ಮುಂಗಾರು ಪೂರ್ವ ಮಳೆ ಹಾನಿ; 72 ಗಂಟೆಯೊಳಗೆ ಪರಿಹಾರ
ಬಳ್ಳಾರಿ, ಮೇ 29: "ಪೂರ್ವ ಮುಂಗಾರು ಮಳೆ ಚುರುಕುಗೊಂಡಿರುವ ಹಿನ್ನಲೆಯಲ್ಲಿ ಮಳೆಯಿಂದಾಗುವ ಹಾನಿಯನ್ನು ಸೂಕ್ತವಾಗಿ ಪರಿಶೀಲನೆ ನಡೆಸಿ 72 ಗಂಟೆಯೊಳಗೆ ಹಾನಿಗೆ ಪರಿಹಾರ ಒದಗಿಸಲು ಮುಂದಾಗಬೇಕು" ಎಂದು ಬಳ್ಳಾರಿ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಕೆ. ವಿ. ತ್ರಿಲೋಕಚಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಳ್ಳಾರಿ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

ಸಭೆಯಲ್ಲಿ ಮಾತನಾಡಿದ ಡಾ. ಕೆ. ವಿ. ತ್ರಿಲೋಕಚಂದ್ರ, "ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿಯನ್ವಯ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವವಿದ್ದು, ಈಗಾಗಲೇ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಆಯಾ ತಾಲ್ಲೂಕು ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಈ ಕುರಿತು ಎಚ್ಚರ ವಹಿಸಬೇಕು" ಎಂದರು.
ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಮಾತನಾಡಿ, "ಜಿಲ್ಲೆಯಲ್ಲಿ ವಾರ್ಷಿಕ 599.5 ಮಿ. ಮೀ. ವಾಡಿಕೆ ಮಳೆಯಿದ್ದು, ಕಳೆದ ವರ್ಷ ಮೇ 20 ರವರೆಗೆ 53.6 ಮಿ. ಮೀ. ಮಳೆಯಾಗಿದೆ ಹಾಗೂ ಪ್ರಸ್ತುತ ವರ್ಷ 88.4 ಮಿ. ಮೀ. ಮಳೆಯಾಗಿ ಸುಮಾರು ಶೇ.64 ರಷ್ಟು ಹೆಚ್ಚು ಮಳೆ ಸುರಿದಿದೆ. ಅದೇರೀತಿಯಾಗಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಸಮರ್ಪಕವಾಗಿದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಆಭಾವದ ಕೊರತೆಯಿಲ್ಲ" ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, "ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಾಗದಂತೆ ಎಚ್ಚರವಹಿಸಬೇಕು. ದಾಸ್ತಾನು ಲಭ್ಯತೆ ಕುರಿತು ರೈತರಿಗೆ ಮಾಹಿತಿ ನೀಡಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿನ ಕುರಿತು ಮಾಹಿತಿ ಪ್ರದರ್ಶಿಸಬೇಕು. ರೈತರು ಕಾಯುವುದು, ನೂಕು-ನುಗ್ಗಲು ಹಾಗೂ ಇತರೆ ವ್ಯವಸ್ಥೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು" ಎಂದು ಸೂಚಿಸಿದರು.
"ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು ಮೂಲಗಳ ಬಗ್ಗೆ ನಿಗಾವಹಿಸಬೇಕು. ಕಲುಷಿತ ನೀರು ಕಲಬೆರಕೆಗೊಳ್ಳದಂತೆ ಎಚ್ಚರವಹಿಸಬೇಕು. ಮುಖ್ಯವಾಗಿ ಕುಡಿಯುವ ನೀರಿನ ಪೈಪ್ ಲೈನ್‌ಗಳು ಸೋರಿಕೆ ಕಂಡುಬಂದಲ್ಲಿ ಕೂಡಲೇ ರಿಪೇರಿ ಮಾಡಿಸಬೇಕು" ಎಂದರು.
"ಮೇ 29 ರಿಂದ ಶಾಲಾ ವಿಭಾಗದ ತರಗತಿಗಳು ಆರಂಭಗೊಳ್ಳಲಿದ್ದು, ಎಲ್ಲಾ ಶಾಲೆಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು. ಪಠ್ಯ-ಪುಸ್ತಕ ವಿತರಣೆ ಮಾಡಬೇಕು. ಶಾಲೆಗಳ ಅವರಣದಲ್ಲಿ ಹೊರಗಿನವರು ಬಾರದಂತೆ ನೋಡಿಕೊಳ್ಳಬೇಕು ಈ ಕುರಿತು ಬಿಆರ್‌ಓ ಮತ್ತು ಸಿಆರ್‌ಪಿಗಳಿಗೆ ನಿರ್ದೇಶನ ನೀಡಬೇಕು" ಎಂದರು.
"ಜಿಲ್ಲೆಯಲ್ಲಿ ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಅಭಿವೃದ್ಧಿ ಇಲಾಖೆಗಳ ಕಾಮಗಾರಿಗಳು ಗುಣಮಟ್ಟತೆ ಕುಂಠಿತಗೊಳ್ಳುತ್ತಿವೆ. ಶಾಲೆಯೊಂದರ ರಿಪೇರಿ ಕಾಮಗಾರಿಯು ಮತ್ತೆ ರಿಪೇರಿಗೆ ಬಂದಿದ್ದು, ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು" ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ನಿರ್ದೇಶನ ನೀಡಿದರು.












Click it and Unblock the Notifications