Minister Nagendra :ತೆಲಂಗಾಣದಲ್ಲಿ ಬಿಜೆಪಿ ಹಾಗೂ ಬಿಆರ್‌ಎಸ್‌ನಿಂದ ಕಾಂಗ್ರೆಸ್‌ಗೆ ಭಯ ಇದೆ: ಸಚಿವ ನಾಗೇಂದ್ರ
ಬಳ್ಳಾರಿ ಡಿಸೆಂಬರ್ 2: ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸವಿದೆ. ಆದರೇ ಬಿಜೆಪಿ ಹಾಗೂ ಬಿಆರ್‌ಎಸ್ ಪಕ್ಷದಿಂದ ಕಾಂಗ್ರೆಸ್‌ಗೆ ಭಯ ಇದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರ ಸಚಿವ ನಾಗೇಂದ್ರ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿವೆ. ಆದರೇ ನಮ್ಮ ಶಾಸಕರಿಗೆ ಬಿಜೆಪಿ ಮತ್ತು ಬಿಆರ್‌ಎಸ್ ಪಕ್ಷದವರು ಸೇರಿ ಏನಾದರೂ ಮಾಡುತ್ತಾರೆ ಎನ್ನುವ ಭಯ ಇದೆ.

ಹೀಗಾಗಿ ತೆಲಂಗಾಣ ಚುನಾವಣೆಯಲ್ಲಿ ಭಾಗಿಯಾದ ಎಲ್ಲ ಶಾಸಕರಿಗೆ ತುರ್ತು ಕರೆ ಬಂದಿದೆ. ಸಂಜೆ ಒಳಗೆ ತೆಲಂಗಾಣ ತಲುಪುವಂತೆ ಎಐಸಿಸಿ ಸೂಚನೆ ನೀಡಿದೆ. ಆದ ಕಾರಣ ನಾವು ಇಂದು ಸಂಜೆ ಒಳಗೆ ತೆಲಂಗಾಣಕ್ಕೆ ತಲುಪಲಿದ್ದೇವೆ ಎಂದು ಸಚಿವ ನಾಗೇಂದ್ರ ಹೇಳಿದರು.
ನಮಗೆ ನಮ್ಮ ಶಾಸಕರ ಮೇಲೆ ನಂಬಿಕೆ ಇದೆ, ಆದರೆ ಬಿಜೆಪಿ ದೇಶದಲ್ಲಿ ಒಂದು ಕೆಟ್ಟ ಸಂಪ್ರದಾಯದಕ್ಕೆ ನಾಂದಿ ಹಾಡಿದೆ. ಬಿಜೆಪಿ ಗೆದ್ದವರಿಗೆ ಗಾಳ ಹಾಕುವ ಪ್ಲ್ಯಾನ್ ಮಾಡಿದೆ, ಅದಕ್ಕೆ ನಮ್ಮ ರಾಜ್ಯವೇ ಒಂದು ಉದಾಹರಣೆ ಎಂದು ತಿಳಿಸಿದ ಸಚಿವರು, ನಮ್ಮ ರಾಜ್ಯದಲ್ಲಿ ನಮ್ಮ ಶಾಸಕರನ್ನು ಕರೆದುಕೊಂಡು, ಬಿಜೆಪಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಿದ್ದರು.
ಅದು ನಮ್ಮ ಕಣ್ಣ ಮುಂದೆ ನಡೆದ ಘಟನೆ. ಹೀಗಾಗಿ ತೆಲಂಗಾಣದಲ್ಲಿ ಮತ್ತೆ ಆಪರೇಷನ್, ಮಾಡುವ ಸಾಧ್ಯತೆ ಇದೆ. ನಮ್ಮ ಶಾಸಕರಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ, ಹೀಗಾಗಿ ನಮ್ಮ ಶಾಸಕರ ರಕ್ಷಣೆಗೆ ನಾವು ಹೋಗುತ್ತಿದ್ದೆವೆ ಎಂದು ಅವರು ಹೇಳಿದರು.
ಅಪರೇಷನ್ ಹಸ್ತದ ಪ್ರಯೋಗ ಏನಾದರೂ ತೆಲಂಗಾಣದಲ್ಲಿ ಆಗಲಿದೇಯೇ ಎಂಬ ಪ್ರಶ್ನೆಗೆ ಉತ್ತರಿಸದ ಅವರು, ತೆಲಂಗಾಣದಲ್ಲಿ ನಾವು ಆಪರೇಷನ್ ಮಾಡಲ್ಲ, ನಮ್ಮ ತತ್ವ ಸಿದ್ದಾಂತ ನಂಬಿ ಬೇರೆ ಪಕ್ಷದವರು ಬಂದರೆ ಬರಲಿ ಎಂದು ಸಚಿವ ನಾಗೇಂದ್ರ ಹೇಳಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯ?
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ಬಹುತೇಕ ಎಲ್ಲಾ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ಕಾಂಗ್ರೆಸ್ 60-70 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ರಾಜಕೀಯ ವಿಶ್ಲೇಷಕರು ಕೂಡ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳಿಗೆ ಸರ್ಕಾರ ರಚಿಸಲು ಬಹುಮತ ಸಿಗುವುದಿಲ್ಲ. ಬಿಜೆಪಿ ಮತ್ತು ಎಂಐಎಂ ಕಿಂಗ್ ಮೇಕರ್ ಆಗುತ್ತವೆ ಎಂದು ಘೋಷಿಸಿದರು.
ಒಂದು ವೇಳೆ ಇದೇ ಫಲಿತಾಂಶ ಬಂದರೆ ಗೆಲ್ಲುವ ಎಲ್ಲಾ ಶಾಸಕರನ್ನು ಡಿಸೆಂಬರ್ 3 ರಂದು ರೆಸಾರ್ಟ್ಗೆ ಸ್ಥಳಾಂತರಿಸಲು ಕಾಂಗ್ರೆಸ್ ಮುಂದಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಶಾಸಕರಿಗಾಗಿ ಈಗಾಗಲೇ ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವರದಿಯಾಗಿದೆ.
ಚುನಾವಣಾ ಫಲಿತಾಂಶದ ಆಧಾರದ ಮೇಲೆ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಸ್ಥಳಾಂತರಿಸಬೇಕೇ ಅಥವಾ ಬೇಡವೇ ಎಂಬುದನ್ನು ಕಾಂಗ್ರೆಸ್ ನಿರ್ಧರಿಸಲಿದೆ. ಸಮೀಕ್ಷೆಯಂತೆ ನಡೆದರೆ ಗೆಲ್ಲುವ ಶಾಸಕರನ್ನು ತಕ್ಷಣವೇ ಹೈದರಾಬಾದ್ ನಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗುವುದು.
ಇದಕ್ಕಾಗಿ ವಿಶೇಷ ವಿಮಾನದ ವ್ಯವಸ್ಥೆ ಮಾಡಲು ಕಾಂಗ್ರೆಸ್ ಮುಂದಾಗಿದೆಯಂತೆ. ಈಗಾಗಲೇ ಕಾಂಗ್ರೆಸ್ನಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳು ಯಾವುದೇ ಕ್ಷಣದಲ್ಲಿ ಬೆಂಗಳೂರಿಗೆ ತೆರಳಲು ಸಿದ್ಧರಾಗಿರುವಂತೆ ಸೂಚನೆ ನೀಡಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.












Click it and Unblock the Notifications