ಬಳ್ಳಾರಿಯಲ್ಲಿ ಕೋವಿಡ್ ಕಂಟ್ರೋಲ್ ರೂಂ ಆರಂಭ
ಬಳ್ಳಾರಿ, ಏಪ್ರಿಲ್ 13; ಬೇಸಿಗೆಯ ಬಿಸಿ ಹೆಚ್ಚಾದಂತೆ ಮತ್ತೆ ಕೋವಿಡ್ ಸದ್ದು ಮಾಡುತ್ತಿದೆ. ಭಾರತದಲ್ಲಿ 24 ಗಂಟೆಯಲ್ಲಿ 10,158 ಹೊಸ ಪ್ರಕರಣಗಳು ದಾಖಲಾಗಿವೆ. ಬುಧವಾರದ ಹೆಲ್ತ್ ಬುಲೆಟಿನ್‌ನಂತೆ ಕರ್ನಾಟಕದಲ್ಲಿ ದಾಖಲಾದ ಹೊಸ ಪ್ರಕರಣಗಳು 327, ರಾಜ್ಯದ ಸಕ್ರಿಯ ಪ್ರಕರಣಗಳು1498 ಆಗಿದೆ.
ವಿವಿಧ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ಎಚ್ಚರವಹಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಮಾಸ್ಕ್ ಕಡ್ಡಾಯ, ಬೂಸ್ಟರ್ ಡೋಸ್ ಲಸಿಕೆ ನೀಡುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಕೋವಿಡ್ ಪ್ರಕರಣಗಳ ಹಿನ್ನಲೆಯಲ್ಲಿ ಎಚ್ಚರಿಕೆವಹಿಸಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ಮತ್ತು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಆರೋಗ್ಯ ಕಾಳಜಿ ಬಗ್ಗೆ ನಿಗಾವಹಿಸಲು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕೋವಿಡ್ ಕಂಟ್ರೋಲ್ ರೂಂ ಆರಂಭಿಸಲಾಗಿದೆ. ಕಂಟ್ರೋಲ್ ರೂಂ. ಸಂಖ್ಯೆ 8277856658.
ಈ ಸಂಖ್ಯೆಗೆ ಸಂಪರ್ಕಿಸಿದಾಗ ಸೂಕ್ತ ಮಾಹಿತಿ ನೀಡಿ ಸೋಂಕು ನಿಯಂತ್ರಣಕ್ಕೆ ಸಹಕರಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್. ಎಲ್. ಜನಾರ್ಧನ ಸೂಚನೆ ನೀಡಿದ್ದಾರೆ. ಬಳ್ಳಾರಿ ಜಿಲ್ಲಾಡಳಿತ ಸೂಚನೆಯಂತೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ದಿನದ ಕರ್ತವ್ಯದ ಅವಧಿಯಲ್ಲಿ ಸೋಂಕಿತರಿಗೆ ಕಂಟ್ರೋಲ್ ರೂಂ ಮೂಲಕ ಕರೆ ಮಾಡಲಾಗುತ್ತಿದ್ದು, ಸೋಂಕಿನ ತೀವ್ರತೆಯು ಇಲ್ಲದೆ ಇದ್ದರೂ ಸಹಿತ ಸಂಭಾವ್ಯ ಕೋವಿಡ್ ನಿಯಂತ್ರಣಕ್ಕಾಗಿ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕರೆ ನೀಡಲಾಗಿದೆ.
ಕೋವಿಡ್ ರೂಪಾಂತರಿ ತಳಿಯ ಸೋಂಕಿನ ಪ್ರಕರಣಗಳು ಈಗಾಗಲೇ ದೇಶಾದ್ಯಂತ ಕಂಡುಬರುತ್ತಿದ್ದು, ಮನೆಯಲ್ಲಿ ಪ್ರತ್ಯೇಕವಾಗಿದ್ದು ಆರೈಕೆ ಪಡೆಯುತ್ತಿರುವವರು ಕಂಟ್ರೋಲ್ ರೂಂಗೆ ಕರೆ ಮಾಡಿ ಸಲಹೆ ಪಡೆದುಕೊಳ್ಳಬಹುದು. ಯಾರಿಗಾದರೂ ಕೆಮ್ಮು, ಶೀತ, ನೆಗಡಿ, ಉಸಿರಾಟದ ತೊಂದರೆ, ಕಾರಣವಿಲ್ಲದೇ ಜ್ವರ ಬರುವುದು ಹಾಗೂ ಕೋವಿಡ್ ಸೋಂಕಿತ ಪ್ರದೇಶಕ್ಕೆ ಭೇಟಿ ಕೊಟ್ಟು ಪುನಃ ಊರಿಗೆ ಬಂದಲ್ಲಿ ದಯವಿಟ್ಟು ಒಮ್ಮೆ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಕೋವಿಡ್ ಸೋಂಕು ಖಚಿತಪಟ್ಟಲ್ಲಿ ತಜ್ಞರ ಸೂಚನೆಯ ಮೇರೆಗೆ ಮನೆಯಲ್ಲೇ ಪ್ರತ್ಯೇಕವಾಗಿದ್ದು ಆರೈಕೆ ಪಡೆಯಬಹುದು. ಒಂದು ವೇಳೆ ರೋಗದ ತೀವ್ರತೆ ಹೆಚ್ಚಾದರೆ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಮತ್ತು ನ್ಯೂ ಡೆಂಟಲ್ ಕಾಲೇಜಿನಲ್ಲಿ ಇತರೆ ಕೋವಿಡ್ ಸೋಂಕಿತರನ್ನು ದಾಖಲೆ ಮಾಡಿಕೊಂಡು ಚಿಕಿತ್ಸೆ ನೀಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.
ಗುಣಮುಖ ಪ್ರಮಾಣ ಏರಿಕೆ; ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದೂ ಸಹ ಗುಣಮುಖ ಪ್ರಮಾಣ ಹೆಚ್ಚಳವಾಗಿದ್ದು ಜನರು ಆತಂಕಪಡುವ ಅಗತ್ಯವಿಲ್ಲ. ದೇಶದಲ್ಲಿ ಇದುವರೆಗೆ 4.47 ಕೋಟಿ ಮಂದಿಗೆ ಕೋವಿಡ್ ಸೋಂಕು ತಗುಲಿದೆ. 5,30,965 ಜನರು ಮೃತಪಟ್ಟಿದ್ದಾರೆ. ಇದುವರೆಗೆ 4,41,92,837 ಮಂದಿ ಗುಣಮುಖಗೊಂಡಿದ್ದಾರೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ಪ್ರಮಾಣ 98.74ರಷ್ಟಿದೆ. ದೇಶದಲ್ಲಿ ಇದುವರೆಗೆ 220.66 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದುಬಂದಿದೆ.
ರೋಗ ಲಕ್ಷಣಗಳು ಕಂಡು ಬಂದರೆ; ಈಗಾಗಲೇ ಮನೆಗಳಲ್ಲಿ ಆರೈಕೆ ಪಡೆಯುತ್ತಿರುವವರಿಗೆ ಔಷಧಿಯ ಕಿಟ್‍ಗಳನ್ನು ವೈದ್ಯಕೀಯ ತಂಡ ಮನೆಗಳಿಗೆ ತೆರಳಿ ವಿತರಣೆ ಮಾಡುತ್ತಿದ್ದಾರೆ. ಕೋವಿಡ್ ಸೋಂಕಿತರು ಅನಗತ್ಯವಾಗಿ ಮನೆಗಳಿಂದ ಹೊರ ಬರದಂತೆ ಕ್ರಮವಹಿಸಬೇಕು. ಅಲ್ಲದೇ ಸಾರ್ವಜನಿಕರು ರೋಗ ಲಕ್ಷಣಗಳು ಕಂಡುಬಂದವರ ಬಳಿ ಹತ್ತಿರದಿಂದ ಮಾತನಾಡುವುದಾಗಲಿ ಅಥವಾ ಕೈಕುಲುಕುವುದಾಗಲಿ ಮಾಡಬೇಡಿ. ಕಣ್ಣು, ಮೂಗು, ಬಾಯಿಯನ್ನು ಅನಗತ್ಯವಾಗಿ ಮುಟ್ಟಿಕೊಳ್ಳಬೇಡಿ, ಕೈಗಳನ್ನು ಸಾಬೂನು ಮತ್ತು ನೀರಿನಿಂದ ಅಥವಾ ಸ್ಯಾನಿಟೈಸರ್‌ನಿಂದ ತೊಳೆದುಕೊಳ್ಳಲು, ಅಗತ್ಯ ಸಂದರ್ಭಗಳಲ್ಲಿ ಮಾಸ್ಕ್ ಧರಿಸಲು ಜನರಿಗೆ ಮನವಿ ಮಾಡಲಾಗಿದೆ.
ಅಲ್ಲದೇ ಕಂಟ್ರೋಲ್ ರೂಂನಿಂದ ಫೋನ್ ಮೂಲಕ ಧೈರ್ಯ ತುಂಬುವ ಕಾರ್ಯವನ್ನು ಮಾಡಲಾಗುತ್ತಿದ್ದು, ದೂರವಾಣಿ ಕರೆಗಳು ಬಂದಾಗ ಸಾವಧಾನದಿಂದ ಉತ್ತರಿಸಿ, ನೀಡುವ ಸಲಹೆ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ.












Click it and Unblock the Notifications