ಕಂದಾಯ ಇಲಾಖೆ ಡಿಜಿಟಲೀಕರಣ; ಬಳ್ಳಾರಿ ರಾಜ್ಯಕ್ಕೆ ಪ್ರಥಮ
ಬಳ್ಳಾರಿ, ಡಿಸೆಂಬರ್ 08; ಕರ್ನಾಟಕದ ಕಂದಾಯ ಇಲಾಖೆಯನ್ನು ಡಿಜಿಟಲೀಕರಣ ಮಾಡುವ ಕಾರ್ಯ ಚಾಲ್ತಿಯಲ್ಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಕುರಿತು ವಿಶೇಷ ಗಮನಹರಿಸಿದ್ದಾರೆ. ಅಧಿಕಾರಿಗಳ ಜೊತೆ ಸರಣಿ ಸಭೆಗಳನ್ನು ನಡೆಸುವ ಮೂಲಕ ಸೂಚನೆಗಳನ್ನು ನೀಡುತ್ತಿದ್ದಾರೆ.
"ರಾಜ್ಯದಲ್ಲಿಯೇ ಜಿಲ್ಲೆಯ ಕಂದಾಯ ಇಲಾಖೆ ದಾಖಲೆಗಳನ್ನು ಡಿಜಿಟಲೀಕರಣ ಮಾಡುವಲ್ಲಿ ಬಳ್ಳಾರಿ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ" ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಜಿಲ್ಲೆಯಲ್ಲಿ ದಾಖಲೆಗಳ ಡಿಜಿಟಲೀಕರಣ ಹೇಗೆ ನಡೆಯುತ್ತಿದೆ? ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.

"ಕಂದಾಯ ಸಚಿವರ ಇಚ್ಛಾಶಕ್ತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಅಭಿಲೇಖಾಲಯದಲ್ಲಿ ಹಳೇ ಕಡತಗಳ ಪಟ್ಟಿ ಮತ್ತು ಸೂಚ್ಯಂಕ ಕಾರ್ಯ ಕೈಗೆತ್ತಿಕೊಂಡಿದ್ದು, ಸರ್ಕಾರದ ವೆಬ್‍ಸೈಟ್‍ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲೀಕರಣ ಮಾಡಲಾಗುತ್ತಿದೆ. ಈವರೆಗೆ ಒಟ್ಟು 146063 ಕಡತಗಳ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು
* ಜಿಲ್ಲೆಯಲ್ಲಿ ಒಟ್ಟು 73 ಹೊಸ ಕಂದಾಯ ಗ್ರಾಮಗಳನ್ನಾಗಿ ಪರಿರ್ವತಿಸಲು ಗುರುತಿಸಲಾಗಿದ್ದು, ಈ ಪೈಕಿ 6 ತಿಂಗಳ ಅವಧಿಯಲ್ಲಿ 14 ಪ್ರಾಥಮಿಕ ಅಧಿಸೂಚನೆ ಮತ್ತು 07 ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
* ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಒಟ್ಟು 114 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ ಹಾಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.
* ಜಿಲ್ಲಾಧಿಕಾರಿಗಳ ಎಸ್.ಡಿ.ಆರ್.ಎಫ್ ಪಿ.ಡಿ ಖಾತೆಯಲ್ಲಿ ರೂ. 37 ಕೋಟಿ ಅನುದಾನ ಲಭ್ಯವಿದ್ದು, ಅನುದಾನದ ಕೊರತೆ ಇರುವುದಿಲ್ಲ. ತಾಲ್ಲೂಕು ತಹಶೀಲ್ದಾರರ ಎಸ್.ಡಿ.ಆರ್.ಎಫ್ ಖಾತೆಯಲ್ಲಿ ಅನುದಾನ ಬರ ನಿರ್ವಹಣೆಗೆ ಲಭ್ಯವಿದ್ದು, ತುರ್ತು ಕಾರ್ಯಗಳಾದ ಕುಡಿಯುವ ನೀರಿನ ಸಮಸ್ಯೆ ಮತ್ತು ಮೇವಿನ ಸಮಸ್ಯೆಗಳಿಗೆ ಪರಿಸ್ಥಿತಿ ಅನುಗುಣವಾಗಿ ಬಳಸಿಕೊಳ್ಳಲಾಗುತ್ತದೆ.
* ಪ್ರಸ್ತುತ 247132 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಮುಂದಿನ 25 ವಾರಗಳಿಗೆ ಸಾಕಾಗುತ್ತದೆ. ಮೇವಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಅಂತರ್ ರಾಜ್ಯ ಮೇವು ಸಾಗಾಣಿಕೆಯನ್ನು ನಿರ್ಭಂದಿಸಲಾಗಿದೆ. ಬಳ್ಳಾರಿ ಮತ್ತು ಸಿರುಗುಪ್ಪದಲ್ಲಿ ಮೇವಿನ ಚೆಕ್‍ಪೋಸ್ಟ್‌ಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ.
* ಜಿಲ್ಲೆಯಲ್ಲಿ ನೋಟೀಸ್ ಇಲ್ಲದೆ ಇರುವ ಪ್ರಕರಣದಲ್ಲಿ 30350 ಪ್ರಕರಣಗಳು ಒಂದು ದಿನದಲ್ಲಿ ವಿಲೇಗೊಳಿಸಲಾಗಿದೆ. ನೋಂದಾಯಿತ ಖಾತ ಬದಲಾವಣೆ ಪ್ರಕರಣಗಳು (ತಿಳುವಳಿಕೆ ಚೀಟಿ) ನೋಟೀಸ್ ನೀಡಿ ಸರ್ಕಾರ ನಿಗದಿಪಡಿಸಿದ 7 ದಿನ ಕಾಲಮಿತಿ ಒಳಗೆ 7962 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ.
* ಆರ್.ಟಿ.ಸಿ ಯಲ್ಲಿ 19000 ಪ್ರಕರಣಗಳಿದ್ದು, ಈ ಪೈಕಿ 7518 ವಿಲೇಗೊಳಿಸಲಾಗಿದೆ. ತಹಶೀಲ್ದಾರ್ ಹಂತದಲ್ಲಿ ಕಂದಾಯ ಪ್ರಕರಣಗಳು 1405 ವಿಲೇಗೊಳಿಸಲಾಗಿದೆ. ಒಂದು ವರ್ಷ ಮೇಲ್ಪಟ್ಟು 152 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ಸಹಾಯಕ ಆಯುಕ್ತರ ಹಂತದಲ್ಲಿ ಕಂದಾಯ ಪ್ರಕರಣಗಳು 341 ವಿಲೇಗೊಳಿಸಲಾಗಿದೆ.
* ಕರ್ನಾಟಕ ಇನಾಂ ರದತಿ ಕಾಯ್ದೆಯಡಿಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ರೀ-ಗ್ರಾಂಟ್‍ಗಾಗಿ ಒಟ್ಟು 13102 ಅರ್ಜಿಗಳು ಸ್ವೀಕೃತಿಯಾಗಿದ್ದು, ಇವುಗಳ ಪೈಕಿ 25 ಅರ್ಜಿಗಳು ತಿರಸ್ಕೃತ ಮಾಡಿ 5645 ಅರ್ಜಿಗಳು ರೀ-ಗ್ರಾಂಟ್ ಮಾಡಿ ಪಟ್ಟಾ ನೀಡಲಾಗಿದೆ. ಇನ್ನು ವಿಚಾರಣೆಗೆ 7432 ಬಾಕಿ ಉಳಿದಿರುತ್ತದೆ.
* ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ 2024ರ ಪ್ರಕ್ರಿಯೆ ನಡೆಯುತ್ತಿದ್ದು, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 9 ಕೊನೆಯ ದಿನವಾಗಿದೆ. ಜಿಲ್ಲೆಯ 18 ವರ್ಷ ತುಂಬಿದ ಎಲ್ಲಾ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಲು ಮತ್ತು ತಿದ್ದುಪಡಿಗಾಗಿ ತಾಲ್ಲೂಕು ಕಚೇರಿಗೆ ಅಥವಾ ಸಂಬಂಧಪಟ್ಟ ಬಿಎಲ್‍ಓಗಳನ್ನು ಭೇಟಿ ಮಾಡಬಹುದು.












Click it and Unblock the Notifications