ಬಳ್ಳಾರಿ; ಮತಗಟ್ಟೆಯಲ್ಲಿ ಹೆರಿಗೆ ಆಗಿಲ್ಲ ಡಿಎಚ್‌ಓ ಸ್ಪಷ್ಟನೆ
ಬಳ್ಳಾರಿ, ಮೇ 12; ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಮೇ 10ರ ಬುಧವಾರ ನಡೆದಿತ್ತು. ಬಳ್ಳಾರಿಯಲ್ಲಿ ಮತದಾನ ಮಾಡಿದ ಬಳಿಕ ಎಂ. ಮಣಿಲಾ ಎಂಬುವವರು ಮಗುವಿಗೆ ಜನ್ಮ ನೀಡಿದ್ದರು. ಮತಗಟ್ಟೆಯಲ್ಲಿಯೇ ಹರಿಗೆ ಆಗಿದೆ ಎಂಬ ಸುದ್ದಿ ಹಬ್ಬಿತ್ತು. ಡಿಎಚ್‌ಓ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್. ಎಲ್. ಜನಾರ್ಧನ ಈ ಕುರಿತು ಮಾತನಾಡಿದ್ದಾರೆ. "ಕುರುಗೋಡು ತಾಲೂಕಿನ ಕೊರ್ಲಗುಂದಿ ಗ್ರಾಮದ ಎಂ. ಮಣಿಲಾ ಅವರ ಹೆರಿಗೆಯು ಮತದಾನ ಕೇಂದ್ರದಲ್ಲಿ ಆಗಿಲ್ಲ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಬೆಳಗ್ಗೆ 10.15ಕ್ಕೆ ಮಗುವಿಗೆ ಜನ್ಮ ನೀಡಿದ್ದಾರೆ" ಎಂದು ಹೇಳಿದ್ದಾರೆ.

ಎಂ. ಮಣಿಲಾ ಅವರ ಹೇಳಿಕೆಯಂತೆಯೇ ಡಿಎಚ್‌ಓ ಈ ಕುರಿತು ಮಾಹಿತಿ ನೀಡಿದ್ದಾರೆ. ಬುಧವಾರ ಬೆಳಗ್ಗೆ 8.45ಕ್ಕೆ ಮತದಾನ ಕೇಂದ್ರಕ್ಕೆ ಆಗಮಿಸಿದ್ದ ಎಂ. ಮಣಿಲಾ 9ಕ್ಕೆ ಮತದಾನ ಮಾಡಿದ್ದಾರೆ. ಬಳಿಕ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮತದಾನ ಕೇಂದ್ರದ ಹತ್ತಿರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ.
ತಾಯಿ, ಮಗು ಆರೋಗ್ಯವಾಗಿದ್ದಾರೆ; ಎಂ. ಮಣಿಲಾ ಬೆಳಗ್ಗೆ 9.30ಕ್ಕೆ ಆಗಮಿಸಿದಾಗ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನೌಸೀನ್ ಮರಿಯಂ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮತದಾನ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸಾ ತಂಡದ ಕಾರ್ಯ ಪರಿಶೀಲನೆಗೆ ತೆರಳಿದ್ದರು. ಆ ಸಮಯದಲ್ಲಿ ಕರ್ತವ್ಯದ ಮೇಲಿದ್ದ ಶೂಶ್ರೂಷಣಾಧಿಕಾರಿ ಸುನೀತಾ ತಕ್ಷಣ ಗರ್ಭಿಣಿಯನ್ನು ಹೆರಿಗೆಗಾಗಿ ದಾಖಲು ಮಾಡಿಕೊಂಡಿದ್ದಾರೆ.

ವೈದ್ಯಾಧಿಕಾರಿ ಡಾ. ನೌಸೀನ್ ಮರಿಯಂಗೆ ಮಾಹಿತಿ ನೀಡಿ ಅವರ ಮಾರ್ಗದರ್ಶನದಂತೆ ಹೆರಿಗೆ ಮಾಡಿಸಿದ್ದಾರೆ. ಬೆಳಗ್ಗೆ 10.15ಕ್ಕೆ ಹೆರಿಗೆ ಆಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು 3.3 ಕೆಜಿ ಇದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಹೆರಿಗೆ ನಂತರ ತಕ್ಷಣ ಮಗುವಿಗೆ ಎದೆ ಹಾಲು ಉಣಿಸಲಾಗಿದ್ದು ಅಗತ್ಯ ವೈದ್ಯಕೀಯ ಉಪಚಾರ ಕೈಗೊಳ್ಳಲಾಗಿದೆ.
ಎಂ. ಮಣಿಲಾಗೆ ಇದು 3ನೇ ಹೆರಿಗೆಯಾಗಿದ್ದು, ಮೊದಲ ಎರಡು ಮಕ್ಕಳು ಸಹ ಗಂಡು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಎಂ. ಮಣಿಲಾ ಹೆರಿಗೆಯು ಕೊರ್ಲಗುಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಮತದಾನ ಕೇಂದ್ರದಲ್ಲಿ ಆಗಿಲ್ಲ ಎಂದು ಡಿಎಚ್‌ಒ ಡಾ. ಹೆಚ್. ಎಲ್. ಜನಾರ್ಧನ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಮತ ಎಣಿಕೆ; ಬಳ್ಳಾರಿ ಜಿಲ್ಲೆಯಲ್ಲಿ ಕಂಪ್ಲಿ, ಸಿರಗುಪ್ಪ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಸಂಡೂರು ಸೇರಿ ಒಟ್ಟು 5 ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲೆಯಲ್ಲಿ ಬುಧವಾರ ಶೇ 76.24 ರಷ್ಟು ಮತದಾನವಾಗಿದೆ. ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನವಾಗಿದ್ದು, ಕಣದಲ್ಲಿದ್ದ 56 ಅಭ್ಯರ್ಥಿಗಳ ಭವಿಷ್ಯ ಮತಯಂತರ ಸೇರಿದೆ.
ಮೇ 13ರ ಶನಿವಾರ ಬೆಳಗ್ಗೆ 8 ಗಂಟೆಯಿಂದ ಚುನಾವಣೆಯ ಮತ ಎಣಿಕೆ ಕಾರ್ಯ ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರ ತಾಂತ್ರಿಕ ಇಂಜಿನಿಯರ್ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಮತಯಂತ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿರುವ ಭದ್ರತಾ ಕೊಠಡಿಯಲ್ಲಿ ಅಧಿಕಾರಿಗಳಿಂದ ಸೀಲ್ ಮಾಡಿ ಸುರಕ್ಷಿತವಾಗಿ ಇಡಲಾಗಿದೆ.
ಮತ ಎಣಿಕೆ ಕೇಂದ್ರ ಸುತ್ತಲೂ ಐಟಿಬಿಪಿ, ಡಿಎಆರ್, ಸಿವಿಲ್ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕಾ ಕೇಂದ್ರಕ್ಕೆ ಮೂರು ಸುತ್ತಿನ ಭದ್ರತೆ ಕಲ್ಪಿಸಲಾಗಿದೆ. ಮತಗಳ ಎಣಿಕೆಗಾಗಿ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿ ತರಬೇತಿ ನೀಡಲಾಗಿದೆ. ಮತ ಎಣಿಕೆ ಹಿನ್ನಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯರಾತ್ರಿ 12 ರವರೆಗೆ ಸಿಆರ್‌ಪಿಸಿ 1973 ರ ಕಲಂ 144 ಮತ್ತು 144 (ಎ) ರಡಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ-ಮುತ್ತ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದೂ ಈಗಾಗಲೇ ಜಿಲ್ಲಾ ದಂಡಾಧಿಕಾರಿ, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಘೋಷಣೆ ಮಾಡಿದ್ದಾರೆ.












Click it and Unblock the Notifications