Darshan Bail: ಶುಕ್ರವಾರ ದರ್ಶನ್ ಜಾಮೀನು ಅರ್ಜಿ ವಿಚಾರಣೆ; ಜೈಲಿನಿಂದ ಹೊರ ಬರುವ ವಿಶ್ವಾಸದಲ್ಲಿ 'ದಾಸ'
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್‌ರ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದ್ದು, ಜಾಮೀನು ಸಿಗುವ ವಿಚಾರ ಇರಲಿ, ನಾಳೆಯಾದರೂ ವಿಚಾರಣೆ ನಡೆಯುತ್ತಾ ಎನ್ನುವ ಟೆನ್ಷನ್ ದರ್ಶನ್ ಮತ್ತು ಅವರ ಅಭಿಮಾನಿಗಳದ್ದಾಗಿದೆ. ಈಗಾಗಲೇ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮೂರು ಬಾರಿ ಮುಂದೂಡಿಕೆಯಾಗಿದ್ದು, ಶುಕ್ರವಾರವಾದರೂ ವಿಚಾರಣೆ ನಡೆಯಲಿ ಎಂದು ದರ್ಶನ್ ಕುಟುಂಬಸ್ಥರು ಕಾಯುತ್ತಿದ್ದಾರೆ.
ಸೆಪ್ಟೆಂಬರ್ 21ರಂದು ಮೊದಲ ಬಾರಿ ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿದಾಗ ಸರಕಾರಿ ವಿಶೇಷ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಆಕ್ಷೇಪಣೆಗೆ ಸಮಯ ಕೇಳಿದ್ದರಿಂದ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿತ್ತು. ಆದರೆ ಸೆಪ್ಟೆಂಬರ್ 27ರಂದು ಅರ್ಜಿ ವಿಚಾರಣೆಗೆ ಬಂದಾಗ ದರ್ಶನ್ ಪರ ಹಿರಿಯ ವಕೀಲರು ಹಾಜರಿಲ್ಲ ಎಂದು ಕಾರಣ ಕೊಟ್ಟಿದ್ದ ಕಿರಿಯ ವಕೀಲ ಸುನಿಲ್ ಅರ್ಜಿ ವಿಚಾರಣೆಗೆ ಸಮಯ ಕೇಳಿದ್ದರು. ಬಳಿಕ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿತ್ತು.

ಸೆಪ್ಟೆಂಬರ್ 30ರಂದು ಮತ್ತೆ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ ವಕೀಲ ಸುನಿಲ್ ಮತ್ತೆ ಹಿರಿಯ ವಕೀಲರು ಹಾಜರಿಲ್ಲದ ಕಾರಣ, ಅರ್ಜಿ ವಿಚಾರಣೆ ಮುಂದೂಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಬಳಿಕ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ಕೊಟ್ಟಿದೆ.
ಶುಕ್ರವಾರವಾದರೂ ವಿಚಾರಣೆ ನಡೆಯುತ್ತಾ?
ಈಗಾಗಲೇ ಮೂರು ಬಾರಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದ್ದು, ದರ್ಶನ್‌ಗೆ ಟೆನ್ಷನ್ ಹೆಚ್ಚಿಸಿದೆ. ಗುರುವಾರ ಬೇರೆ ದರ್ಶನ್‌ಗೆ ಬೆನ್ನು ನೋವು ಹೆಚ್ಚಾದ ಕಾರಣ, ಜೈಲಿನಲ್ಲೇ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಸ್ಕ್ಯಾನಿಂಗ್ ಮಾಡಿಸಲು ದರ್ಶನ್ ನಿರಾಕರಿಸಿದ ಕಾರಣ 10 ದಿನಗಳವರೆಗೆ ಮಾತ್ರೆಯನ್ನು ನೀಡಲಾಗಿದೆ.
ದರ್ಶನ್‌ಗೆ ಬೆನ್ನು ನೋವು ತೀವ್ರವಾಗಿರುವ ಕಾರಣ ಬೇಗ ಜಾಮೀನು ಸಿಕ್ಕರೆ ಸಾಕು ಎಂದು ಕಾಯುತ್ತಿದ್ದಾರೆ. ಅಭಿಮಾನಿಗಳು ಕೂಡ ದರ್ಶನ್ ಅದಷ್ಟು ಬೇಗ ಹೊರಬಂದರೆ ಸಾಕು ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಈ ನಡುವೆ ದರ್ಶನ್‌ರನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಆಪ್ತರು ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಶುಕ್ರವಾರ ದರ್ಶನ್ ಪರ ಹಿರಿಯ ವಕೀಲರು ಕೋರ್ಟ್‌ಗೆ ಹಾಜರಾಗಿ, ದರ್ಶನ್‌ಗೆ ಜಾಮೀನು ಸಿಗಬೇಕು ಎಂದು ಬಲವಾಗಿ ವಾದಿಸುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ರ ಪಾತ್ರ ಇಲ್ಲ ಎಂದು ವಾದಿಸಲು ವಕೀಲರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಬಳ್ಳಾರಿ ಜೈಲಿನಲ್ಲಿ ದರ್ಶನ್‌ರನ್ನು ಭೇಟಿ ಮಾಡಿದ್ದ ವಕೀಲರು ಸೆಷನ್ಸ್ ಕೋರ್ಟ್‌ನಲ್ಲೇ ದರ್ಶನ್‌ಗೆ ಜಾಮೀನು ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.












Click it and Unblock the Notifications