ಫೆ.23ರಂದು ಬಳ್ಳಾರಿಗೆ ಕೇಂದ್ರ ಸಚಿವ ಅಮಿತ್ ಶಾ: ಸಂಡೂರಿನಲ್ಲಿ ಬಿಜೆಪಿ ಬೃಹತ್ ಸಮಾವೇಶ
ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆಬ್ರವರಿ 23ರಂದು ಗಣಿನಾಡು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಸಂಡೂರಿನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಬಳ್ಳಾರಿ, ಫೆಬ್ರವರಿ 18: ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆಬ್ರವರಿ 23ರಂದು ಗಣಿನಾಡು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಸಂಡೂರಿನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಳ್ಳಾರಿಗೆ ಆಗಮಿಸಲಿರುವ ಅಮಿತ್ ಶಾ ಅವರು, ಸಂಡೂರು ತಾಲೂಕಿನ ತೋರಣಗಲ್ಲು ಪಟ್ಟಣದಲ್ಲಿ ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಪ್ರಮುಖರ ಸಭೆ ನಡೆಸಲಿದ್ದಾರೆ ಎಂದರು.
ಸಂಡೂರಿನಲ್ಲಿ ಆಯೋಜಿಸಿದ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ , ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ನಮ್ಮ ಸರ್ಕಾರದ ಅನೇಕ ಸಚಿವರು ಭಾಗವಹಿಸಲಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದರು.

ಮಾತು ಮುಂದುವರಿಸಿದ ಶ್ರೀರಾಮುಲು, ಬಳ್ಳಾರಿ ಜಿಲ್ಲೆಯಲ್ಲೇ ಸ್ಪರ್ಧೆ ಮಾಡುವೆ, ಇದು ಖಚಿತ. ಬಳ್ಳಾರಿ ಗ್ರಾಮೀಣ ಅಥವಾ ಸಂಡೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಉದ್ದೇಶ ನನ್ನದಾಗಿದೆ. ಎಲ್ಲದಕ್ಕೂ ವರಿಷ್ಠರ ತೀರ್ಮಾನವೇ ಅಂತಿಮ, ಈ ಹಿಂದೆ ಸಂಸದರಾಗಿದ್ದಾಗ ಯಡಿಯೂರಪ್ಪ ಹಾಗೂ ನನಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ವರಿಷ್ಠರು ಅವಕಾಶ ಕಲ್ಪಿಸಿದರು. ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ 4ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು ಎಂದು ಹೇಳಿದರು.
ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಬಿಜೆಪಿಯ ಕಮಲ ಎಲ್ಲ ಕ್ಷೇತ್ರದಲ್ಲೂ ಹಾರಾಡಿದೆ. ವರಿಷ್ಠರಿಗೆ ನಾನು ಸ್ಪರ್ಧಿಸುವ ಕ್ಷೇತ್ರಗಳ ಕುರಿತು ಮನವರಿಕೆ ಮಾಡುವೆ, ಯಾವುದೇ ಕಾರಣಕ್ಕೂ ವರಿಷ್ಠರ ತೀರ್ಮಾನವೇ ಅಂತಿಮ, ನಾನು ಅಲ್ಲ ಎಲ್ಲರೂ ಪಾಲನೆ ಮಾಡಬೇಕು ಎಂದು ಹೇಳಿದರು.

ರಾಜ್ಯ ಬಜೆಟ್ ವೇಳೆ ಕಾಂಗ್ರೆಸ್ ನಾಯಕರ ವರ್ತನೆ ಬಗ್ಗೆ ಮಾತನಾಡಿದ ಶ್ರೀರಾಮುಲು, ವಿಪಕ್ಷ ನಾಯಕರು ಬಜೆಟ್ ವೇಳೆ ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದಿದ್ದರು. ಶಿಷ್ಟಾಚಾರ ಪಾಲಿಸದೆ ಅಗೌರವ ತೋರುವ ಕೆಲಸ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ಡ್ರಾಮಾ ಆರಂಭಿಸಿದ್ದು, ಅದೊಂದು ಡ್ರಾಮಾ ಕಂಪನಿ ಎಂದು ಲೇವಡಿ ಮಾಡಿದರು.
ಇನ್ನು ರಾಜ್ಯ ಬಜೆಟ್ ಬಗ್ಗೆ ಮಾತನಾಡಿದ ಅವರು, ಚುನಾವಣೆಯ ದೃಷ್ಟಿಯನ್ನು ಇಟ್ಟುಕೊಂಡು ಬಜೆಟ್ ಮಂಡಿಸಿಲ್ಲ, ಆರ್ಥಿಕ ದೃಷ್ಟಿಕೋನವಿಟ್ಟು ಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ಬಜೆಟ್ ಜನರಿಗೆ ತಲುಪದಂತೆ ಮಾಡಬೇಕೆಂಬುದು ಕಾಂಗ್ರೆಸ್‌ನ ಉದ್ದೇಶವಿತ್ತು. ಮುಂದಿನ ದಿನಗಳಲ್ಲಿ ಜನರೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.












Click it and Unblock the Notifications