ಬಳ್ಳಾರಿಯಲ್ಲಿ ಮಗಳ ಕಾಲುಕಟ್ಟಿ ಕಾಲುವೆಗೆ ಎಸೆದ ತಂದೆ
ಬಳ್ಳಾರಿ, ಫೆಬ್ರವರಿ 17: ಕುಡಿದ ಅಮಲಿನಲ್ಲಿದ್ದ ತಂದೆಯೊಬ್ಬ ತನ್ನ ಮಗಳ ಕೈ ಕಾಲು ಕಟ್ಟಿ ಕಾಲುವೆಯಲ್ಲಿ ಎಸೆದು ಕೊಂದ ಘಟನೆಯೊಂದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.
ಬಳ್ಳಾರಿ ನಗರ ವ್ಯಾಪ್ತಿಯ ಬಂಡಿಹಟ್ಟಿ ಪ್ರದೇಶದ ರಾಮುಲು ದೇಗುಲದ ಬಳಿಯ ನಿವಾಸಿ ಆಟೋ ಸೂರಿ ಎಂಬುವವರೇ ಮಗಳನ್ನು ಕೊಲೆ ಮಾಡಿದ ವ್ಯಕ್ತಿ. ಈತ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪಲ್ಲವಿ (20) ಎಂಬ ಯುವತಿಯನ್ನು ಎಚ್ ಎಲ್ ಎಲ್ ಸಿ ಕಾಲುವೆಯಲ್ಲಿ ನೀರು ಪಾಲಾದವಳೆಂದು ಗುರುತಿಸಲಾಗಿದೆ. ಮಗಳನ್ನು ಪುಸಲಾಯಿಸಿ ಕಾಲುವೆ ಬಳಿ ಕರೆ ತಂದ ತಂದೆ ಬಳಿಕ, ಕಾಲು ಕಟ್ಟಿ ಹಾಡು ಹಗಲಲ್ಲೇ ಕಾಲುವೆಗೆ ನೂಕಿದ್ದಾನೆ. ಆಕೆಯನ್ನು ಕಾಪಾಡಲು ಮುಂದಾದ ಯುವಕನಿಗೆ ಬೈದು ರಕ್ಷಣೆ ಮಾಡಬೇಡ ಎಂದು ಕೋಪಗೊಂಡಿದ್ದಾನೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಗೃಹ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಪಲ್ಲವಿ ಕೆಲಸ ಮಾಡುತ್ತಿದ್ದರು. ಯಾವ ಉದ್ದೇಶಕ್ಕೆ ಪಲ್ಲವಿ ಕೊಲೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಈಜುಗಾರರ ಜೊತೆ ಯುವತಿಯ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ. ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದೆ. ಮೊನ್ನೆಯಷ್ಟೆ ಗೋಡೆಹಾಳು ಗ್ರಾಮದಲ್ಲಿ ವಿವಾಹಿತೆಯೊಬ್ಬಳ ಕತ್ತಿಗೆ ದುಪ್ಪಟ್ಟಿನಿಂದ ಬಿಗಿದು ಕೊಲೆಗೈದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಕೊಲೆ ನಡೆದಿದೆ.












Click it and Unblock the Notifications