'ಕೇರಳ ಸ್ಟೋರಿ' ನೋಡುವಂತೆ ವಿದ್ಯಾರ್ಥಿನಿಯರಿಗೆ ಕಾಲೇಜು ಮಂಡಳಿ ಆದೇಶ : ಇಳಕಲ್ ಕಾಲೇಜಿನ ನಡೆಗೆ ಆಕ್ರೋಶ
ವಿದ್ಯಾರ್ಥಿಗಳು ಕಾಲೇಜು ಬಂಕ್ ಮಾಡಿ ಸಿನಿಮಾಗೆ ಹೋದರೆ ಕಾಲೇಜು ಪ್ರಿನ್ಸಿಪಾಲರು ಬುದ್ದಿ ಹೇಳುವುದು ಸಹಜ, ಆದರೆ ಇಲ್ಲೊಂದು ಕಾಲೇಜಿನಲ್ಲಿ ಮಾತ್ರ ವಿದ್ಯಾರ್ಥಿನಿಯರಿಗೆ ಸಿನಿಮಾಗೆ ಹೋಗಲೇಬೇಕು ಎಂದು ಸ್ವತಃ ಪ್ರಿನ್ಸಿಪಾಲರೇ ಆದೇಶ ಹೊರಡಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಹೌದು, ಸದ್ಯ ದೇಶಾದ್ಯಂತ ಹೆಚ್ಚಿನ ಸದ್ದು ಮಾಡುತ್ತಿರುವ ಕೇರಳ ಸ್ಟೋರಿಯನ್ನು ವಿದ್ಯಾರ್ಥಿನಿಯರು ಕಡ್ಡಾಯವಾಗಿ ನೋಡಬೇಕು ಎಂದು ಪ್ರಿನ್ಸಿಪಾಲ್ ಆದೇಶಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್‌ನ 'ವಿಜಯ ಮಹಾಂತೇಶ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು' ಪ್ರಿನ್ಸಿಪಲ್ ತನ್ನ ಕಾಲೇಜು ವಿದ್ಯಾರ್ಥಿನಿಯರಿಗೆ ಇಂತಹದ್ದೊಂದು ಆದೇಶ ನೀಡಿದ್ದು, ಅವರ ಸಹಿ ಇರುವ ಪತ್ರ ವೈರಲ್ ಆಗಿದೆ.

ಮೊದಲನೇ ವರ್ಷದ ಬಿಎಎಂಎಸ್ ನಿಂದ ಅಂತಿಮ ವರ್ಷದ ಬಿಎಎಂಎಸ್ ವಿದ್ಯಾರ್ಥಿನಿಯರಿಗೆ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ, ಮೇ 24 ರಂದು ಇಳಕಲ್‌ನಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಕೇರಳ ಸ್ಟೋರಿ ಸಿನಿಮಾ ನೋಡುವಂತೆ ಆದೇಶ ನೀಡಿದ್ದಾರೆ. ಪತ್ರದಲ್ಲಿ ಪ್ರಿನ್ಸಿಪಾಲ್, ಡಾ. ಕೆ.ಸಿ. ದಾಸ್ ಎಂದು ಸಹಿ ಕೂಡ ಮಾಡಲಾಗಿದೆ.
ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಉಚಿತ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದ್ದು, ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗಿನ ತರಗತಿಗಳು ಮುಗಿದ ನಂತರ ಸಿನಿಮಾ ನೋಡಲು ಹೋಗುವಂತೆ ಕೇಳಲಾಗಿದೆ. ಮಧ್ಯಾಹ್ನ ನಡೆಯುವ ತರಗತಿಗಳನ್ನು ರದ್ದು ಮಾಡಲಾಗಿದೆ, ಎಲ್ಲರೂ ಕಡ್ಡಾಯವಾಗಿ ಸಿನಿಮಾ ನೋಡಲೇಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ವಿವಾದಕ್ಕೆ ಕಾರಣವಾದ ಕಾಲೇಜಿನ ನಡೆ
ಈ ಆದೇಶದ ಪ್ರತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಪ್ರಿನ್ಸಿಪಾಲರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಈ ರೀತಿ ಬಲವಂತವಾಗಿ ಚಲನಚಿತ್ರ ನೋಡಿ ಎನ್ನುವುದು ಸರಿಯಲ್ಲ ಎಂದು ಹಲವರು ಕಾಲೇಜು ಆಡಳಿತ ಮಂಡಳಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲವರು ವಿದ್ಯಾರ್ಥಿನಿಯರಿಗೆ ಇಂತಹ ಸಮಸ್ಯೆಗಳ ಅರಿವು ಮೂಡಬೇಕು ಆಗಲೇ ಹಿಂದೂ ಯುವತಿಯರಿಗೆ ಎಚ್ಚರಿಕೆ ಇರುತ್ತದೆ, ಪ್ರಿನ್ಸಿಪಾಲ್ ಮಾಡಿದ್ದು ಸರಿ ಇದೆ ಎಂದು ಬೆಂಬಲ ಸೂಚಿಸಿದ್ದಾರೆ.
ಸಿನಿಮಾದಲ್ಲಿ ಏನಿದೆ?
'ಕೇರಳ ಸ್ಟೋರಿ' ಒಂದು ನೈಜ ಘಟನೆ ಆಧಾರಿತ ಸಿನಿಮಾ ಎಂದು ಚಿತ್ರ ತಂಡ ಹೇಳಿಕೊಂಡಿದೆ. ಕೇರಳದ ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ಯುವಕರನ್ನು ಮದುವೆಯಾಗುವುದು, ಮತಾಂತರ, ಲವ್ ಜಿಹಾದ್, ಭಯೋತ್ಪಾದನೆ ಇತ್ಯಾದಿ ವಿಚಾರಗಳ ಬಗ್ಗೆ ಹೇಳಲಾಗಿದೆ. ಚಿತ್ರಕ್ಕೆ ದೇಶದಲ್ಲಿ ಜನಮೆಚ್ಚುಗೆ ವ್ಯಕ್ತವಾಗಿದ್ದು, 200 ಕೋಟಿ ರುಪಾಯಿ ಗಳಿಸಿದೆ ಎಂದು ವರದಿಯಾಗಿದೆ.












Click it and Unblock the Notifications