ಲಿ ಕಾರ್ಖಾನೆ ಮಾಡಲಿಲ್ಲ. ಐಟಿ ದಾಳಿಗಳು ನಡೆಯುವುದು ಸಾಮಾನ್ಯವಾಗಿದೆ. ಐಟಿ ದಾಳಿಯ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ಯಾರ ಮೇಲೆ ದಾಳಿ ನಡೆದರೂ ಕಾನೂನು ತನ್ನದೇ ಕ್ರಮ ಕೈಗೊಳ್ಳಲಿದೆ," ಎಂದು ಹೇಳಿದರು.
ಎಲ್ಲೆಲ್ಲಿ ಐಟಿ ದಾಳಿ?, ಇಲ್ಲಿದೆ ವಿವರ
ಬೆಂಗಳೂರು, ಬಳ್ಳಾರಿ ಹಾಗೂ ಕೊಪ್ಪಳ ಸೇರಿದಂತೆ ಹಲವು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದೊಡ್ಡ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ. ಎರಡು ದಿನಗಳಿಂದ ಸತತ ದಾಖಲೆ ಪರಿಶೀಲನೆ ನಡೆಯುತ್ತಿದೆ. ಸ್ಪಾಂಜ್ ಉಕ್ಕಿನ ಕಾರ್ಖಾನೆ ನಡೆಸುತ್ತಿರುವ ಗಣಿ ಉದ್ಯಮಿ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಹಾಗೂ ಅವರ ಹತ್ತಿರದ ಸಂಬಂಧಿ ಜೊತೆ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿದೆ. ಬೆಂಗಳೂರು, ಚೆನ್ನೈನ ಹದಿನೈದು ಅಧಿಕಾರಿಗಳು ಬಳ್ಳಾರಿಯ ವಿದ್ಯಾನಗರದ ರಾಗಾಸ್ ಪೋರ್ಟ್ ಅಪಾರ್ಟ್ಮೆಂಟ್ ಫ್ಲಾಟ್ ನಂಬರ್ 310 ಮತ್ತು 510ರಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಐಟಿ ಅಧಿಕಾರಿಗಳಿಂದ ಪರಿಶೀಲನೆ
ಪ್ರಭಾವಿ ಸಚಿವರು ಹಾಗೂ ಕೈಗಾರಿಕಾ ಉದ್ಯಮಿ ಸೇರಿ ಖರೀದಿಸಿರುವ ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿ ಮೂಲದ ಬಗ್ಗೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಖಲೆ ಪರಿಶೀಲನೆ ವೇಳೆ ಐಟಿ ಅಧಿಕಾರಿಗಳ ಕೈಗೆ ಮಹತ್ವದ ದಾಖಲೆಗಳು ಲಭ್ಯವಾಗಿವೆ ಎಂದು ಹೇಳಲಾಗಿದೆ. ಫ್ಯಾಕ್ಟರಿ ಖರೀದಿಯ ಹಣದ ಮೂಲವನ್ನು ಅಧಿಕಾರಿಗಳು ಕೆದಕುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇದು ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿ ಆಗಿದ್ದರಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಇನ್ನು ಕೊಪ್ಪಳದ ಸಿಮ್ಲಾ ಡಾಬ ಬಳಿಯ ವಾಷಿಂಗ್ ಪ್ಲಾಂಟ್, ಬಳ್ಳಾರಿಯ ವೆಂಕಟೇಶ್ವರ, ಶ್ರೀಹರಿ ಮತ್ತು ಪಿಜಿಎಂ ಪ್ಲಾಂಟ್‌ಗೆ ಸೇರಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕೈಗಾರಿಕೆಗಳು ತೆರಿಗೆ ವಂಚನೆ ಮಾಡಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಹೇಳಲಾಗಿದೆ.












Click it and Unblock the Notifications